ದಸಂಸ ಯಿಂದ ವಿದ್ಯಾರ್ಥಿಗಳಿಗೆ ಸನ್ಮಾನ : ನಿರಂತರ ಪ್ರಯತ್ನದಿಂದ ಮಾತ್ರ ಶೈಕ್ಷಣಿಕ ಸಾಧನೆ ಸಾಧ್ಯ : ನ್ಯಾಯಾಧೀಶೆ ನೂರುನ್ನೀಸ ಅಭಿಪ್ರಾಯ

ಮಡಿಕೇರಿ ಸೆ.23 : ನಿರಂತರ ಪ್ರಯತ್ನದಿಂದ ಮಾತ್ರ ಶೈಕ್ಷಣಿಕ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಸದಸ್ಯ ಕಾರ್ಯದರ್ಶಿ ನೂರುನ್ನೀಸ ಅಭಿಪ್ರಾಯ ವ್ಯಕ್ತಪಟ್ಟಿದ್ದಾರೆ.
ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಮಡಿಕೇರಿ ನಗರ ಘಟಕದ ವತಿಯಿಂದ ನಗರದ ಪತ್ರಿಕಾ ಭವನದಲ್ಲಿ ನಡೆದ ಪ್ರತಿಭಾನ್ವಿತ ವಿದ್ಯಾರ್ಥಿಗಳ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡು ವಿದ್ಯಾರ್ಥಿಗಳನ್ನು ಸನ್ಮಾನಿಸಿ ಮಾತನಾಡಿದರು.
ಪ್ರಸ್ತುತ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಸಾಧನೆ ಮಾಡಲು ವಿಫುಲ ಅವಕಾಶಗಳಿದ್ದು, ಉನ್ನತ ಗುರಿಯನ್ನು ಹೊಂದಿರಬೇಕು. ಕಲಿಕೆಗೆ ಪೂರಕವಾದ ಎಲ್ಲಾ ವಿಚಾರಗಳನ್ನು ಸದ್ಬಳಕೆ ಮಾಡಿಕೊಂಡು ಗುರಿ ಸಾಧಿಸಬೇಕು ಎಂದು ಸಲಹೆ ನೀಡಿದರು.
ಪೋಷಕರು ತಮ್ಮ ಮಕ್ಕಳನ್ನು ಮಾದರಿ ಪ್ರಜೆಗಳನ್ನಾಗಿ ರೂಪಿಸುವ ನಿಟ್ಟಿನಲ್ಲಿ ದೊಡ್ಡ ದೊಡ್ಡ ಕನಸುಗಳನ್ನು ಕಾಣಲು ಪ್ರೇರಣೆ ನೀಡಬೇಕು. ನಮ್ಮಲ್ಲಿರುವ ಸಕಾರಾತ್ಮಕ ಶಕ್ತಿಯನ್ನು ವೃದ್ಧಿಸಿಕೊಂಡು ಯಶಸ್ಸಿನೆಡೆಗೆ ಸಾಗಬೇಕು. ಆ ಮೂಲಕ ಉತ್ತಮ ವ್ಯಕ್ತಿತ್ವವನ್ನು ಬೆಳೆಸಿಕೊಂಡು ಸಮಾಜಕ್ಕೆ ಕೊಡುಗೆ ನೀಡುವಂತಾಗಬೇಕು ಎಂದು ನೂರುನ್ನೀಸ ಅವರು ಕಿವಿಮಾತು ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನಗರ ಪೊಲೀಸ್ ಠಾಣಾ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ, ವಿದ್ಯಾರ್ಥಿಗಳು ತಮ್ಮ ವಿದ್ಯಾರ್ಥಿ ಜೀವನದಲ್ಲೇ ಮುಂದಿನ ಭವಿಷ್ಯದ ಬಗ್ಗೆ ಗುರಿಯನ್ನು ಹೊಂದಬೇಕು ಮತ್ತು ಉನ್ನತ ಹುದ್ದೆಗಳನ್ನು ಅಲಂಕರಿಸಬೇಕೆಂದು ಕರೆ ನೀಡಿದರು. ಭಯ ಅಜ್ಞಾನವನ್ನು ಉಂಟು ಮಾಡಿದರೆ, ಅಜ್ಞಾನ ಭಯವನ್ನು ಉಂಟು ಮಾಡುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ನಿರಂತರ ಪರಿಶ್ರಮದಿಂದ ವಿದ್ಯೆಯನ್ನು ಅಸ್ತ್ರವನ್ನಾಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ದಲಿತ ಸಂಘರ್ಷ ಸಮಿತಿ ನಿರಂತರವಾಗಿ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸುವ ಮೂಲಕ ಪ್ರೋತ್ಸಾಹ ನೀಡುತ್ತಿದ್ದು, ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯುವಂತಾಗಲಿ ಎಂದರು.
ಕುಶಾಲನಗರ ಅಂಚೆ ಇಲಾಖೆ ಅಧೀಕ್ಷಕ ಟಿ.ಪಿ.ಶ್ರೀನಿವಾಸ್ ಅವರು ಮಾತನಾಡಿ, ಶಿಕ್ಷಣವನ್ನು ಮೂಲ ಮಂತ್ರವನ್ನಾಗಿಸಿಕೊಂಡು ವಿದ್ಯಾವಂತರಾಗಿ ದೇಶವನ್ನು ಮುನ್ನಡೆಸಿದಾಗ ಮಾತ್ರ ಸದೃಢ ಸಮಾಜ ನಿರ್ಮಾಣವಾಗಲು ಸಾಧ್ಯ ಎಂದರು.
