ನೋಂದಣಿಯಾಗಿರುವ ಹೋಂ ಸ್ಟೇಗಳ ಮಾಹಿತಿ ನೀಡಲು ಜಿಲ್ಲಾಧಿಕಾರಿ ಸೂಚನೆ

24/09/2020

ಮಡಿಕೇರಿ ಸೆ.24 : ಜಿಲ್ಲೆಯಲ್ಲಿ ಅಧಿಕೃತವಾಗಿ ಆನ್‍ಲೈನ್ ಮೂಲಕ ನೋಂದಣಿಯಾಗಿರುವ ಹೋಂ ಸ್ಟೇಗಳ ದಾಖಲಾತಿಗಳನ್ನು ಪರಿಶೀಲಿಸಿ ಒಂದು ವಾರದೊಳಗೆ ವರದಿ ನೀಡುವಂತೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನೋಂದಣಿಯಾಗಿರುವ ಹೋಂ ಸ್ಟೇ ಸಂಬಂಧಿಸಿದಂತೆ ಮಾಹಿತಿ ಪಡೆದು ಅವರು ಮಾತನಾಡಿದರು.
ಕಂದಾಯ ಸಚಿವರ ಸೂಚನೆಯಂತೆ ಅಧಿಕೃತ ಹೋಂ ಸ್ಟೇಗಳ ದಾಖಲಾತಿಗಳನ್ನು ಪರಿಶೀಲಿಸಲಾಗುತ್ತಿದ್ದು, ಈ ಸಂಬಂಧ ಹೋಬಳಿವಾರು ಮಾಹಿತಿ ಸಂಗ್ರಹಿಸಲು ಸೂಚಿಸಲಾಗಿತ್ತು, ಆದರೆ ಕೆಲವು ಹೋಬಳಿಗಳಲ್ಲಿ ಸರಿಯಾದ ಮಾಹಿತಿ ನೀಡಿಲ್ಲ ಎಂದರು.
ಆನ್‍ಲೈನ್ ಮೂಲಕ ನೋಂದಣಿಯಾಗಿರುವ ಹೋಂ ಸ್ಟೇಗಳಿಗೆ ಸಂಬಂಧಿಸಿದಂತೆ ದಾಖಲಾತಿ ಸಮರ್ಪಕವಾಗಿ ಇಲ್ಲದಿದ್ದರೆ 20 ದಿನದೊಳಗೆ ದಾಖಲಾತಿ ಸರಿಪಡಿಸಿಕೊಳ್ಳಬೇಕು ಎಂದು ಅನೀಸ್ ಕಣ್ಮಣಿ ಜಾಯ್ ಅವರು ಹೇಳಿದರು.
ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರಾದ ರಾಘವೇಂದ್ರ ಅವರು ಮಾಹಿತಿ ನೀಡಿ ಜಿಲ್ಲೆಯಲ್ಲಿ 397 ಹೋಂ ಸ್ಟೇಗಳು ಆನ್‍ಲೈನ್ ಮೂಲಕ ನೋಂದಣಿಯಾಗಿದೆ. ಇದರಲ್ಲಿ 136 ಉಪ ತಹಶೀಲ್ದಾರರು ಪರಿಶೀಲಿಸಿ ವರದಿ ನೀಡಿದ್ದಾರೆ. 15 ಹೋಂ ಸ್ಟೇಗಳ ದಾಖಲಾತಿ ಸರಿಯಾಗಿದ್ದು, 80 ಹೋಂ ಸ್ಟೇಗಳ ದಾಖಲಾತಿ ಅಪೂರ್ಣ ಎಂದು ವರದಿ ನೀಡಿದ್ದಾರೆ ಎಂದು ತಿಳಿಸಿದರು. ತಹಶೀಲ್ದಾರ್ ಮಹೇಶ್, ಗೋವಿಂದ ರಾಜು, ನಂದೀಶ್, ಇತರರು ಇದ್ದರು.