ಕಠಿಣ ಪರಿಶ್ರಮದ ಮೂಲಕ ಬದುಕು ಕಟ್ಟಿಕೊಂಡಿದ್ದ ಮಜೀದ್ : ಸೇವೆಯಲ್ಲಿರುವಾಗಲೇ ಕೊರೋನಕ್ಕೆ ಬಲಿಯಾದ ಬಿ.ಎಸ್.ಎಫ್. ಯೋಧ

24/09/2020

ಮಡಿಕೇರಿ ಸೆ. 24 : ಕೊಡಗು ಮೂಲದ ಯೋಧ ದುದ್ದಿಯಂಡ ಎ.ಮಜೀದ್ ಅವರು ಬಾಲ್ಯದ ಬಡತನವನ್ನು ಮೆಟ್ಟಿನಿಂತು ಕಠಿಣ ಪರಿಶ್ರಮದ ಮೂಲಕ ಬದುಕು ಕಟ್ಟಿಕೊಂಡವರಾಗಿದ್ದರು. ಭಾರತೀಯ ಗಡಿ ಭದ್ರತಾ ಪಡೆ (ಬಿ.ಎಸ್.ಎಫ್)ಯಲ್ಲಿ 30 ವರ್ಷಗಳ ಸುದೀರ್ಘವಾದ ದೇಶಸೇವೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ 31 ವರ್ಷಕ್ಕೆ ಕಾಲಿಡುತ್ತಿದ್ದಂತೆ, ಕರ್ತವ್ಯದಲ್ಲಿರುವಾಗಲೇ ಮಹಾಮಾರಿ ಕೋವಿಡ್-19 ಸೋಂಕಿಗೆ ಬಲಿಯಾದ 50 ವರ್ಷ ಪ್ರಾಯದ ಡಿ.ಎ. ಮಜೀದ್ ಅವರು, ನಿರಂತರ ಪರಿಶ್ರಮದ ಮೂಲಕ ಮೇಲೆ ಬಂದ ಸಾಧಕರಾಗಿದ್ದರು.

ದೇಶದ ವಿವಿಧ ಭಾಗಗಳಲ್ಲಿ ಕರ್ತವ್ಯ ನಿರ್ವಹಿಸಿ ಕಳೆದ 4 ವರ್ಷಗಳಿಂದ ಕೇರಳದ ತಿರುವನಂತಪುರಂ ನಲ್ಲಿ ಸೇವೆ ಸಲ್ಲಿಸುತ್ತಿದ್ದ ಮಜೀದ್ ಅವರು, ಕಳೆದ ಆಗಸ್ಟ್ ತಿಂಗಳ ಅಂತ್ಯದವರೆಗೂ ಸಕ್ರಿಯವಾಗಿ ಕಾರ್ಯನಿರ್ವಹಿಸಿದ್ದಾರೆ. ಇದೇ ತಿಂಗಳ ಮೊದಲ ವಾರದಲ್ಲಿ ದಿಡೀರನೆ ಇವರಿಗೆ ಕೋವಿಡ್-19 ಸೋಂಕು ಧೃಡಪಟ್ಟ ಕಾರಣ, ತಿರುವನಂತಪುರಂನ ಮೆಡಿಕಲ್ ಕಾಲೇಜಿನಲ್ಲಿರುವ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ತಜ್ಞ ವೈದ್ಯರ ತಂಡ ನಿರಂತರವಾಗಿ ನೀಡಿದ ಚಿಕಿತ್ಸೆ ಆರಂಭದಲ್ಲಿ ಫಲ ಕಾಣದಿದ್ದಾಗ ಪ್ಲಾಸ್ಮ ತೆರಪಿ ಚಿಕಿತ್ಸೆ ನೀಡಲಾಯಿತು. ಇದರಿಂದ ಚೇತರಿಸಿಕೊಳ್ಳುವ ಹಂತದಲ್ಲಿದ್ದ ಮಜೀದ್ ಅವರಿಗೆ ತಮ್ಮ ಬಹು ಅಂಗಾಂಗ ವೈಫಲ್ಯ ಕಾಡತೊಡಗಿತು. ತಮ್ಮ ಎರಡೂ ಕಿಡ್ನಿ ಮತ್ತು ಹೃದಯ ಸಂಬಂಧಿ ಕಾಯಿಲೆ ವೃದ್ಧಿಸಿದ ಪರಿಣಾಮ ಕೋವಿಡ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಜಿದ್ ಅವರು, ಯಾವುದೇ ಉನ್ನತ ಮಟ್ಟದ ಚಿಕಿತ್ಸೆಗೂ ಸ್ಪಂದಿಸದೆ ಗುರುವಾರ ಬೆಳಿಗ್ಗೆ 7 ಗಂಟೆಗೆ ತಿರುವನಂತಪುರಂ ಮೆಡಿಕಲ್ ಕಾಲೇಜಿನ ಕೋವಿಡ್ ಆಸ್ಪತ್ರೆಯಲ್ಲಿ ನಿಧನರಾದರು.