ವಿದ್ಯೆ ಸಾಮಾಜಿಕ ಅಸಮಾನತೆಯನ್ನು ದೂರ ಮಾಡುತ್ತದೆ. ವಿದ್ಯಾರ್ಥಿಗಳು ಆತ್ಮಸ್ಥೈರ್ಯವನ್ನು ಕಳೆದುಕೊಳ್ಳದೆ ಜೀವನವನ್ನು ಉತ್ತಮ ಮಾರ್ಗದಲ್ಲಿ ರೂಪಿಸಿಕೊಳ್ಳಬೇಕು. ಪೋಷಕರು ತಮ್ಮ ಮಕ್ಕಳಿಗೆ ಮಾರ್ಗದರ್ಶನ ನೀಡಬೇಕೆ ಹೊರತು ಒತ್ತಡವನ್ನು ಹೇರಬಾರದು ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಡಿಎಸ್‍ಎಸ್‍ನ ಜಿಲ್ಲಾ ಸಂಚಾಲಕ ಹೆಚ್.ಎಲ್.ದಿವಾಕರ್ ಅವರು, ದಲಿತ ಸಂಘರ್ಷ ಸಮಿತಿ ಬಡ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕಳೆದ 31 ವರ್ಷಗಳಿಂದ ಕಾರ್ಯಕ್ರಮಗಳನ್ನು ರೂಪಿಸುತ್ತಾ ಬರುತ್ತಿದ್ದು, ಮುಂದಿನ ದಿನಗಳಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗೆ ಸಂಬಂಧಿಸಿದ ತರಬೇತಿಗಳನ್ನು ನೀಡಲಾಗುವುದೆಂದರು. ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳನ್ನು ಗುರುತಿಸುವ ಕಾರ್ಯವನ್ನು ಸಮಿತಿ ಮಾಡಲಿದೆ ಎಂದ ಅವರು ಬಡ ವಿದ್ಯಾರ್ಥಿಗಳು ಶೈಕ್ಷಣಿಕ ಸಾಧನೆಯ ಮೂಲಕ ಇತರರಿಗೆ ಮಾದರಿಯಾಗಿ ಗುರುತಿಸಿಕೊಳ್ಳುವಂತಾಗಬೇಕು ಎಂದು ಕರೆ ನೀಡಿದರು.
ಸಮಿತಿಯ ಮಡಿಕೇರಿ ತಾಲ್ಲೂಕು ಸಂಚಾಲಕ ಎ.ಪಿ.ದೀಪಕ್ ಮಾತನಾಡಿ, ಶಿಕ್ಷಣದಿಂದ ಮಾತ್ರ ಉನ್ನತ ಹುದ್ದೆ ಮತ್ತು ಸಮಾಜದಲ್ಲಿ ಗೌರವ ದೊರೆಯಲು ಸಾಧ್ಯವೆಂದು ಅಭಿಪ್ರಾಯಪಟ್ಟರು. ಅವಕಾಶ ವಂಚಿತರು ನಿರಂತರ ಪರಿಶ್ರಮದಿಂದ ಸಮಾಜದ ಮುಖ್ಯ ವಾಹಿನಿಗೆ ಬರುವಂತಾಗಬೇಕು, ಆ ಮೂಲಕ ಇತರರಿಗೆ ಪ್ರೇರಣೆಯಾಗಬೇಕು ಎಂದರು.
ವಿದ್ಯಾರ್ಥಿಗಳ ಬದುಕಿನಲ್ಲಿ ಹೊಸ ಬೆಳಕನ್ನು ಮೂಡಿಸುವ ಶಿಕ್ಷಕರು ಹಾಗೂ ಅತಿ ಹೆಚ್ಚು ಅಂಕ ಗಳಿಸುವ ವಿದ್ಯಾರ್ಥಿಗಳಿಗೆ ಸಮಿತಿ ಪ್ರೋತ್ಸಾಹ ನೀಡುತ್ತಾ ಬರುತ್ತಿದೆ ಎಂದು ದೀಪಕ್ ಹೇಳಿದರು.
ಕಾರ್ಯಕ್ರಮದಲ್ಲಿ ಅತಿಥಿಗಳು ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಿ, ಪ್ರೋತ್ಸಾಹಿಸಿದರು. ಜಿಲ್ಲಾಸ್ಪತ್ರೆಯ ಸ್ತ್ರೀರೋಗ ತಜ್ಞೆ ಡಾ.ಸೌಮ್ಯ ಪ್ರಕಾಶ್ ಉಪಸ್ಥಿತರಿದ್ದರು.
ದಲಿತ ಸಂಘರ್ಷ ಸಮಿತಿಯ ವಿಭಾಗೀಯ ಸಂಚಾಲಕ ಎನ್.ವೀರಭದ್ರಯ್ಯ ಅವರು ಸ್ವಾಗತಿಸಿ, ವಂದಿಸಿದರು. ಫೋಟೋ :: ದಲಿತ ಸಂಘರ್ಷ