ಕೊರತೆಗಳ ಜೊತೆಯಲ್ಲೇ ಕೊಡಗು ಪೌರ ಕಾರ್ಮಿಕರ ನಿತ್ಯ ಜೀವನ : ಒತ್ತಡದ ನಡುವೆ ದುಡಿಮೆ, ಇರಲು ಸೂರಿಲ್ಲ : ಸರ್ಕಾರದ ಸೌಲಭ್ಯ ಸಾಕಾಗಲ್ಲ

23/09/2020

ಮಡಿಕೇರಿ ಸೆ.23 : ಬೆಟ್ಟ, ಗುಡ್ಡ, ತಗ್ಗು ಪ್ರದೇಶಗಳಿಂದ ಕೂಡಿರುವ ಕೊಡಗು ಜಿಲ್ಲೆಯಲ್ಲಿ ಆರು ತಿಂಗಳ ಕಾಲ ಸುರಿಯುವ ಜಡಿಮಳೆಯಲ್ಲಿ, ಮತ್ತಾರು ತಿಂಗಳ ಹವಾಗುಣದ ಏರುಪೇರುಗಳ ನಡುವೆ ಗ್ರಾಮ, ಪಟ್ಟಣ, ನಗರದ ಕೊಳೆ ತೊಳೆಯುವ ಪೌರ ಕಾರ್ಮಿಕರ ಜೀವನ ಅಷ್ಟೊಂದು ಸುಖಕರವಾಗಿಲ್ಲ.
ಒತ್ತಡದ ನಡುವೆಯೇ ದುಡಿಯಬೇಕು, ಬೆಳಗ್ಗೆಯಿಂದ ಸಂಜೆಯವರೆಗೆ ಸಾರ್ವಜನಿಕ ಪ್ರದೇಶಗಳ ತ್ಯಾಜ್ಯಗಳನ್ನು ತೆಗೆದು ರಾತ್ರಿ ನೆಮ್ಮದಿಯಾಗಿ ನಿದ್ರಿಸಬೇಕೆಂದರೆ ಸೂಕ್ತ ಆಶ್ರಯವಿಲ್ಲ. ಸರ್ಕಾರದ ಸೌಲಭ್ಯಗಳು ಮಲೆನಾಡು ಜಿಲ್ಲೆ ಕೊಡಗಿನ ಕಾರ್ಮಿಕರಿಗೆ ಎಲ್ಲಿಗೂ ಸಾಕಾಗದ ಕಾರಣ ಕೊರತೆಗಳ ಜೊತೆಯಲ್ಲೇ ನಿತ್ಯ ಜೀವನವನ್ನು ಸಾಗಿಸಬೇಕಾದ ದುಸ್ಥಿತಿ ಪೌರ ಕಾರ್ಮಿಕರದ್ದಾಗಿದೆ.
ಜಿಲ್ಲಾ ಕೇಂದ್ರ ಸ್ಥಾನ ಮಡಿಕೇರಿಯಲ್ಲಿ ನಗರಸಭೆಯ ಆಡಳಿತವಿದ್ದು, 2011 ರ ಜನಗಣತಿಯ ಪ್ರಕಾರ ನಗರದಲ್ಲಿ 33,381 ರಷ್ಟು ಜನರಿದ್ದಾರೆ. ಇವರ ಜೊತೆಯಲ್ಲಿ ಸಾವಿರಾರು ಪ್ರವಾಸಿಗರೂ ಬಂದು ಹೋಗುತ್ತಾರೆ. ಇಷ್ಟು ಮಂದಿ ಸೃಷ್ಟಿಸುವ ತ್ಯಾಜ್ಯಗಳನ್ನು ವಿಲೇವಾರಿ ಮಾಡಲು, ಚರಂಡಿಗಳನ್ನು ಶುಚಿಗೊಳಿಸಲು, ರಸ್ತೆ ಬದಿಯ ಕಾಡುಗಳನ್ನು ಕಡಿಯಲು ಇರುವ ಕಾರ್ಮಿಕರ ಸಂಖ್ಯೆ 19 ಖಾಯಂ ಮತ್ತು 23 ಮಂದಿ ತಾತ್ಕಾಲಿಕ ಕಾರ್ಮಿಕರು ಸೇರಿ ಒಟ್ಟು 42 ಮಾತ್ರ.