ಮೃತ ಯೋಧ ಮಜೀದ್ ಅವರಿಗೆ ಕೋವಿಡ್ ಭಾದಿಸಿದ್ದ ಕಾರಣ ಅವರ ಪಾರ್ಥಿವ ಶರೀರವನ್ನು ಹುಟ್ಟೂರಿಗೆ ತರಲು ಸಾಧ್ಯವಾಗುತ್ತಿಲ್ಲ. ಅವರ ಹುಟ್ಟೂರಿನ ಜಮಾಅತ್ ಆದ ವಿರಾಜಪೇಟೆ ಸಮೀಪದ ನಲ್ವತ್ತೋಕ್ಲು ಜುಮಾ ಮಸೀದಿಯ ಆಡಳಿತ ಮಂಡಳಿಯ ನಿರಾಕ್ಷೇಪದಂತೆ ತಿರುವನಂತಪುರಂನಲ್ಲೆ ಮೃತರ ಅಂತ್ಯಕ್ರಿಯೆ ನಡೆಯಲಿದೆ. ಇವರು ಕರ್ತವ್ಯದಲ್ಲಿದ್ದ ಯೋಧರಾದ ಕಾರಣ ಸಕಲ ಸರಕಾರಿ ಗೌರವಗಳೊಂದಿಗೆ ಗುರುವಾರ ಮಧ್ಯಾಹ್ನದ ವೇಳೆಗೆ ಅವರ ಅಂತ್ಯಕ್ರಿಯೆ ನಡೆಸಲಾಗುವುದು. ಇದೀಗ ಮತ್ತೆ ಪಾರ್ಥಿವ ಶರೀರವನ್ನು ಆಂಟಿಜೆನ್ ಟೆಸ್ಟಿಗೆ ಒಳಪಡಿಸಲಾಗುವುದು. ಒಂದು ವೇಳೆ ಫಲಿತಾಂಶ ನೆಗೆಟಿವ್ ಬಂದಲ್ಲಿ ಮಜೀದ್ ಅವರ ಪಾರ್ಥಿವ ಶರೀರವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುವುದು. ಪಾಸಿಟಿವ್ ಬಂದರೆ ಇದು ಸಾಧ್ಯವಿಲ್ಲ ಎಂದು ಬಿಎಸ್ಎಫ್ ಮೂಲಗಳು ತಿಳಿಸಿವೆ. ಈ ಕುರಿತು ಯಾವುದೇ ಅಂತಿಮ ತೀರ್ಮಾನ ಇದುವರೆಗೂ ಆಗಿರುವುದಿಲ್ಲ. ಮಧ್ಯಾಹ್ನದ ವೇಳೆ ಈ ಕುರಿತು ಸ್ಪಷ್ಟ ಮಾಹಿತಿ ದೊರೆಯಲಿದೆ.

