ಮಡಿಕೇರಿಯಲ್ಲಿ ವಿವಿಧ ಕಾರ್ಮಿಕ ಸಂಘಟನೆಗಳಿಂದ ಪ್ರತಿಭಟನೆ : ಸರ್ಕಾರದ ವಿರುದ್ಧ ಅಸಮಾಧಾನ

24/09/2020

ಮಡಿಕೇರಿ ಸೆ. 24 : ಕೇಂದ್ರ ಸರ್ಕಾರ ಕಾರ್ಮಿಕ ಮತ್ತು ರೈತ ವಿರೋಧಿ ನೀತಿಗಳನ್ನು ಅನುಸರಿಸುತ್ತಿದೆ ಎಂದು ಆರೋಪಿಸಿ ಮತ್ತು ಶ್ರಮಜೀವಿಗಳ ಹಕ್ಕುಗಳ ರಕ್ಷಣೆಗಾಗಿ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಸಿಐಟಿಯು ಸಂಯೋಜಿತ ವಿವಿಧ ಕಾರ್ಮಿಕ ಸಂಘಟನೆಗಳು ನಗರದಲ್ಲಿ ಪ್ರತಿಭಟನೆ ನಡೆಸಿದವು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಜಮಾಯಿಸಿದ ಪ್ರತಿಭಟನಾಕಾರರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಅಸಮಾಧಾನ ವ್ಯಕ್ತಪಡಿಸಿದರು.
ಸಿಐಟಿಯು ಸಂಯೋಜಿತ ಹಮಾಲಿ ಕಾರ್ಮಿಕರ ಫೆಡರೇಷನ್‍ನ ಜಿಲ್ಲಾ ಘಟಕ, ಸರ್ಕಾರಿ ಆಸ್ಪತ್ರೆ ಸ್ವಚ್ಛತಾ ಮತ್ತು ಇತರ ಸಿಬ್ಬಂದಿಗಳ ಸಂಘ, ಗ್ರಾಮ ಪಂಚಾಯಿತಿ ನೌಕರರ ಸಂಘ ಸೇರಿದಂತೆ ವಿವಿಧ ಸಂಘಟನೆಗಳ ಪ್ರಮುಖರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಹೋರಾಟಕ್ಕೆ ಬೆಂಬಲ ಸೂಚಿಸಿದರು.
::: ಬೇಡಿಕೆಗಳು :::
2020-21ರ ಸಾಲಿನ ತುಟ್ಟಿಭತ್ಯೆಯನ್ನು ಬಾಕಿ ಸಹಿತ ನೀಡಬೇಕು, ಲಾಕ್‍ಡೌನ್ ಅವಧಿಯ ವೇತನವನ್ನು ಕಾರ್ಮಿಕರಿಗೆ ಪೂರ್ಣವಾಗಿ ಪಾವತಿಸಬೇಕು, ಕಾರ್ಮಿಕ ಕಾನೂನುಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು, ಕಾರ್ಮಿಕ ಇಲಾಖೆಯಲ್ಲಿ ಇರುವ ಅರ್ಜಿಗಳನ್ನು ತ್ವರಿತವಾಗಿ ಸಂಧಾನ ಸಭೆ ನಡೆಸಿ ಇತ್ಯರ್ಥ ಮಾಡಿ ಕಾರ್ಮಿಕರಿಗೆ ಪರಿಹಾರ ದೊರಕಿಸಿಕೊಡಬೇಕು, ಕೋವಿಡ್ ಲಾಕ್‍ಡೌನ್ ಆರ್ಥಿಕ ಹಿಂಜರಿತ ನೆಪದಲ್ಲಿ ಕಾರ್ಮಿಕರ ವಜಾ, ವರ್ಗಾವಣೆ, ವೇತನ ಕಡಿತ ಮೊದಲಾದ ಕ್ರಮಗಳನ್ನು ಕೈಬಿಡಬೇಕು, ರಾಜ್ಯ ಸರ್ಕಾರ ಘೋಷಿಸಿರುವ 2202 ಕೋಟಿ ಪರಿಹಾರವನ್ನು 125 ಕ್ಕೂ ಹೆಚ್ಚು ವಲಯದ ಕೋಟ್ಯಾಂತರ ಅಸಂಘಟಿತ ಹಾಗೂ ಸ್ವಯಂ ಉದ್ಯೋಗಿ ಕಾರ್ಮಿಕರಿಗೆ ಘೋಷಿಸಬೇಕು, ಕೇಂದ್ರ ಸರ್ಕಾರ ರಾಜ್ಯದ ಪಾಲಿನ ಜಿಎಸ್‍ಟಿ ಮತ್ತು ಪರಿಹಾರವನ್ನು ತಕ್ಷಣ ರಾಜ್ಯಕ್ಕೆ ನೀಡಬೇಕು, ಕೊರೊನಾ ವಾರಿಯರ್ಸ್‍ಗೆ ಪಿಪಿಇ ಕಿಟ್‍ಗಳು, ಆರೋಗ್ಯ ವಿಮೆ, ಪೆÇ್ರೀತ್ಸಾಹ ಧನ, ಉಚಿತ ತಪಾಸಣೆ ಮತ್ತು