ನಗರಸಭೆಯಲ್ಲಿ 23 ವಾರ್ಡ್‍ಗಳಿದ್ದು, ಒಂದು ವಾರ್ಡ್‍ಗೆ ಒಬ್ಬ ಕಾರ್ಮಿಕ ಎಂದು ನಿಯೋಜಿಸಲಾಗಿದ್ದು, ಎತ್ತರ, ತಗ್ಗು ಪ್ರದೇಶದ ಮಡಿಕೇರಿಯಲ್ಲಿ ಒಬ್ಬರಿಂದ ಸ್ವಚ್ಛತಾ ಕಾರ್ಯ ಅಸಾಧ್ಯವಾಗಿದೆ. ಮೂವರು ನಿರ್ವಹಿಸುವ ಕೆಲಸವನ್ನು ಒಬ್ಬರೇ ಮಾಡಬೇಕಾದ ಅನಿವಾರ್ಯತೆ ಇದೆ. ಮಳೆಗಾಲದಲ್ಲಿ ಮತ್ತು ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿರುವ ಸಂದರ್ಭಗಳಲ್ಲಿ ಸ್ವಚ್ಛತಾ ಕಾರ್ಯ ಬಹಳ ಕಠಿಣವಾಗಿರುತ್ತದೆ.
ನಿತ್ಯ ಕಷ್ಟ ಪಡುವ ಈ ಪೌರ ಕಾರ್ಮಿಕರಿಗೆ ಸರ್ಕಾರದ ಸೂರು ದೊರೆಯದೆ ಇರುವುದು ಬೇಸರಕ್ಕೆ ಕಾರಣವಾಗಿದೆ. ಈ ಹಿಂದೆ ನಗರದ ಸುದರ್ಶನ ಬಡಾವಣೆಯಲ್ಲಿ ನಿವೇಶನವನ್ನು ಗುರುತಿಸಲಾಗಿತ್ತಾದರೂ ಸ್ಥಳೀಯ ವಿರೋಧಕ್ಕೆ ಮಣಿದ ಜಿಲ್ಲಾಡಳಿತ ಬೇರೆ ಕಡೆ ನಿವೇಶನ ನೀಡುವುದಾಗಿ ಹೇಳಿದೆಯಾದರೂ ಇಲ್ಲಿಯವರೆಗೆ ಯಾವುದೇ ಪ್ರಯತ್ನಗಳು ನಡೆದಿಲ್ಲ. ರಾಜ್ಯದ ಬಹುತೇಕ ನಗರಸಭಾ ವ್ಯಾಪ್ತಿಯಲ್ಲಿ ಪೌರಕಾರ್ಮಿಕರಿಗೆ ಸರ್ಕಾರ ವಸತಿ ಯೋಜನೆಯ ಮೂಲಕ ಮನೆಗಳನ್ನು ನೀಡಿದೆ. ಆದರೆ ಮಡಿಕೇರಿ ನಗರಸಭೆ ಮಾತ್ರ ಈ ಬಗ್ಗೆ ಹೆಚ್ಚು ಕಾಳಜಿ ತೋರಿಲ್ಲ.
ನಗರದ ಜನಸಂಖ್ಯೆಗೆ ಅನುಗುಣವಾಗಿ ಇನ್ನೂ 70 ರಿಂದ 80 ಕಾರ್ಮಿಕರ ಅಗತ್ಯವಿದ್ದು, ಇವರುಗಳನ್ನು ನಿಯೋಜಿಸುವ ಮೂಲಕ ಉಳಿದ ಕಾರ್ಮಿಕರಿಗೆ ಆಗುತ್ತಿರುವ ಒತ್ತಡವನ್ನು ಕಡಿಮೆ ಮಾಡಲು ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕಿದೆ.
