ಬೆಳೆ ಸಮೀಕ್ಷೆ ಪೂರ್ಣಗೊಳಿಸಲು ಜಿಲ್ಲಾಧಿಕಾರಿ ಸೂಚನೆ

ಮಡಿಕೇರಿ ಸೆ.24 : ಬೆಳೆ ಸಮೀಕ್ಷೆಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಸೂಚಿಸಿದ್ದಾರೆ. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬೆಳೆ ಸಮೀಕ್ಷೆಯ ಪ್ರಗತಿ ಸಂಬಂಧ ಮಾಹಿತಿ ಪಡೆದು ಅವರು ಮಾತನಾಡಿದರು.
ಬೆಳೆಯನ್ನು ನಿಖರವಾಗಿ ಸಮೀಕ್ಷೆ ಮಾಡಬೇಕು. ಬೆಳೆ ಸಮೀಕ್ಷೆ ಬಗ್ಗೆ ದೂರುಗಳು ಕೇಳಿ ಬರದಂತೆ ಗಮನಹರಿಸಬೇಕು ಎಂದು ಜಿಲ್ಲಾಧಿಕಾರಿ ಅವರು ನಿರ್ದೇಶನ ನೀಡಿದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಶಬಾನಾ ಎಂ.ಶೇಖ್ ಅವರು ಮಾತನಾಡಿ ಜಿಲ್ಲೆಯಲ್ಲಿ 2,59,886 ತಾಕುಗಳಲ್ಲಿ 56,969 ತಾಲ್ಲೂಕುಗಳಲ್ಲಿ ಬೆಳೆ ಸಮೀಕ್ಷೆಯ ಸರ್ವೇ ಆಗಿದೆ ಎಂದು ಮಾಹಿತಿ ನೀಡಿದರು.
ಬೆಳೆ ವಿಮೆ ಸಂಬಂಧಿಸಿದಂತೆ ಮಾಹಿತಿ ನೀಡಿದ ಕೃಷಿ ಇಲಾಖೆಯ ಉಪ ನಿರ್ದೇಶಕರಾದ ರಾಜು ಅವರು ಜಿಲ್ಲೆಯಲ್ಲಿ 648 ಮಂದಿ ಬೆಳೆ ವಿಮೆ ಅಡಿ ಹೆಸರು ನೋಂದಾಯಿಸಿದ್ದು, ಸಂಪೂರ್ಣ ಬೆಳೆ ನಷ್ಟವಾದ ಒಂದು ಎಕರೆ ನೀರಾವರಿ ಭತ್ತಕ್ಕೆ 34 ಸಾವಿರ ರೂ. ಮಳೆಯಾಶ್ರಿತ ಭತ್ತ ಬೆಳೆಗೆ 22 ಸಾವಿರ ರೂ. ಹಾಗೂ ಮುಸುಕಿನ ಜೋಳಕ್ಕೆ 23 ಸಾವಿರ ರೂ. ವಿಮೆ ಸೌಲಭ್ಯವಿದೆ ಎಂದು ಅವರು ಮಾಹಿತಿ ನೀಡಿದರು. ಭತ್ತ ಮತ್ತು ಮುಸುಕಿನ ಜೋಳ ಬೆಳೆ ಸಂಪೂರ್ಣ ಹಾನಿಯಾಗಿದ್ದಲ್ಲಿ ಮಾತ್ರ ಬೆಳೆ ವಿಮೆ ನೀಡಲಾಗುತ್ತದೆ ಎಂದರು.
‘ಬೆಳೆ ವಿಮೆ ಸಂಬಂಧಿಸಿದಂತೆ ಮಾತನಾಡಿದ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ರೈತರೊಂದಿಗೆ ಚರ್ಚಿಸುವುದರ ಜೊತೆಗೆ ಸಹಕಾರ ಸಂಘಗಳ ಸಹಕಾರ ಪಡೆಯುವಂತೆ ಸಲಹೆ ಮಾಡಿದರು.’
ತಹಶೀಲ್ದಾರ್ ಮಹೇಶ್, ಗೋವಿಂದ ರಾಜು, ನಂದೀಶ್, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರು, ಉಪ ತಹಶೀಲ್ದಾರರು, ಕಂದಾಯ ನಿರೀಕ್ಷಕರು ಇತರರು ಹಾಜರಿದ್ದರು.
