ಜಮೀನಿಗಾಗಿ ಮಾಜಿ ಸೈನಿಕರಿಂದ ಅರ್ಜಿ : ಶೀಘ್ರ ವಿಲೇವಾರಿಗೆ ಜಿಲ್ಲಾಧಿಕಾರಿ ಸೂಚನೆ

September 26, 2020

ಮಡಿಕೇರಿ ಸೆ.26 : ಜಿಲ್ಲೆಯಲ್ಲಿ ಮಾಜಿ ಸೈನಿಕರಿಂದ ಭೂಮಿ ನೀಡಬೇಕೆಂದು ಸಲ್ಲಿಕೆಯಾಗಿರುವ ಸುಮಾರು 379 ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡುವ ನಿಟ್ಟಿನಲ್ಲಿ ಹೋಬಳಿವಾರು ಅಗತ್ಯ ಕ್ರಮವಹಿಸುವಂತೆ ಸೈನಿಕ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರು ಹಾಗೂ ತಹಶೀಲ್ದಾರರಿಗೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಸ್ಪಷ್ಟ ನಿರ್ದೇಶನ ನೀಡಿದ್ದಾರೆ.
ನಗರದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ‘ಜಿಲ್ಲಾ ಸೈನಿಕರ ಮಂಡಳಿ ಸಭೆ’ಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಾಜಿ ಸೈನಿಕರು ಭೂಮಿಗಾಗಿ ಸಲ್ಲಿಕೆಯಾಗಿರುವ ಅರ್ಜಿಗಳ ಪರಿಶೀಲನೆ ಸಂಬಂಧ ಉಪ ತಹಶೀಲ್ದಾರರು, ಕಂದಾಯ ನಿರೀಕ್ಷಕರು, ಗ್ರಾ.ಪಂ.ಅಭಿವೃದ್ಧಿ ಅಧಿಕಾರಿಗಳ ಜೊತೆ ಖುದ್ದು ಸೈನಿಕ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರು ಹಾಜರಾಗಿ ವಿಲೇವಾರಿ ಮಾಡಬೇಕು. ಜೊತೆಗೆ ಈ ಸಂಬಂಧ ಪಟ್ಟಿ ಸಿದ್ಧಪಡಿಸಿ ಉಪ ವಿಭಾಗಾಧಿಕಾರಿ ಕಚೇರಿಗೆ ಕಳುಹಿಸಿಕೊಡುವಂತೆ ಜಿಲ್ಲಾಧಿಕಾರಿ ಅವರು ನಿರ್ದೇಶನ ನೀಡಿದರು.
ಯಾವ ಯಾವ ದಿನಾಂಕದಂದು ಹೋಬಳಿಗೆ ತೆರಳಲಾಗುತ್ತದೆ ಎಂಬ ಬಗ್ಗೆ ಮುಂಚಿತವಾಗಿ ಆಯಾಯ ಹೋಬಳಿ ವ್ಯಾಪ್ತಿಯ ಮಾಜಿ ಸೈನಿಕರಿಗೆ ಮಾಹಿತಿ ನೀಡಬೇಕು. ಭೂಮಿಗೆ ಸಲ್ಲಿಕೆಯಾಗಿರುವ ಅರ್ಜಿಗಳ ವಿಲೇವಾರಿ ಸಂಬಂಧ ಅಕ್ಟೋಬರ್ 15 ರೊಳಗೆ ಪೂರ್ಣಗೊಳಿಸುವಂತೆ ಸೈನಿಕ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಿಗೆ ಅನೀಸ್ ಕಣ್ಮಣಿ ಜಾಯ್ ಅವರು ಸೂಚಿಸಿದರು.
ಮಾಜಿ ಸೈನಿಕರ ಕುಂದು ಕೊರತೆ ಸಂಬಂಧಿಸಿದಂತೆ ಸೈನಿಕ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಬೇಕು. ಯಾವುದೇ ಕಾರಣಕ್ಕೂ ವಿಳಂಬ ಮಾಡಬಾರದು. ಭೂಮಿ ಇತರ ವಿಚಾರಕ್ಕೆ ಸಂಬಂಧಿಸಿದಂತೆ ತಕ್ಷಣವೇ ಸ್ಪಂದಿಸುವ ಕೆಲಸವಾಗಬೇಕು. ಕಂದಾಯಾಧಿಕಾರಿಗಳ ಸಭೆಯಲ್ಲಿ ಈ ಬಗ್ಗೆ ಬೆಳಕು ಚೆಲ್ಲಬೇಕು ಎಂದು ಜಿಲ್ಲಾಧಿಕಾರಿ ಅವರು ಸಲಹೆ ಮಾಡಿದರು.