ನಗರದ ಕಸವನ್ನೆಲ್ಲಾ ಸ್ಟೋನ್ ಹಿಲ್ ಬಳಿ ಅವೈಜ್ಞಾನಿಕವಾಗಿ ತ್ಯಾಜ್ಯ ವಿಲೇವಾರಿ ಮಾಡಲಾಗುತ್ತಿದ್ದು, ಇದು ಪೌರ ಕಾರ್ಮಿಕರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುವುದರಿಂದ ಶೀಘ್ರ ವೈಜ್ಞಾನಿಕ ಯೋಜನೆಯನ್ನು ರೂಪಿಸಬೇಕಾಗಿದೆ. ನಗರವನ್ನು ಶುಚಿಯಾಗಿಡುವ ಕಾರ್ಮಿಕರು ರಾತ್ರಿ ನೆಮ್ಮದಿಯಿಂದ ನಿದ್ದೆ ಮಾಡಬೇಕಾದರೆ ಸುರಕ್ಷಿತ ಸೂರಿನ ಅಗತ್ಯವಿದ್ದು, ಸರ್ಕಾರ ತಕ್ಷಣ ವಸತಿಯನ್ನು ನೀಡಬೇಕಾಗಿದೆ. ತಾತ್ಕಾಲಿಕವಾಗಿ ಕಾರ್ಯ ನಿರ್ವಹಿಸುತ್ತಿರುವ ಕಾರ್ಮಿಕರಿಗೆ ವೇತನವನ್ನು ವಿಳಂಬವಾಗಿ ನೀಡುತ್ತಿರುವ ಬಗ್ಗೆ ದೂರುಗಳಿದ್ದು, ಪ್ರತಿ ತಿಂಗಳು ಸಕಾಲದಲ್ಲಿ ಪಾವತಿಯಾಗುವಂತೆ ನೋಡಿಕೊಳ್ಳಬೇಕಾಗಿದೆ.
ಪ್ರತಿ ಮೂರು ತಿಂಗಳಿಗೊಮ್ಮೆ ಆರೋಗ್ಯ ಪರೀಕ್ಷೆಯ ಅಗತ್ಯವಿದ್ದರು ಆರು ತಿಂಗಳಿಗೊಮ್ಮೆ ಪರೀಕ್ಷೆ ಮಾಡಲಾಗುತ್ತಿದೆ. ಇದು ಕೋವಿಡ್ ಸಮಯವಾಗಿರುವುದರಿಂದ ಕನಿಷ್ಠ ಎರಡು ತಿಂಗಳಿಗೆ ಒಂದು ಬಾರಿಯಾದರೂ ಆರೋಗ್ಯ ಪರೀಕ್ಷೆಯಾಗಬೇಕಾಗಿದೆ. ವೈಜ್ಞಾನಿಕ ರೂಪದ ಉತ್ತಮ ಗುಣಮಟ್ಟದ ಸಮವಸ್ತ್ರ, ಗ್ಲೌಸ್, ಮಾಸ್ಕ್ ಗಳನ್ನು ನಗರಸಭೆ ವಿತರಿಸಬೇಕಾಗಿದೆ.
::: ಗ್ರಾಮ ಕಾರ್ಮಿಕರ ಗೋಳು :::
ಜಿಲ್ಲೆಯ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೌರ ಕಾರ್ಮಿಕರುಗಳು ಕೂಡ ಗೋಳಿನ ಜೀವನ ನಡೆಸುತ್ತಿದ್ದಾರೆ. ಜಿಲ್ಲೆಯಲ್ಲಿರುವ ಗ್ರಾ.ಪಂ ಗಳಲ್ಲಿ ಸುಮಾರು 90 ಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ದಿನದಿಂದ ದಿನಕ್ಕೆ ಬೆಳವಣಿಗೆ ಕಾಣುತ್ತಿರುವ ಗೋಣಿಕೊಪ್ಪ ಗ್ರಾ.ಪಂ ವ್ಯಾಪ್ತಿಯಲ್ಲಿ ಪ್ರತಿದಿನ 17 ಮಂದಿ ಸ್ವಚ್ಛತಾ ಕಾರ್ಯ ನಡೆಸುತ್ತಾರೆ. ಸೂರಿಲ್ಲದ 17 ಕುಟುಂಬಗಳು ಅಶುಚಿತ್ವದ ವಾತಾವರಣದ ನಡುವೆ ಜೀವನ ಸಾಗಿಸುತ್ತಿವೆ. ಗ್ರಾ.ಪಂ ನ ಶೌಚಾಲಯ ಮತ್ತು ಶೌಚಾಲಯದ ಗುಂಡಿ ಇರುವ ಪ್ರದೇಶದ ಪಕ್ಕದಲ್ಲೇ ಜೋಪಡಿಯಂತಹ ಮುರುಕಲು ಮನೆಗಳಲ್ಲಿ ಆತಂಕದಿಂದಲೇ ಕಾರ್ಮಿಕರು ಜೀವನ ಸಾಗಿಸುತ್ತಿದ್ದಾರೆ. ಇಡೀ ಊರನ್ನು ಶುಚಿಯಾಗಿಡುವ ಕಾರ್ಮಿಕರು ಮಾತ್ರ ಕೊಳಚೆ ಪ್ರದೇಶದಂತ್ತಿರುವ ಮನೆಗಳಲ್ಲಿ ವಾಸಿಸುತ್ತಿದ್ದಾರೆ. ಇಂದೊ, ನಾಳೆಯೋ ಮುರಿದು ಬೀಳುವ ಮನೆಗಳಲ್ಲಿನ ವಾಸ ಮಳೆಗಾಲದಲ್ಲಂತೂ ನರಕಾನುಭವವನ್ನು ನೀಡುತ್ತಿದೆ.