ಚಿಕಿತ್ಸೆ ಮತ್ತಿತರ ಸೌಲಭ್ಯಗಳನ್ನು ವಿಸ್ತರಿಸಬೇಕು, ಯೋಜನಾ ಕಾರ್ಮಿಕರಿಗೆ ಗೌರವಧನ ಪಾವತಿಸಬೇಕು, ಸರಕಾರಿ ಆಸ್ಪತ್ರೆಯ ನಾನ್ ಕ್ಲೀನಿಂಗ್ ಡಿ ಗ್ರೂಪ್ ಇನ್ನಿತರ ವಿಭಾಗದ ಕಾರ್ಮಿಕರನ್ನು ಗುತ್ತಿಗೆಯಿಂದ ವಿಮೋಚನೆಗೊಳಿಸಿ ಖಾಯಂಗೊಳಿಸಬೇಕು, ಈಗಿರುವ ಎಲ್ಲಾ ಗುತ್ತಿಗೆ ಸಿಬ್ಬಂದಿಗಳಿಗೆ ಕೋವಿಡ್ ಪ್ರೋತ್ಸಾಹ ಧನ ನೀಡಬೇಕು, ರೈತರನ್ನು, ಕಾರ್ಮಿಕರನ್ನು, ಕೃಷಿ ಕೂಲಿಕಾರರನ್ನು ಕಾರ್ಪೋರೇಟ್ ಹಿಡಿತಕ್ಕೆ ಒಪ್ಪಿಸುವ ಸುಗ್ರೀವಾಜ್ಞೆಗಳನ್ನು ಕೈಬಿಡಬೇಕು, ಉದ್ಯೋಗ ಖಾತ್ರಿ ಯೋಜನೆಯಡಿ 200 ದಿನಗಳ ಉದ್ಯೋಗ ನೀಡಬೇಕು, ಕೂಲಿಯನ್ನು ಕನಿಷ್ಟ 600 ರೂಗಳಿಗೆ ಹೆಚ್ಚಿಸಬೇಕು, ವಿದ್ಯಾವಂತ ನಿರುದ್ಯೋಗಿ ಯುವಕ ಹಾಗೂ ಯುವತಿಯರಿಗೆ ನಿರುದ್ಯೋಗ ಭತ್ಯೆ ಮಾಸಿಕ 10,000 ರೂಗಳನ್ನು ನೀಡಬೇಕು, ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಬಲಪಡಿಸಬೇಕು, ಜಿಡಿಪಿ ಯ 3 ಶೇಕಡ ಹಣವನ್ನು ಆರೋಗ್ಯ ಕ್ಷೇತ್ರಕ್ಕೆ ಮೀಸಲಿಡಬೇಕು, ಎಲ್ಲಾ ಬೋಧಕ ಮತ್ತು ಬೋಧಕೇತ್ತರ ಸಿಬ್ಬಂದಿಯ ಉದ್ಯೋಗ ಮತ್ತು ವೇತನ ಸಂರಕ್ಷಿಸಬೇಕು, ಕೇಂದ್ರೀಕರಣ, ವಾಣಿಜ್ಯಕರಣ ಮತ್ತು ಕೋಮುವಾದೀಕರಣಕ್ಕೆ ಎಡೆ ಮಾಡುವ ನೂತನ ಶಿಕ್ಷಣ ನೀತಿ-2020 ರದ್ದುಪಡಿಸಬೇಕು, ಸಾರ್ವತ್ರಿಕ ಶಿಕ್ಷಣ ಬಲಪಡಿಸಬೇಕು, ಐಸಿಡಿಎಸ್ ಯೋಜನೆ ಬಲಪಡಿಸಬೇಕು, ಕಾರ್ಮಿಕ ಸಂಘದ ಕಡ್ಡಾಯ ಮಾನ್ಯತೆಯ ಶಾಸನ ರೂಪಿಸಬೇಕು, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಸೌಲಭ್ಯಗಳನ್ನು ನೀಡಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಸಿಐಟಿಯು ಜಿಲ್ಲಾಧ್ಯಕ್ಷ ಮಹದೇವ್, ಪ್ರಧಾನ ಕಾರ್ಯದರ್ಶಿ ಎ.ಸಿ.ಸಾಬು, ಉಪಾಧ್ಯಕ್ಷ ಎನ್.ಡಿ.ಕುಟ್ಟಪ್ಪ, ಖಜಾಂಚಿ ಹೆಚ್.ಬಿ.ರಮೇಶ್, ಗ್ರಾ.ಪಂ ನೌಕರರ ಸಂಘದ ಜಿಲ್ಲಾಧ್ಯಕ್ಷ ಪಿ.ಆರ್.ಭರತ್, ಹಮಾಲಿ ಕಾರ್ಮಿಕರ ಸಂಘದÀ ಜಿಲ್ಲಾ ಕಾರ್ಯದರ್ಶಿ ಹಸನಬ್ಬ, ಮಡಿಕೇರಿ ತಾಲ್ಲೂಕು ಖಜಾಂಚಿ ಕೆ.ಸಿ.ಜಗನ್ನಾಥ್, ಪ್ರಮುಖರಾದ ಡಾ.ಈ.ರಾ.ದುರ್ಗಪ್ರಸಾದ್, ಗೋಪಿ, ಬಷೀರ್, ಸುಲೈಮಾನ್, ಮಧುಸೂದನ್, ಸುನೀಲ್, ಲೋಹಿತ್ ಮತ್ತಿತರ ಪ್ರಮುಖರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.