ಭಕ್ತಾದಿಗಳ ಇಷ್ಟಾರ್ಥಗಳನ್ನು ನೆರವೇರಿಸುವ ವರದಹಳ್ಳಿಯ ಶ್ರೀ ದುರ್ಗಾಂಬಾ

24/09/2020

ಶಿವಮೊಗ್ಗ ಜಿಲ್ಲೆಯ ತಾಲೂಕು ಕೇಂದ್ರವಾದ ಸಾಗರದಿಂದ ಕೇವಲ 8 ಕಿಲೋಮೀಟರ್ ದೂರದಲ್ಲಿ ಪಶ್ಚಿಮ ಘಟ್ಟದ ವನಸಿರಿಯ ಮಡಿಲಲ್ಲಿ ಇರುವ ಪರಮ ಪಾವನ ಕ್ಷೇತ್ರವೇ ವರದಹಳ್ಳಿ (ಆಡು ಭಾಷೆಯಲ್ಲಿ ವದ್ದಳ್ಳಿ). ಇಲ್ಲೇ ಶ್ರೀ ದುರ್ಗಾಂಬಾ ದೇವಿಯ ಸನ್ನಿಧಿ. ಈ ಸ್ಥಳಕ್ಕೆ ವರದಹಳ್ಳಿ ಅಥವಾ ವರದಪುರ ಎಂಬುದಾಗಿಯೂ ಕರೆಯುತ್ತಾರೆ. ಇಲ್ಲಿಯ ದುರ್ಗಾಂಬಾ ದೇವಿಯು ಭಗವಾನ್ ವ್ಯಾಸಮಹರ್ಷಿಗಳಿಂದ ಪ್ರತಿಷ್ಠಾಪಿಸಲ್ಪಟ್ಟು ಐತಿಹ್ಯ ಹೊಂದಿ ಇಂದಿಗೂ ಭಕ್ತಿ-ಶಕ್ತಿಯ ಅಧಿದೇವತೆಯಾಗಿ ಭಕ್ತಾದಿಗಳ ಅಭೀಷ್ಠಗಳನ್ನು ನೆರವೇರಿಸುತ್ತಾ ಶ್ರೀಕ್ಷೇತ್ರದಲ್ಲಿ ನೆಲೆ ನಿಂತು ಲೋಕಪ್ರಖ್ಯಾತಳಾಗಿದ್ದಾಳೆ.

ಶ್ರೀ ದುರ್ಗಾಂಬಾ ಅಮ್ಮನವರು ಶ್ರೀಕ್ಷೇತ್ರ ವರದಪುರದ ಪಾವಿತ್ರ್ಯವನ್ನು ಎಷ್ಟು ವರ್ಣಿಸಿದರೂ ಶಬ್ದಗಳು ಸೋಲುತ್ತವೆ. ಪ್ರಕೃತಿಯೇ ಸಾಕಾರ ದೇವತೆಯಾಗಿ ಇಲ್ಲಿ ಆವಿರ್ಭವಿಸಿದ್ದಾಳೆ. ಇಲ್ಲಿಯ ಮಣ್ಣಿನ ಕಣಕಣವೂ ದೈವೀಶಕ್ತಿಯ ಆವಿರ್ಭಾವವೇ ಆಗಿದೆ. ಪೌರಾಣಿಕೆ ಹಿನ್ನೆಲೆ ಇಲ್ಲಿಯ ಭೌಗೋಳಿಕ ಸಂದರ್ಭಕ್ಕೆ ಸುವರ್ಣಚೌಕಟ್ಟನ್ನು ಕಟ್ಟಿದೆ.

ಕ್ಷೇತ್ರದ ಇತಿಹಾಸ
ಮಹಿಷಾಸುರನನ್ನು ಶ್ರೀಮಾತೆಯು ಕಾಲಿನಿಂದ ವದೆದಿದ್ದರಿಂದ ಇದು “ವದ್ದಳ್ಳಿ” ಎಂದು ಗ್ರಾಮೀಣ ಸೊಬಗನ್ನು ಮೈಗೂಡಿಸಿಕೊಂಡಿದೆ. ಆ ದೇವಿಯು ಶಕ್ತಿರೂಪಿಣಿಯಾಗಿ ಇಲ್ಲಿ ಭಕ್ತಾನುಗ್ರಹಕ್ಕೆ ಕಾತರಳಾಗಿದ್ದಾಳೆ.

ಇದು ಪೌರಾಣಿಕ ಹಿನ್ನೆಲೆಯ ಜಾಗೃತ ಕ್ಷೇತ್ರವಾಗಿರುವುದರ ಜೊತೆಜೊತೆಗೆ ಗಂಗೆ-ಯಮುನೆಯರ,ತುಂಗೆ-ಭದ್ರೆಯರ ಭಾವಸಂಗಮದಂತೆ ಶ್ರೀಮಾತೆಯ ಸನ್ನಿಧಿಯ ಪಾವಿತ್ರ್ಯದೊಂದಿಗೆ,ದತ್ತ ಪರಂಪರೆಯ,ಶ್ರೀ ರಾಮದಾಸರ ಮುಂದಿನ ಕೊಂಡಿಯಾಗಿ ಅವಧೂತರಾಗಿ, ನಡೆದಾಡುವ ದೇವರಾಗಿ ಬಾಳಿ ಬದುಕಿದ ಪರಮಪೂಜ್ಯ ಶ್ರೀ ಶ್ರೀಧರ ಸ್ವಾಮಿಗಳ ತಪೋಭೂಮಿಕೆಯಾದದ್ದು ವಿಶೇಷ. ಅವರ ಅಂತಶ್ಚಕ್ಷು,ದಿವ್ಯದೃಷ್ಟಿ ಮತ್ತಾವ ತಾಣವನ್ನೂ ಅರಸದೆ ಇದನ್ನೇ ಸಾಧನೆಯ ಕ್ಷೇತ್ರವನ್ನಾಗಿ ಆಯ್ದುಕೊಂಡದ್ದು ಈ ಸ್ಥಳದ ಮಹಿಮೆಯನ್ನು ಸಾರುತ್ತದೆ.

ದೈವಾಂಶ ಸಂಭೂತರಾದ ಪರಮಹಂಸ ಪರಿವ್ರಾಜಕಾಚಾರ್ಯ ಭಗವಾನ್ ಸದ್ಗುರು ಶ್ರೀ ಶ್ರೀಧರ ಸ್ವಾಮಿಗಳು ಈ ಕ್ಷೇತ್ರಕ್ಕೆ ಆಗಮಿಸಿ, ಕ್ಷೇತ್ರದಲ್ಲಿ ಮಹರ್ಷಿಗಳು,ಸಾಧು ಸಂತರು ನೆಲೆಸಿ ತಪಗೈದ ಮಹತ್ವ ಮನಗಂಡು ಶ್ರೀ ದುರ್ಗಾಂಬಾ ದೇವಿಯ ಕ್ಷೇತ್ರದ ಜೀರ್ಣೋದ್ಧಾರ ಮತ್ತು ಧರ್ಮ ಸಂಸ್ಥಾಪನಾ ಸಂಕಲ್ಪದಿಂದ ಶ್ರೀ ದುರ್ಗಾ ದೇವಿಗೆ ಅಷ್ಟಬಂಧ ನಡೆಸಿದರಂತೆ. ಶ್ರೀ ಕ್ಷೇತ್ರದ ಹೆಸರು ದೇಶ-ವಿದೇಶಗಳಲ್ಲಿ ಬೆಳಕು ಕಂಡಿದ್ದು ಶ್ರೀಧರರ ಕೃಪೆಯಿಂದಲೇ. ಶ್ರೀ ದುರ್ಗಾಂಬಾ ದೇವಾಲಯದಿಂದಾಗಿ ಶ್ರೀಧರರು ವರದಳ್ಳಿಯಲ್ಲಿ ನೆಲೆಸಿರುವುದೂ ಅಲ್ಲದೆ ಇಲ್ಲಿಯೇ ಮುಕ್ತರಾಗಿರುವುದೂ ಶ್ರೀ ದೇವಿಯ ಮೇಲೆ ಶ್ರೀ ಸದ್ಗುರುವಿಗೆ ಇರುವ ಅಪಾರ ಭಕ್ತಿಯಿಂದ ಎಂದು ಆಸ್ತಿಕರು ನಂಬುತ್ತಾರೆ.