ಹಾರಂಗಿ-ಕಾವೇರಿ ಹೂಳೆತ್ತಲು 130 ಕೋಟಿ ವೆಚ್ಚದ ಯೋಜನೆ : ಆಡಳಿತಾತ್ಮಕ ಅನುಮೋದನೆ ನೀಡುವ ಪ್ರಕ್ರಿಯೆ ಜಾರಿ

23/09/2020

ಮಡಿಕೇರಿ ಸೆ.23 : ಕೊಡಗು ಜಿಲ್ಲೆಯಲ್ಲಿ 2018ನೇ ಸಾಲಿನಲ್ಲಿ ಉಂಟಾದ ಜಲಪ್ರಳಯದಿಂದ ಹಾರಂಗಿ ಹಿನ್ನೀರಿನಲ್ಲಿ ಮತ್ತು ಮಾದಾಪುರ ಹಟ್ಟಿಹೊಳೆ ಹಾಗೂ ಕಾವೇರಿ ಹೊಳೆಯಲ್ಲಿ ತುಂಬಿರುವ ಹೂಳು ತೆಗೆಯಲು 130.33 ಕೋಟಿ ರೂ. ಮೊತ್ತದ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಪ್ರಕ್ರಿಯೆ ಪರಿಶೀಲನೆಯಲ್ಲಿದೆ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳೆ ತಿಳಿಸಿದ್ದಾರೆ.
ವಿಧಾನಸಭೆಯಲ್ಲಿ ಮಡಿಕೇರಿ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಹಾರಂಗಿ ಜಲಾಶಯಕ್ಕೆ ಹೂಳು ತುಂಬುವುದನ್ನು ತಡೆಗಟ್ಟುವ ಸಲುವಾಗಿ ಜಲಾನಯನ ಪ್ರದೇಶ, ನದಿ ಪಾತ್ರದ ಪುನಶ್ಚೇತನ ಹಾಗೂ ರಕ್ಷಣಾತ್ಮಕ ಕಾಮಗಾರಿಯ 130.33 ಕೋಟಿ ರೂ. ಮೊತ್ತದ ಯೋಜನಾ ವರದಿಗೆ ಆಡಳಿತಾತ್ಮಕ ಅನುಮೋದನೆ ನೀಡುವ ಪ್ರಕ್ರಿಯೆ ಪರಿಶೀಲನೆಯಲ್ಲಿದೆ. ಕಾವೇರಿ ಹೊಳೆಯಲ್ಲಿ ತುಂಬಿರುವ ಹೂಳು ತೆಗೆಯಲು 2019-20ನೇ ಸಾಲಿನಲ್ಲಿ ಜಿಲ್ಲಾಧಿಕಾರಿಗಳು ಎನ್.ಡಿ.ಆರ್.ಎಫ್ ಮೂಲಕ 88 ಲಕ್ಷ ರೂ.ಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಿದ್ದು, ಪ್ರಸ್ತುತ ನದಿಯಲ್ಲಿ ಪ್ರವಾಹ ಇರುವ ಕಾರಣ ಮಳೆಗಾಲ ಮುಗಿದ ಕೂಡಲೇ ಕಾಮಗಾರಿ ಪೂರ್ಣಗೊಳಿಸಲಾಗುತ್ತದೆ ಎಂದು ಹೇಳಿದರು.
ಹೇಮಾವತಿ ಹಿನ್ನೀರು ಸಂತ್ರಸ್ತರಿಗೆ ಮೂಲಸೌಕರ್ಯ ನೀಡಲಾಗುತ್ತಿದೆ. ಅಂತೆಯೇ ಕೊಡ್ಲಿಪೇಟೆ ಹೋಬಳಿಯಲ್ಲಿನ ಹೇಮಾವತಿ ಹಿನ್ನೀರಿನಿಂದ ಭೂಮಿ ಕಳೆದುಕೊಂಡ 25 ಗ್ರಾಮಗಳ ರೈತರ 1,865 ಎಕರೆ ಪ್ರದೇಶದ ಜಮೀನು ಹೇಮಾವತಿ ಹಿನ್ನೀರಿನಿಂದ ಮುಳುಗಡೆಗೊಂಡ ಕಾರಣ, ಆ ರೈತರಿಗೆ ಪರಿಹಾರವಾಗಿ ಬದಲಿ ಜಮೀನನ್ನು ನೀಡಲಾಗಿದೆ. ಹಾಗೆಯೇ ಆ 25 ಗ್ರಾಮಗಳ ನಾಗರಿಕರಿಗೆ ಗ್ರಾಮಗಳಲ್ಲಿನ ಅಗತ್ಯ ಮೂಲಭೂತ ಸೌಕರ್ಯಗಳಾದ ರಸ್ತೆ, ಚರಂಡಿ ನಿರ್ಮಾಣ, ಸಮುದಾಯ ಭವನ, ಧಾರ್ಮಿಕ ಪೂಜಾ ಕೇಂದ್ರಗಳ ನಿರ್ಮಾಣ ಸೇರಿದಂತೆ ಅಗತ್ಯ ಕಾಮಗಾರಿಗಳನ್ನು 2010-11 ನೇ ಸಾಲಿನಿಂದಲೇ ಕಲ್ಪಿಸಲಾಗುತ್ತಿದೆ. 2018-19 ನೇ ಸಾಲಿನವರೆಗೆ ಒಟ್ಟು 83.45 ಕೋಟಿ ರು. ಮೊತ್ತದ ಕಾಮಗಾರಿಗಳನ್ನು ಜಾರಿಗೊಳಿಸಲಾಗಿದೆ ಎಂದು ವಿವರಿಸಿದರು.
2019-20 ಸಾಲಿನಲ್ಲಿ ಕೊಡ್ಲಿಪೇಟೆ ಹೋಬಳಿಯ 25 ಗ್ರಾಮಗಳಲ್ಲಿ ಮೂಲಸೌಲಭ್ಯ ಕಲ್ಪಿಸುವ ಕಾಮಗಾರಿಗಳಿಗಾಗಿ 34.53 ಕೋಟಿ ರು.ಗಳಿಗೆ ಅನುಮೋದನೆ ನೀಡಲಾಗಿದ್ದು. ಈ ಪೈಕಿ 16.53 ಕೋಟಿ ರು. ಮೊತ್ತದ ಕಾಮಗಾರಿಗಳು ಪೂರ್ಣಗೊಳ್ಳುವ ಹಂತದಲ್ಲಿವೆ. ಉಳಿದ 18 ಕೋಟಿ ರೂ. ಕಾಮಗಾರಿಗಳು ವಿವಿಧ ಹಂತದ ಪ್ರಗತಿಯಲಿವೆ ಎಂದು ಸಚಿವರು ಉತ್ತರಿಸಿದರು.