ಸೈನಿಕ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ಗೀತಾ ಅವರು ಮಾಜಿ ಸೈನಿಕರು ಕೃಷಿ ಸಾಲ ಪಡೆಯುವಂತಾಗಲು ವ್ಯವಸ್ಥೆ ಮಾಡಬೇಕಿದೆ ಎಂದು ಅವರು ಕೋರಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಅವರು ಲೀಡ್ ಬ್ಯಾಂಕ್ ವ್ಯವಸ್ಥಾಪಕರ ಜತೆ ಚರ್ಚಿಸುವಂತೆ ಸಲಹೆ ಮಾಡಿದರು.
ಮಾಜಿ ಸೈನಿಕರು ಆಶ್ರಯ ಯೋಜನೆಯಡಿ ಶೇ.1 ರಷ್ಟು ಮೀಸಲಾತಿಗೆ ಅನುಗುಣವಾಗಿ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಆದರೆ ಮಾಜಿ ಸೈನಿಕರ ಕೋಟಾದ ಆಯ್ಕೆಯಲ್ಲಿ ಆನ್‍ಲೈನ್ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಅಂತರ್ಜಾಲದಲ್ಲಿ ವ್ಯವಸ್ಥೆ ಮಾಡಬೇಕಿದೆ ಎಂದು ಗೀತಾ ಅವರು ಮನವಿ ಮಾಡಿದರು.
ಸಮಿತಿಯ ಉಪಾಧ್ಯಕ್ಷರಾದ ಓ.ಎಸ್.ಚಿಂಗಪ್ಪ ಅವರು ಮಾಜಿ ಸೈನಿಕರ ಕಲ್ಯಾಣಕ್ಕಾಗಿ ಕರ್ಣಂಗೇರಿ ವ್ಯಾಪ್ತಿಯಲ್ಲಿ 7 ಸೆಂಟ್ ಜಾಗ ನೀಡಬೇಕು ಎಂದು ಮನವಿ ಮಾಡಲಾಗಿದೆ. ಈ ಸಂಬಂಧ ಜಾಗ ಗುರುತಿಸಿಕೊಡಬೇಕು ಎಂದು ಮನವಿ ಮಾಡಿದರು. ಈ ಕುರಿತು ಭೂ ದಾಖಲೆಗಳ ಉಪ ನಿರ್ದೇಶಕರಿಗೆ ಜಾಗ ಗುರ್ತಿಸಿಕೊಡಲು ಜಿಲ್ಲಾಧಿಕಾರಿ ಅವರು ಸೂಚಿಸಿದರು.
ಮಾಜಿ ಸೈನಿಕರ ಕುಂದುಕೊರತೆ ಸಂಬಂಧಿಸಿದಂತೆ ಆರು ತಿಂಗಳಿಗೊಮ್ಮೆಯಾದರೂ ಸಭೆ ನಡೆಸಬೇಕು. ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಾಜಿ ಸೈನಿಕರಿಗಾಗಿ ನಿವೇಶನ ಒದಗಿಸಬೇಕು ಎಂದು ಒ.ಎಸ್.ಚಿಂಗಪ್ಪ ಅವರು ಕೋರಿದರು.
ಉಪ ವಿಭಾಗಾಧಿಕಾರಿ ಈಶ್ವರ್ ಕುಮಾರ್ ಖಂಡು, ಸಮಿತಿ ಸದಸ್ಯರಾದ ಸುಬೇದಾರ್ ಪುರುಷೋತ್ತಮ, ಹವಾಲ್ದಾರ್ ವಿಜಯ ಕುಮಾರ್, ತಹಶೀಲ್ದಾರರಾದ ಗೋವಿಂದ ರಾಜು, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಪಿ.ಎಸ್.ಮಚ್ಚಾಡೋ, ಭೂದಾಖಲೆಗಳ ಉಪ ನಿರ್ದೇಶಕರಾದ ಶ್ರೀನಿವಾಸ್, ಪೊಲೀಸ್ ಇನ್ಸ್‍ಪೆಕ್ಟರ್ ಐ.ಪಿ.ಮೇದಪ್ಪ, ನಗರಸಭೆ ಪೌರಾಯುಕ್ತರಾದ ರಾಮದಾಸ್, ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿಯ ವ್ಯವಸ್ಥಾಪಕರಾದ ಶಾಂತಿ, ಶಿರಸ್ತೆದಾರ್ ಪ್ರಕಾಶ್ ಇತರರು ಹಾಜರಿದ್ದರು.

error: Content is protected !!