ಈ ಬಗ್ಗೆ ಗ್ರಾ.ಪಂ ಗೆ ಮಾಹಿತಿ ಇದ್ದರೂ ಪೌರ ಕಾರ್ಮಿಕರ ಬಗ್ಗೆ ಕಾಳಜಿ ತೋರಿಲ್ಲ, ನಿತ್ಯ ಕಷ್ಟಪಟ್ಟು ದುಡಿಯುತ್ತಿರುವ ಕಾರ್ಮಿಕರನ್ನು ಖಾಯಂಗೊಳಿಸಿಲ್ಲ, ಮಾತ್ರವಲ್ಲ ವೇತನವನ್ನು ಸಕಾಲದಲ್ಲಿ ನೀಡುತ್ತಿಲ್ಲ ಎನ್ನುವ ಆರೋಪವಿದೆ.

::: ಅಭಿಪ್ರಾಯಗಳು :::

ಮಡಿಕೇರಿ ನಗರಸಭೆಯಲ್ಲಿ ಪೌರ ಕಾರ್ಮಿಕರ ಸಂಖ್ಯೆ ಕಡಿಮೆ ಇದೆ, ಇನ್ನೂ 70 ರಿಂದ 80 ಕಾರ್ಮಿಕರ ಅಗತ್ಯವಿದೆ. ಒತ್ತಡದ ನಡುವೆ ಕೇವಲ 42 ಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದಾರೆ. ನಮಗೆ ಮುಖ್ಯವಾಗಿ ಮನೆಗಳನ್ನು ನಿರ್ಮಿಸಿಕೊಡುವ ಅಗತ್ಯವಿದೆ, ರಾಜ್ಯದ ಎಲ್ಲಾ ಭಾಗಗಳಲ್ಲಿ ಕಾರ್ಮಿಕರಿಗೆ ಮನೆ ನಿರ್ಮಿಸಿಕೊಡಲಾಗಿದೆ, ನಾವು ಸೂರಿಲ್ಲದೆ ಪರದಾಡುತ್ತಿದ್ದೇವೆ. ಖಾಯಂ ಕಾರ್ಮಿಕರಿಗೆ ವೇತನ ಸಿಗುತ್ತಿದೆ. ಇಂದಿರಾ ಕ್ಯಾಂಟೀನ್ ಮೂಲಕ ನೀಡುತ್ತಿರುವ ಬೆಳಗ್ಗಿನ ಉಪಹಾರ ಈ ಹಿಂದೆ ಗುಣಮಟ್ಟದಿಂದ ಕೂಡಿರಲಿಲ್ಲ, ಇದೀಗ ಮನವಿ ಮಾಡಿದ ನಂತರ ಉತ್ತಮ ಆಹಾರವನ್ನು ನೀಡುತ್ತಿದ್ದಾರೆ. ಕೋವಿಡ್ ಹಿನ್ನೆಲೆ ಆಗಸ್ಟ್ ತಿಂಗಳಿನಲ್ಲಿ ಆರೋಗ್ಯ ತಪಾಸಣೆ ಮಾಡಲಾಗಿದೆ>>>(ಓಬಳಿ, ನಿರ್ವಾಹಕ, ನಗರಸಭಾ ಪೌರಕಾರ್ಮಿಕರು)<<<

ಇಡೀ ಊರನ್ನು ಶುಚಿಯಾಗಿಟ್ಟು ಜನರನ್ನು ನೆಮ್ಮದಿಯಾಗಿಡುವ ಗ್ರಾಮೀಣ ಭಾಗದ ಸ್ವಚ್ಛತಾ ಕಾರ್ಮಿಕರಿಗೆ ಕೇವಲ ವೇತನ ನೀಡಿ ಕೈತೊಳೆದುಕೊಳ್ಳಲಾಗುತ್ತಿದೆ. ಪ್ರತಿ ತಿಂಗಳು 5 ನೇ ತಾರೀಖಿನೊಳಗೆ ವೇತನ ಪಾವತಿಗೆ ಒತ್ತಾಯಿಸಿದರೂ ವಿಳಂಬ ಧೋರಣೆ ಮುಂದುವರೆದಿದೆ. ಸೂಕ್ತ ರೀತಿಯ ಸಮವಸ್ತ್ರ, ಗ್ಲೌಸ್, ಮಾಸ್ಕ್‍ಗಳನ್ನು ನೀಡುತ್ತಿಲ್ಲ. ಕಾರ್ಮಿಕರ ಆರೋಗ್ಯ ರಕ್ಷಣೆಗೆ ಆಸಕ್ತಿ ತೋರುತ್ತಿಲ್ಲ. ಚಳಿ, ಮಳೆ, ಗಾಳಿಯಲ್ಲಿ ಕಷ್ಟಪಟ್ಟು ದುಡಿಯುತ್ತಿರುವ ಕೊಡಗಿನ ಪೌರ ಕಾರ್ಮಿಕರನ್ನು ಸರ್ಕಾರ ವಿಶೇಷವಾಗಿ ಪರಿಗಣಿಸಬೇಕು. ತಾತ್ಕಾಲಿಕ ನೌಕರರನ್ನು ಖಾಯಂಗೊಳಿಸಬೇಕು, ಕಾರ್ಮಿಕ ನಿಯಮದಡಿ ಸೌಲಭ್ಯಗಳನ್ನು ನೀಡಬೇಕು>>>(ಪಿ.ಆರ್.ಭರತ್, ಕಾರ್ಮಿಕ ಮುಖಂಡ)<<<

ಪೌರಕಾರ್ಮಿಕ ನಿಯಮಾವಳಿಗಳನ್ನು ಮಡಿಕೇರಿ ನಗರಸಭೆ ಪಾಲಿಸುತ್ತಿಲ್ಲ, ಆರೋಗ್ಯ ಸುರಕ್ಷತೆ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಪ್ರತಿ ಮೂರು ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ನಡೆಸಬೇಕು, ಗುಣಮಟ್ಟದ ಸಮವಸ್ತ್ರ, ಗ್ಲೌಸ್ ಗಳನ್ನು ನೀಡದೆ ಇರುವುದರಿಂದ ಅವುಗಳು ಹರಿದು ಹೋಗುತ್ತಿದ್ದು, ವೈಜ್ಞಾನಿಕ ರೂಪದ ವ್ಯವಸ್ಥೆ ಕಲ್ಪಿಸಬೇಕು. ಮಳೆಗಾಲದಲ್ಲಿ ರೈನ್ ಕೋಟ್, ಗಂಬೂಟುಗಳನ್ನು ನೀಡಬೇಕು. ಪೌರ ಕಾರ್ಮಿಕರಿಗೆ ಬೆಳಗ್ಗಿನ ಉಪಹಾರ ನೀಡಬೇಕೆನ್ನುವ ನಿಯಮವಿದ್ದು, ಪೌಷ್ಠಿಕ ಆಹಾರವನ್ನು ನೀಡಬೇಕು. ಪ್ರಸ್ತುಪ ಇಂದಿರಾ ಕ್ಯಾಂಟೀನ್ ನ ಆಹಾರ ನೀಡಲಾಗುತ್ತಿದ್ದು, ಗುಣಮಟ್ಟದಿಂದ ಕೂಡಿಲ್ಲ. ಪೌರಕಾರ್ಮಿಕರು ಕೂಡ ಮನುಷ್ಯರು ಎಂದು ಭಾವಿಸಬೇಕು, ಶೀಘ್ರ ವಸತಿಗಳನ್ನು ನಿರ್ಮಿಸಿಕೊಡಬೇಕು. >>>(ಪವನ್ ಪೆಮ್ಮಯ್ಯ, ಮಡಿಕೇರಿ ವಕೀಲರು)<<<