ಕಾರ್ಮಿಕ ವಿರೋಧಿ ಕಾಯ್ದೆ ಹಿಂಪಡೆಯಲು ಐಎನ್‍ಟಿಯುಸಿ ಒತ್ತಾಯ

26/09/2020

ಮಡಿಕೇರಿ ಸೆ.26 : ಕಾರ್ಮಿಕರ ಹಕ್ಕುಗಳನ್ನು ಕಸಿದುಕೊಳ್ಳುವ ಪ್ರಯತ್ನವಾಗಿ ಕೇಂದ್ರ ಸರ್ಕಾರ ನೂತನ ಕಾರ್ಮಿಕ ಮಸೂದೆಗಳನ್ನು ಜಾರಿಗೆ ತಂದಿದೆ ಎಂದು ಆರೋಪಿಸಿರುವ ಐಎನ್‍ಟಿಯುಸಿ ಸಂಘಟನೆಯ ರಾಜ್ಯ ಉಪಾಧ್ಯಕ್ಷ ನಾಪಂಡ ಮುತ್ತಪ್ಪ ಅವರು ಕಾರ್ಮಿಕ ಸಂಘಟನೆಗಳನ್ನು ಒಗ್ಗೂಡಿಸಿ ಹೋರಾಟ ನಡೆಸುವ ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಹಲವು ದಶಕಗಳ ಕಾರ್ಮಿಕ ಸಮುದಾಯದ ಹೋರಾಟದ ಫಲವಾಗಿ ಜಾರಿಯಲ್ಲಿದ್ದ ಕಾರ್ಮಿಕ ಹಕ್ಕುಗಳ ಪರವಾದ ಮಸೂದೆಗಳಿಗೆ ಕೇಂದ್ರ ಸರ್ಕಾರ ತಿದ್ದುಪಡಿ ತರುವ ಮೂಲಕ ಮಾಲೀಕರುಗಳಿಗೆ ಅನುಕೂಲ ಕಲ್ಪಿಸಿಕೊಟ್ಟಿದೆ ಎಂದು ಆರೋಪಿಸಿದರು.
ಕಾರ್ಮಿಕರಿಗೆ ಸಿಗಬೇಕಾದ ಯಾವುದೇ ಸೌಲಭ್ಯಗಳನ್ನು ನೀಡದೆ ಏಕಾಏಕಿ ಕಾರ್ಖಾನೆಗಳನ್ನು ಮುಚ್ಚಲು ದಾರಿ ಸುಗಮ ಮಾಡಿಕೊಡಲಾಗಿದೆ. ದಿನಕ್ಕೆ 13 ಗಂಟೆ ದುಡಿಸಿಕೊಳ್ಳಲು ಮತ್ತು ಹೆಚ್ಚುವರಿ ಕೆಲಸದ ವೇತನ ನೀಡದೆ ಇರಲು ಪರೋಕ್ಷವಾಗಿ ಬೆಂಬಲ ಸೂಚಿಸಲಾಗಿದೆ. 7-8 ಹೆಸರುಗಳಲ್ಲಿ ಸಂಸ್ಥೆಗಳನ್ನು ನೋಂದಣಿ ಮಾಡಿಕೊಂಡು ಯಾವುದೇ ಸೌಲಭ್ಯಗಳನ್ನು ನೀಡದೆ 200- 300 ಮಂದಿ ಕಾರ್ಮಿಕರನ್ನು ದುಡಿಸಿಕೊಳ್ಳಬಹುದಾದ ಮಾಲೀಕರುಗಳಿಗೆ ತೆರಿಗೆ ವಂಚನೆಯಂತಹ ಹಗಲು ದರೋಡೆಗೆ ಸರ್ಕಾರವೇ ಅವಕಾಶ ಕಲ್ಪಿಸಿದೆ. ಕನಿಷ್ಠ ವೇತನ 14 ಸಾವಿರ ರೂ. ಗಳನ್ನು ಪಾವತಿಸುವಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗದ ಸರ್ಕಾರ ಇರುವ ಸೌಲಭ್ಯಗಳನ್ನೇ ಕಸಿದುಕೊಳ್ಳುವ ಮಸೂದೆಗಳನ್ನು ಜಾರಿಗೆ ತರುವ ಮೂಲಕ ಕಾರ್ಮಿಕ ಸಮುದಾಯವನ್ನು ಜೀತ ಪದ್ಧತಿಗೆ ದೂಡಿದೆ. ಈ ರೀತಿಯ ಕಾನೂನು ಬ್ರಿಟಿಷರ ಕಾಲದಲ್ಲೂ ಜಾರಿಯಾಗಿರಲಿಲ್ಲ ಎಂದು ಮುತ್ತಪ್ಪ ಟೀಕಿಸಿದರು.