ವೀರಾಜಪೇಟೆ ಸಮೀಪದ ನಲ್ವತ್ತೋಕ್ಲು ಗ್ರಾಮದ ದುದ್ದಿಯಂಡ ಅಬ್ಬಾಸ್ ಮತ್ತು ಬಿಚ್ಚುಮ್ಮ ದಂಪತಿಗಳ ಪುತ್ರರಾಗಿ 1970ರಲ್ಲಿ ಕೃಷಿಕ ಕುಟುಂಬದಲ್ಲಿ ಜನಿಸಿ, ಬಡತನದ ಬೇಗೆಯಲ್ಲಿ ಬಾಲ್ಯ ಕಳೆದ ಮಜೀದ್ ಅವರು ತಮ್ಮ ಆರಂಭಿಕ ವಿದ್ಯಾಭ್ಯಾಸವನ್ನು ಹುಟ್ಟೂರಿನಲ್ಲಿ ಪೂರೈಸಿ, ಗೋಣಿಕೊಪ್ಪಲು ಕಾವೇರಿ ಕಾಲೇಜಿನಲ್ಲಿ ಪದವಿ ಪಡೆದಿದ್ದರು.
ಬೆಂಗಳೂರಿನಲ್ಲಿ ನಡೆದ ಬಿ.ಎಸ್.ಎಫ್. ನೇಮಕಾತಿ ಶಿಬಿರದಲ್ಲಿ ಆಯ್ಕೆಗೊಂಡ ಮಜೀದ್ ಅವರು, 1990 ಮಾರ್ಚ್ 1ರಂದು ತಮ್ಮ 20ನೇ ವರ್ಷ ಪ್ರಾಯದಲ್ಲೇ ದೇಶ ಸೇವೆಗಾಗಿ ತಮ್ಮನ್ನು ಅರ್ಪಿಸಿಕೊಂಡಿದ್ದರು.

ಆರಂಭದಲ್ಲಿ ಹರಿಯಾಣದ ಇಸಾರ್ ನಲ್ಲಿರುವ ಬಿ.ಎಸ್.ಎಫ್. ತರಬೇತಿ ಕಾಲೇಜಿನಲ್ಲಿ ತಮ್ಮ ಆರಂಭಿಕ ತರಬೇತಿ ಪೂರೈಸಿದ ಮಜೀದ್ ಅವರು, ಮೊದಲಿಗೆ ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿ ಕರ್ತವ್ಯಕ್ಕಾಗಿ ನಿಯೋಜನೆಗೊಂಡರು. ಬಳಿಕ ಪಂಜಾಬ್ ನಲ್ಲಿ 6 ವರ್ಷಗಳ ಕಾಲ ಸೇವೆ ಸಲ್ಲಿಸಿದ ಮಜೀದ್ ಅವರು, ಬಳಿಕ ರಾಜಸ್ಥಾನಕ್ಕೆ ವರ್ಗಾವಣೆಯಾದರು. ರಾಜಸ್ಥಾನದಲ್ಲಿ ತಮ್ಮ ಕರ್ತವ್ಯ ಅವಧಿ ಪೂರ್ಣಗೊಂಡು ಮತ್ತೆ ಜಮ್ಮು-ಕಾಶ್ಮೀರದ ಶ್ರೀನಗರಕ್ಕೆ ವರ್ಗಾವಣೆಗೊಂಡು ಅಲ್ಲಿ ಮತ್ತೊಂದು ಅವಧಿಗೆ ಸೇವೆ ಸಲ್ಲಿಸಿದ ಮಜೀದ್ ಅವರು, ಕಳೆದ 4 ವರ್ಷಗಳಿಂದ ತಿರುವನಂತಪುರಂನಲ್ಲಿರುವ ಬಿ.ಎಸ್.ಎಫ್. ಸೆಕ್ಟರ್ ಹೆಡ್ ಕ್ವಾರ್ಟರ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

ಮೃತರು ತಾಯಿ, ಪತ್ನಿ, ಇಬ್ಬರು ಗಂಡು ಮಕ್ಕಳು, ಐವರು ಸಹೋದರರು ಮತ್ತು ಮೂವರು ಸಹೋದರಿಯರನ್ನು ಸೇರಿದಂತೆ ಅಪಾರ ಪ್ರಮಾಣದ ಬಂಧುವರ್ಗವನ್ನು ಅಗಲಿದ್ದಾರೆ.

