ನಟ ರಾಕ್‌ಲೈನ್ ಸುಧಾಕರ್ ನಿಧನ

24/09/2020

ಬೆಂಗಳೂರು, ಸೆ. 24 : ಚಿತ್ರೀಕರಣದ ಸೆಟ್‌ನಲ್ಲಿ ಮೇಕಪ್ ಮಾಡಿಕೊಳ್ಳುವ ಸಮಯದಲ್ಲಿ ಕುಸಿದು ಬಿದ್ದು ಹಿರಿಯ ಪೋಷಕ ಕಲಾವಿದ ರಾಕ್ ಲೈನ್ ಸುಧಾಕರ್ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಎರಡು ತಿಂಗಳ ಹಿಂದ ಕೊರೋನಾ ಸೊಂಕಿನಿಂದ ಗುಣಮುಖರಾಗಿದ್ದ ರಾಕ್‌ಲೈನ್ ಸುಧಾಕರ್ ಅವರಿಗೆ 64 ವರ್ಷ ವಯಸ್ಸಾಗಿತ್ತು.
ಬನ್ನೇರುಘಟ್ಟ ರೋಡ್ ಬಳಿ ನಡೆಯುತಿದ್ದ ಶುಗರ್ ಲೆಸ್ ಸಿನಿಮಾದ ಚಿತ್ರೀಕರಣದ ಸಮಯದಲ್ಲಿ ಇಂದು ಬೆಳಗ್ಗೆ 10 ಗಂಟೆಗೆ ನಿಧನರಾಗಿದ್ದಾರೆ.
ಬೆಂಗಳೂರಿನ ಕಮಲಾನಗರ ನಿವಾಸಿಯಾಗಿದ್ದ ರಾಕ್ ಲೈನ್ ಸುಧಾಕರ್ ಅವರು ಪಂಚರಂಗಿ, ಅಧ್ಯಕ್ಷ, ಅಜಿತ್, ನಾ ಕೋಳಿಕ್ಕೆ ರಂಗ ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸಿ ರಾಕ್‌ಲೈನ್ ಸುಧಾಕರ್ ಅಂತಾನೇ ಖ್ಯಾತಿ ಗಳಿಸಿದ್ದರು. ಕನ್ನಡದ 120 ಸಿನಿಮಾಗಳಲ್ಲಿ ಅಭಿನಯ ಮಾಡಿದ್ದಾರೆ.
ಹಿರಿಯ ನಟ, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಅವರ ಬಳಿ ಕೆಲಸ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಸುಧಾಕರ್ ರಾಕ್‌ಲೈನ್ ಸುಧಾಕರ್ ಎಂದೇ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದರು.