ಜಾಗೃತಿ ಬೀದಿ ನಾಟಕ : ಕೋವಿಡ್ ವಿರುದ್ಧ ಎಲ್ಲರೂ ಜಾಗೃತರಾಗಿ : ಪ.ಪಂ ಮುಖ್ಯಾಧಿಕಾರಿ ಎ.ಎಂ.ಶ್ರೀಧರ್ ಸಲಹೆ

26/09/2020

ಮಡಿಕೇರಿ ಸೆ.26 : ಕೊರೋನಾ ವೈರಸ್ ತಡೆಗಟ್ಟಲು ಅನೇಕ ಕಾರ್ಯಕ್ರಮಗಳನ್ನು ಸರ್ಕಾರ ಹಮ್ಮಿಕೊಂಡಿದ್ದರೂ ಎಲ್ಲವನ್ನೂ ನೋಡಿಕೊಳ್ಳುವುದು ಕಷ್ಟ. ಆದ್ದರಿಂದ ನಮ್ಮ ಆರೋಗ್ಯ ನಮ್ಮ ಕೈಯಲ್ಲಿ ಎಂಬಂತೆ ಪ್ರತಿಯೊಬ್ಬರೂ ಮಾಸ್ಕ್ ಧರಿಸುವ ಮೂಲಕ ಅಂತರ ಕಾಯ್ದುಕೊಂಡು ಕೊರೋನಾ ವೈರಸ್‍ನ್ನು ಹೆದರಿಸುವಂತಾಗಬೇಕು ಎಂದು ವೀರಾಜಪೇಟೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎ.ಎಂ.ಶ್ರೀಧರ್ ಹೇಳಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಪಟ್ಟಣದ ಅರಸು ನಗರದ ಸಮುದಾಯ ಭವನದಲ್ಲಿ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿ ದಾವಣಗೆರೆ ಚನ್ನಗಿರಿಯ ಶೃತಿ ಸಾಂಸ್ಕøತಿಕ ಕಲಾ ತಂಡದವರಿಂದ ಆಯೋಜಿಸಿದ್ದ ಕೋವಿಡ್-19, ಮದ್ಯಪಾನದ ವಿರುದ್ಧ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಬೀದಿ ನಾಟಕ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಬೀದಿ ನಾಟಕದ ಮೂಲಕ ಜನರಿಗೆ ಜಾಗೃತಿ ಮೂಡಿಸುವುದರೊಂದಿಗೆ ಉತ್ತಮ ಕಾರ್ಯಗಳಿಗೆ ಕೈಜೋಡಿಸುತ್ತಿರುವುದು ಶ್ಲಾಘನೀಯ. ಆರೋಗ್ಯಕ್ಕೆ ಹಾನಿಕರವಾದ ಮಾದಕ ವಸ್ತುಗಳನ್ನು ದೂರಮಾಡಿ ಉತ್ತಮ ಸಮಾಜ ನಿರ್ಮಾಣಕ್ಕೆ ಯುವ ಜನಾಂಗ ಮುಂದಾಗಬೇಕು ಎಂದರು.
ಯೋಜನೆಯ ಅಧಿಕಾರಿ ಸದಾಶಿವಗೌಡ ಅವರು ಮಾತನಾಡಿ, ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಯಾವುದೇ ಬೇಧಭಾವ ಇಲ್ಲ. ಸರ್ವ ಧರ್ಮ ಸಮನ್ವಯ ಎಂಬುದು ಅಭಿವೃದ್ಧಿಗೆ ಪೂರಕ. ಈ ವರ್ಷ ಮಹಿಳಾ ಸಬಲಿಕರಣಕ್ಕಾಗಿಯೇ ಇರುವ ನೂರು ಕಾರ್ಯಕ್ರಮಗಳನ್ನು 7 ವಲಯಗಳಲ್ಲಿ ನಡೆಸಲಾಗುವುದು. ಅದರಲ್ಲಿ 35 ರಿಂದ 40 ಮುಖ್ಯವಾದ ಕಾರ್ಯಕ್ರಮಗಳಾಗಿವೆ. ಜನರು ಮಾದಕ ವಸ್ತುಗಳಿಂದ ದೂರವಿರುವಂತೆ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಬೀದಿ ನಾಟಕ ಹಮ್ಮಿಕೊಳ್ಳಲಾಗಿದೆ ಎಂದರಲ್ಲದೆ ಜನರು ನೆಮ್ಮದಿಯ ಬದುಕು ನಡೆಸುವಂತಾಗಲಿ ಎಂದು ಆಶಿಸಿದರು.
ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷೆ ಎಂ.ಕೆ.ದೇಚಮ್ಮ ಅವರು, ಗ್ರಾಮಾಭಿವೃದ್ಧಿ ಯೋಜನೆಯ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮದಡಿ ಜನಜಾಗೃತಿ ಮೂಡಿಸುತ್ತಿರುವುದು, ಸಂಘದ ಮೂಲಕ ಮಹಿಳೆ ಮುಂದೆ ಬರುವಂತಾಗಿರುವುದು ಶ್ಲಾಘನೀಯ. ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವಂತಾಗಬೇಕು ಎಂದರು.
ವೇದಿಕೆಯಲ್ಲಿದ್ದ ಪಟ್ಟಣ ಪಂಚಾಯಿತಿ ಸದಸ್ಯ ಎಸ್.ಹೆಚ್.ಮತೀನ್ ಮಾತನಾಡಿದರು. ಬಿಟ್ಟಂಗಾಲ ಒಕ್ಕೂಟದ ಉಪಾಧ್ಯಕ್ಷ ರಂಜನ್, ಅರಸು ನಗರದ ಮುತ್ತಪ್ಪ ದೇವಾಲಯ ಸಮಿತಿಯ ಸದಾಶಿವ ಹಾಗೂ ಇತರರು ಉಪಸ್ಥಿತರಿದ್ದರು.
ಚಿಕ್ಕಪೇಟೆ ಒಕ್ಕೂಟದ ಅಧ್ಯಕ್ಷೆ ಪಿ.ಎಸ್.ವಿಮಲಾ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ, ಪೋಷಕರು ತಮ್ಮ ಮಕ್ಕಳ ಬಗ್ಗೆ ಎಚ್ಚರ ವಹಿಸಬೇಕು ಹಾಗೂ ಮಕ್ಕಳು ದುಶ್ಚಟಗಳಿಂದ ದೂರ ಇರುವಂತೆ ನೋಡಿಕೊಳ್ಳಬೇಕು ಎಂದರು. ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕರಾದ ರತ್ನ ಮೈಪಾಲ ಸ್ವಾಗತಿಸಿದರೆ, ಸಂಯೋಜಕಿ ಅಂಬಿಕಾ ವಂದಿಸಿದರು. ಕಾರ್ಯಕ್ರಮದಲ್ಲಿ ವಲಯದ ಎಲ್ಲಾ ಸೇವಾ ಪ್ರತಿನಿಧಿಗಳು ಹಾಜರಿದ್ದರು.