ತಕ್ಷಣ ಕಾಯ್ದೆಯನ್ನು ರದ್ದು ಪಡಿಸಿ ಕಾರ್ಮಿಕರ ಪರವಾದ ನೀತಿಗಳನ್ನು ಜಾರಿಗೆ ತಾರದಿದ್ದಲ್ಲಿ ಹೋರಾಟವನ್ನು ತೀವ್ರಗೊಳಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸಂಘ ಪರಿವಾರದ ಕಾರ್ಮಿಕ ಸಂಘಟನೆ ಭಾರತೀಯ ಮಜ್ದೂರ್ ಸಂಘ ಕೂಡ ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ಮಸೂದೆಯನ್ನು ವಿರೋಧಿಸಿದೆ. ಈ ಸಂಘಟನೆಯೊಂದಿಗೂ ಐಎನ್‍ಟಿಯುಸಿ ಚರ್ಚಿಸಿ ಹೋರಾಟದ ರೂಪು ರೇಷೆ ಸಿದ್ಧಪಡಿಸುವುದಾಗಿ ಹೇಳಿದರು.
ಕೋವಿಡ್ ಪರಿಸ್ಥಿತಿಯಿಂದಾಗಿ ಕೊಡಗು ಜಿಲ್ಲೆಯಲ್ಲಿ 60 ಸಾವಿರಕ್ಕೂ ಅಧಿಕ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದು, 25 ಸಾವಿರ ಕಾರ್ಮಿಕರು ಕೆಲಸ ಕಳೆದುಕೊಂಡಿದ್ದಾರೆ ಎಂದರು.
ಕೇಂದ್ರದ ಕೃಷಿ ನೀತಿ ವಿರುದ್ಧ ರೈತ ಸಂಘಟನೆಗಳು ಸೆ.28 ರಂದು ನಡೆಸುತ್ತಿರುವ ಪ್ರತಿಭಟನೆಗೆ ಐಎನ್‍ಟಿಯುಸಿ ಸಂಘಟನೆ ನೈತಿಕ ಬೆಂಬಲ ನೀಡಲಿದೆ ಎಂದು ಮುತ್ತಪ್ಪ ತಿಳಿಸಿದರು.
ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷ ಕೆ.ಇ.ಮ್ಯಾಥ್ಯು ಮಾತನಾಡಿ ಕೇಂದ್ರ ಸರ್ಕಾರ ಕಾರ್ಮಿಕರು, ರೈತರು ಹಾಗೂ ಜನಸಾಮಾನ್ಯರ ಶೋಷಣೆಯಲ್ಲಿ ತೊಡಗಿದೆ ಎಂದು ಆರೋಪಿಸಿದರು. ಅಧಿಕಾರಕ್ಕೆ ಬರುವ ಸಂದರ್ಭ ನೀಡಿದ ಭರವಸೆಗಳೆಲ್ಲವೂ ಹುಸಿಯಾಗಿದ್ದು, ದೇಶದ ಜನ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಟೀಕಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾರ್ಮಿಕ ಘಟಕದ ರಾಜ್ಯ ಕಾರ್ಯದರ್ಶಿ ಅಜ್ಜಳ್ಳಿ ರವಿ, ಐಎನ್‍ಟಿಯುಸಿ ಜಿಲ್ಲಾಧ್ಯಕ್ಷ ಗೋವಿಂದರಾಜ್ ದಾಸ್, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ತೆನ್ನಿರ ಮೈನಾ, ಹಾಗೂ ಎನ್‍ಎಸ್‍ಯುಐ ಜಿಲ್ಲಾಧ್ಯಕ್ಷ ತ್ರಿನೇಶ್ ಉಪಸ್ಥಿತರಿದ್ದರು.