ತಲಕಾವೇರಿ ಅರ್ಚಕ ವೃಂದಕ್ಕೆ ನೈತಿಕ ಬೆಂಬಲ ನೀಡಿದವರಿಗೆ ಕೃತಜ್ಞತೆ ಸಲ್ಲಿಸಿದ ಜಿ.ಟಿ.ರಾಘವೇಂದ್ರ

September 24, 2020

ಮಡಿಕೇರಿ ಸೆ. 24 : ಸಂದಿಗ್ಧ ಸನ್ನಿವೇಶವೊಂದರಲ್ಲಿ ಕೊಡಗಿನ ಹಿಂದೂ ಸಮುದಾಯದವರು ಒಗ್ಗಟ್ಟು ತೋರಿ ತಲಕಾವೇರಿಯ ಅರ್ಚಕರಿಗೆ ನೈತಿಕ ಬೆಂಬಲ ನೀಡಿರುವುದನ್ನು ಕೊಡಗು ಬ್ರಾಹ್ಮಣ ವಿದ್ಯಾಭಿವೃದ್ದಿ ನಿಧಿಯ ಮಾಜಿ ಅಧ್ಯಕ್ಷರು, ಜಿಲ್ಲೆಯ ಹಿರಿಯ ನಾಗರಿಕರಾದ ಜಿ.ಟಿ. ರಾಘವೇಂದ್ರ ಶ್ಲಾಘಿಸಿದ್ದಾರೆ.

ದೇಶದ ರಾಜ್ಯಗಳಲ್ಲಿ ಕರ್ನಾಟಕವು ಅತಿ ಹೆಚ್ಚು ಶಾಂತಿಪ್ರಿಯ ರಾಜ್ಯವಾಗಿದ್ದು ಅಂತಹ ಕರ್ನಾಟಕದಲ್ಲಿ ಕೊಡಗು ಜಿಲ್ಲೆಯಲ್ಲಿ ಕಾಣುತ್ತಿರುವ ಶಾಂತ
ಪರಿಸ್ಥಿತಿ ಬೇರೆ ಜಿಲ್ಲೆಗಳಲ್ಲಿ ಕಾಣದಿರಲು ಕಾರಣಇಲ್ಲಿನ ಸರ್ವ ವರ್ಗಗಳ ಸುಸಂಸ್ಕೃತ ವರ್ತನೆಗ ಸಾಕ್ಷಿಯಾಗಿದೆ. ಈ ರೀತಿಯ ಸುಸಂಸ್ಕೃತ ವರ್ತನೆಗೆ ಕಾರಣ ಇಲ್ಲಿನ ಸರ್ವ ಜನಾಂಗಗಳ ಸಹಬಾಳ್ವೆ ಎಂಬುದೂ ಸತ್ಯ ವಿಚಾರ.

ಇಂತಹ ಕೊಡಗಿನಲ್ಲಿರುವ ಸನಾತನ ಹಿಂದೂ ಜನಾಂಗದವರ ಪೈಕಿ ಕೊಡವರು, ಅಮ್ಮ ಕೊಡವರು, ಗೌಡ ಸಮಾಜದವರು ಮತ್ತು ಗೌರವಾನ್ವಿತ ಅನೇಕ ಹಿಂದೂ ಬಾಂಧವರೊಡನೆ ಬ್ರಾಹ್ಮಣ ಜನಾಂಗದವರೂ ಎಲ್ಲರೊಂದಿಗೂ ಪ್ರೀತಿ ಭಾವದಿಂದ ಗೌರವದಿಂದ ಬಾಳುತ್ತಿದ್ದಾರೆ.

ಸಮಾಜದಲ್ಲಿರುವ ಈ ಎಲ್ಲಾ ಜನಾಂಗದವರು ಅವರವರ ಜನಾಂಗದವರ ಏಳಿಗೆಗೆ ನಿರಂತರ ಪ್ರಯತ್ನಿಸುವುದು ತೀರಾ ಸ್ವಾಭಾವಿಕ ಹಾಗೂ ಅವರು ಬೇರೆ ವರ್ಗದವರ ಉತ್ಕರ್ಷ ಕ್ಕೂ ಸಹಕರಿಸುತ್ತಿರುತ್ತಾರೆ ಎಂದು ಜಿ.ಟಿ.ರಾಘವೇಂದ್ರ ಅಭಿಪ್ರಾಯ ಪಟ್ಟಿದ್ದಾರೆ.

ಇಂಥ ಸಂದರ್ಭಗಳಲ್ಲಿ ಕೆಲವೊಮ್ಮೆ ಬಹಳ ಅಪರೂಪಕ್ಕೆ ಸಮೂದಾಯಗಳೊಳಗೆ ಅಭಿಪ್ರಾಯ ಬೇಧ ತಲೆದೋರಿ ಬಿಡುತ್ತದೆ. ಇದು ಯಾವುದೂ ಉದ್ದೇಶ ಪೂರ್ವಕವಾಗಿರುವುದಿಲ್ಲ. ಅಂತಹ ಅಪರೂಪದ ಘಟನೆ ಇತ್ತೀಚೆಗೆ ತಲಕಾವೇರಿಯ ಪೂಜಾ ಕೈಂಕರ್ಯದ ವಿಚಾರದಲ್ಲಿ ವಿಚಾರ ಎಲ್ಲರಿಗೂ ತಿಳಿದಿದೆ.

ಆದರೆ, ಅಂತಹ ಸಂದಿಗ್ಧ ಸಮಯದಲ್ಲಿ ಸುಸಂಸ್ಕೃತ ಹಿಂದೂ ಬಾಂಧವರು ಪರಸ್ಪರ ತಾಳ್ಮೆಯಿಂದ ಚರ್ಚಿಸಿ ಯಾರಿಗೂ ನೋವಾಗದಂತೆ ಸಮಸ್ಯೆಯನ್ನು ಪರಿಹರಿಸಿದ್ದಾರೆ. ತಲಕಾವೇರಿಯ ಅರ್ಚಕ ವೃಂದಕ್ಕೆ ನೈತಿಕ ಬೆಂಬಲ ನೀಡಿದ್ದಾರೆ.

ಇದೇ ರೀತಿ ಹಿಂದೂ ಸಮಾಜವೆಲ್ಲವೂ ಒಂದು ಎಂದು ನಿರೂಪಿಸಿದ ಕೊಡವರಿಗೆ, ಅಮ್ಮಕೊಡವರಿಗೆ, ಗೌಡಸಮುದಾಯಕ್ಕೆ ಮತ್ತು ಅಸಂಖ್ಯ ಇತರ ಹಿಂದೂ ಬಾಂಧವರಿಗೆ 103 ವರ್ಷಗಳ ಭವ್ಯ ಪರಂಪರೆ ಉಳ್ಳ ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿಯ ಸರ್ವ ಸದಸ್ಯರೂ, ಸಮಗ್ರ ಬ್ರಾಹ್ಮಣ ಬಾಂಧವರು ಹೃತ್ಪೂರ್ವಕ ಕೃತಜ್ಞತೆಯನ್ನು ಸಲ್ಲಿಸುತ್ತೇವೆಂದು ಜಿ.ಟಿ.ರಾಘವೇಂದ್ರ ಹೇಳಿಕೆಯಲ್ಲಿ ತಿಳಿಸಿದ್ದಾರೆ.

error: Content is protected !!