ಹುಟ್ಟೂರಿನಲ್ಲಿ ಮಡುಗಟ್ಟಿದ ದುಃಖ
ಬಡತನದ ಮಧ್ಯೆಯೂ ವಿದ್ಯಾಭ್ಯಾಸ ಪೂರ್ಣಗೊಳಿಸಿ ದೇಶಸೇವೆಗಾಗಿ ಬಿ.ಎಸ್.ಎಫ್. ಸೇರಿ ಕರ್ತವ್ಯ ನಿರ್ವಹಿಸುತ್ತಿದ್ದ ತಮ್ಮ ಗ್ರಾಮದ ಯೋಧರೊಬ್ಬರ ಅಕಾಲಿಕ ಮರಣದಿಂದಾಗಿ ಮಜೀದ್ ಅವರ ಹುಟ್ಟೂರು ನಲ್ವತ್ತೋಕ್ಲು ಗ್ರಾಮದಲ್ಲಿ ದುಃಖದ ವಾತಾವರಣ ಕಂಡುಬಂದಿದೆ.
ಬಾಲ್ಯವನ್ನು ಕಳೆದ ತಮ್ಮ ಹುಟ್ಟೂರಿನೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದ ಮಜೀದ್ ಅವರು, ರಜೆಯಲ್ಲಿ ಬಂದಾಗಲೆಲ್ಲ ಸಹಪಾಠಿಗಳೊಂದಿಗೆ ಮತ್ತು ಗ್ರಾಮಸ್ಥರೊಂದಿಗೆ ಬೆರೆಯುತ್ತಿದ್ದರು. ತಮ್ಮ ಗ್ರಾಮದಲ್ಲಿ ಹುಟ್ಟಿ ಬೆಳೆದ ಯೋಧರೊಬ್ಬರ ನಿಧನದಿಂದಾಗಿ ನಲ್ವತ್ತೋಕ್ಲು ಗ್ರಾಮದಲ್ಲಿ ನೀರವ ಮೌನ ಆವರಿಸಿದೆ. ಮೃತರ ಮನೆಗೆ ಜನ ತಂಡೋಪತಂಡವಾಗಿ ಆಗಮಿಸಿ ಕುಟುಂಬಸ್ಥರಿಗೆ ಸಾಂತ್ವನ ಹೇಳುತ್ತಿದ್ದಾರೆ. 3 ದಶಕಗಳಿಗೂ ಹೆಚ್ಚು ಕಾಲ ದೇಶ ಸೇವೆಗೈದ ಗ್ರಾಮದ ಯೋಧರೊಬ್ಬರ ಅಂತಿಮ ಮುಖದರ್ಶನಕ್ಕೂ ಸಾಧ್ಯವಾಗುತ್ತಿಲ್ಲ ಎಂಬ ದುಃಖ ಗ್ರಾಮದ ಪ್ರತಿಯೊಬ್ಬರನ್ನು ಕಾಡುತ್ತಿದೆ.

ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಕನಸು ಕಂಡಿದ್ದ ಯೋಧ
ತಮ್ಮ ಇಬ್ಬರು ಪುತ್ರರಿಗೆ ಉತ್ತಮ ಶಿಕ್ಷಣ ನೀಡಿ ಅವರ ಭವಿಷ್ಯ ರೂಪಿಸುವ ಕನಸು ಕಂಡಿದ್ದ ಮೃತ ಯೋಧ ಮಜೀದ್ ಅವರು ಅದಕ್ಕಾಗಿ ನಿರಂತರವಾಗಿ ಶ್ರಮಿಸುತ್ತಿದ್ದರು.

