ಸೆ.28 ರಂದು ಕರ್ನಾಟಕ ಬಂದ್

September 24, 2020

ಬೆಂಗಳೂರು ಸೆ.24 : ರೈತ ವಿರೋಧಿ ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ತಿದ್ದುಪಡಿ ಕಾಯ್ದೆ ವಿರೋಧಿಸಿ ವಿವಿಧ ರೈತಪರ ಸಂಘಟನೆಗಳು ಸೋಮವಾರ ಕರ್ನಾಟಕ ಬಂದ್ ಗೆ ಕರೆ ನೀಡಿವೆ.
ಕೇಂದ್ರ ಸರ್ಕಾರದ ರೈತ, ಕಾರ್ಮಿಕ ವಿರೋಧಿ ನೀತಿ ಖಂಡಿಸಿ ಸೆ.28ರಂದು ಕರ್ನಾಟಕ ಬಂದ್ ಕರೆ ನೀಡಲಾಗಿದೆ. ಅಗತ್ಯ ಸೇವೆ ಹೊರತುಪಡಿಸಿ ಸಂಪೂರ್ಣ ಬಂದ್ ಆಚರಿಸಲಾಗುವುದು ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅವರು ಹೇಳಿದ್ದಾರೆ.
ಸೋಮವಾರ ಬಂದ್ ಗೆ ಕರೆ ನೀಡುವ ಬಗ್ಗೆ ಚರ್ಚೆ ನಡೆಯುತ್ತಿತ್ತು. ನಮ್ಮ ಒತ್ತಾಯಕ್ಕೆ ಮಣಿದು ಮಸೂದೆಯನ್ನ ತಡೆ ಹಿಡಿಯಬಹುದು ಎಂಬ ವಿಶ್ವಾಸವಿತ್ತು. ಆದರೆ ಸರ್ಕಾರದ್ದು ಮೊಸಳೆ ಕಣ್ಣೀರು ಎಂಬುವುದು ಖಚಿತವಾಗಿದೆ. ಬೀದಿಯಲ್ಲಿ ನಾವು ಪ್ರತಿಭಟನೆ ಮಾಡುತ್ತಿದ್ದರೂ ನಮ್ಮನ್ನು ಮಾತನಾಡಿಸಲು ಸರ್ಕಾರ ಮುಂದಾಗಿಲ್ಲ. ಶುಕ್ರವಾರ ನಗರದಲ್ಲಿ ಬೃಹತ್ ಪ್ರತಿಭಟನೆ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಇದೊಂದು ಕಾಪೋರೇಟ್ ಸರ್ಕಾರವಾಗಿದ್ದು, ಮಸೂದೆ ಬಗ್ಗೆ ರೈತರ ಸಲಹೆ ಸಹ ಪಡೆದುಕೊಂಡಿಲ್ಲ. ಎಪಿಎಂಸಿ ಮಸೂದೆ ರೈತರ ಮರಣ ಶಾಸನವಾಗಿದೆ. ಬಂಡವಾಳ ಶಾಹಿ ಸರ್ಕಾರ ಇದಾಗಿದೆ. ರೈತರ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಸಿಎಂ ಯಡಿಯೂರಪ್ಪನವರ ಮುಖವಾಡ ಬಯಲಾಗಿದೆ ಎಂದು ದೂರಿದರು.

error: Content is protected !!