ತಮ್ಮ ಇಬ್ಬರು ಮಕ್ಕಳು ಕೂಡ ಪ್ರತಿಭಾವಂತರಾಗಿದ್ದರು. ಕಿರಿಯ ಪುತ್ರ ಮೊಹಮ್ಮದ್ ಜ್ಹಿಯಾನ್ ಕಳೆದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಮಡಿಕೇರಿಯ ಜವಾಹರ್ ನವೋದಯ ವಿದ್ಯಾಲಯಕ್ಕೆ ‘ಟಾಪರ್’ ಆದ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಇದಕ್ಕೂ ಮೊದಲು ಜ್ಹಿಯಾನ್ ಪ್ರಥಮ ಪಿಯುಸಿಯಲ್ಲಿದ್ದಾಗ ಕೇಂದ್ರ ಸರಕಾರದ ರಾಷ್ಟ್ರೀಯ ಶೈಕ್ಷಣಿಕ ವಿನಿಮಯ ಕಾರ್ಯಕ್ರಮದಡಿ ಜಪಾನ್ ದೇಶಕ್ಕೆ ಭೇಟಿ ನೀಡಿ ಗಮನ ಸೆಳೆದಿದ್ದರು.
ಮಕ್ಕಳ ಭವಿಷ್ಯದ ಬಗ್ಗೆ ಹಲವು ಕನಸುಗಳನ್ನು ಕಂಡಿದ್ದ ಮಜೀದ್ ಅವರು, ಕಂಡ ಕನಸು ನನಸಾಗುವುದನ್ನು ಕಣ್ಣಾರೆ ನೋಡಲು ಸಾಧ್ಯವಾಗದೆ ಅಕಾಲಿಕವಾಗಿ ಇಹಲೋಕ ತ್ಯಜಿಸಿದ್ದು ಕುಟುಂಬಸ್ಥರನ್ನು ಮತ್ತಷ್ಟು ದುಃಖಿತರನ್ನಾಗಿಸಿದೆ.

ಮೃತ ಮಜೀದ್ ಅವರ ಪಾರತ್ರಿಕ ಲೋಕದ ಉನ್ನತಿಗಾಗಿ ಪ್ರಾರ್ಥಿಸುದಷ್ಟೇ ನಮ್ಮೆಲ್ಲರ ಮುಂದಿರುವ ಏಕೈಕ ಮಾರ್ಗವಾಗಿದೆ. ಕನಿಷ್ಠ ಈ ಕಾರ್ಯವನ್ನಾದರೂ ನಾವೆಲ್ಲರೂ ಸೇರಿ ಮಾಡಬೇಕಿದೆ.

ಮೃತ ಮಜೀದ್ ಅವರ ಕಬರ್ ಜೀವನ ಸಂತೋಷದಾಯಕ ವಾಗಿರಲು ಸರ್ವಶಕ್ತನಾದ ಅಲ್ಲಾಹು ಅನುಗ್ರಹಿಸಲಿ. ಆಮೀನ್…….

ಕೆ.ಎಂ.ಎ. ಸಂತಾಪ : ಕೊಡವ ಮುಸ್ಲಿಂ ಅಸೋಸಿಯೇಷನ್ ನ (ಕೆ.ಎಂ.ಎ.) ಸದಸ್ಯರಾಗಿದ್ದ ದುದ್ದಿಯಂಡ ಎ. ಮಜೀದ್ ಅವರ ನಿಧನಕ್ಕೆ ಕೆ.ಎಂ.ಎ. ತೀವ್ರ ಸಂತಾಪ ಸೂಚಿಸಿದೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಕೆ.ಎಂ.ಎ. ಅಧ್ಯಕ್ಷರಾದ ದುದ್ದಿಯಂಡ ಹೆಚ್. ಸೂಫಿ ಹಾಜಿ ಅವರು, ಮೃತ ಯೋಧ ಮಜೀದ್ ಅವರ ನಿಧನದಿಂದಾಗಿ ಸಂಸ್ಥೆಯು ಕ್ರಿಯಾಶೀಲ ಸದಸ್ಯರೊಬ್ಬರನ್ನು ಕಳೆದುಕೊಂಡಂತಾಗಿದೆ ಎಂದು ತಿಳಿಸಿದ್ದಾರೆ.
ಮಯ್ಯತ್ ನಮಾಜಿಗೆ ಮನವಿ
ಮೃತ ಮಜೀದ್ ಅವರ ಹೆಸರಿನಲ್ಲಿ ಶುಕ್ರವಾರದಂದು ಎಲ್ಲಾ ಮಸೀದಿಗಳಲ್ಲಿ ಮಯ್ಯತ್ ನಮಾಜ್ ನಿರ್ವಹಿಸುವಂತೆ ಸೂಫಿ ಹಾಜಿ ಅವರು ಮನವಿ ಮಾಡಿಕೊಂಡಿದ್ದಾರೆ.

ವರದಿ : ✍ ರಫೀಕ್ ತೂಚಮಕೇರಿ