ಕಾನೂನು ಸ್ವಯಂ ಸೇವಕರಿಗೆ ತರಬೇತಿ ಕಾರ್ಯಾಗಾರ : ಕಾನೂನು ಸಮಾಜಕ್ಕೆ ಬೇಲಿ ಇದ್ದಂತೆ : ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಅಭಿಪ್ರಾಯ

September 26, 2020

ಮಡಿಕೇರಿ ಸೆ.26 : ಪ್ರತಿಯೊಬ್ಬರೂ ಕಾನೂನಿನ ಜ್ಞಾನ ಹೊಂದಿದ್ದಲ್ಲಿ ಉತ್ತಮ ಬದುಕು ನಡೆಸಬಹುದು. ಕಾನೂನು ಒಂದು ರೀತಿ ಸಮಾಜದಲ್ಲಿ ಬೇಲಿ ಇದ್ದಂತೆ, ಅರೆಕಾಲಿಕ ಕಾನೂನು ಸ್ವಯಂ ಸೇವಕರು ಕಾನೂನಿನ ಸಲಹೆ, ಸಹಕಾರ ಪಡೆದು ಸಮಾಜಕ್ಕೆ ಒಳಿತು ಮಾಡಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಅವರು ಅಭಿಪ್ರಾಯಪಟ್ಟಿದ್ದಾರೆ.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ವಕೀಲರ ಸಂಘ ಮತ್ತು ಮಡಿಕೇರಿ ರೋಟರಿ ವತಿಯಿಂದ ಅರೆಕಾಲಿಕ ಕಾನೂನು ಸ್ವಯಂ ಸೇವಕರಿಗೆ ಗುರುತಿನ ಚೀಟಿ ವಿತರಣೆ ಹಾಗೂ ತರಬೇತಿ ಕಾರ್ಯಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸಮಾಜದಲ್ಲಿ ಸೇವಾ ಮನೋಭಾವ, ಕರ್ತವ್ಯ ಪ್ರಜ್ಞೆ ಇದಲ್ಲಿ ಉತ್ತಮ ಸಮಾಜ ಕಾಣಬಹುದಾಗಿದೆ. ಆ ನಿಟ್ಟಿನಲ್ಲಿ ಅರೆಕಾಲಿಕ ಕಾನೂನು ಸ್ವಯಂ ಸೇವಕರ ಕರ್ತವ್ಯ ನಿರ್ವಹಣೆ ಒಂದು ರೀತಿಯಲ್ಲಿ ಉತ್ತಮ ಕಾರ್ಯವಾಗಿದೆ ಎಂದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನೀಸ ಅವರು ಮಾತನಾಡಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರವು ‘ನ್ಯಾಯ ನಿಮ್ಮದು; ನೆರವು ನಮ್ಮದು’ ಎಂಬ ಧ್ಯೇಯೋದ್ದೇಶದೊಂದಿಗೆ ಕಾನೂನಿನ ಅರಿವು ಮೂಡಿಸುತ್ತದೆ ಎಂದರು. ಕಾನೂನಿನ ಅರಿವು ಪ್ರತಿಯೊಬ್ಬರಿಗೂ ಇರಬೇಕು. ಕಾನೂನು ಜ್ಞಾನವಿಲ್ಲದ ಸಮಾಜವನ್ನು ಊಹಿಸಿಕೊಳ್ಳುವುದು ಅಸಾಧ್ಯ ಎಂದು ತಿಳಿಸಿದರು.
ವಕೀಲರ ಸಂಘದ ಉಪಾಧ್ಯಕ್ಷ ಪಿ.ಯು.ಪ್ರೀತಂ ಅವರು ಮಾತನಾಡಿ ಕಾನೂನು ಸೇವೆಗಳು ಸಮಾಜದ ಕಟ್ಟ ಕಡೆಯ ಜನರಿಗೆ ದೊರೆಯಬೇಕು. ಹೆಣ್ಣು ಮಕ್ಕಳಿಗೆ ಸಮಾನ ಹಕ್ಕು ಇದ್ದು, ಅದರಂತೆ ನಡೆದುಕೊಳ್ಳಬೇಕು. ಪ್ರಜಾಪ್ರಭುತ್ವದಲ್ಲಿ ಸಂವಿಧಾನದ ಆಶಯಗಳನ್ನು ತಿಳಿದುಕೊಳ್ಳಬೇಕು ಎಂದರು.
ನಗರದ ರೋಟರಿ ಅಧ್ಯಕ್ಷರಾದ ಪಿ.ಟಿ.ಗಣಪತಿ ಅವರು ಮಾತನಾಡಿ ಸಮಾಜದಲ್ಲಿ ಸಾಕಷ್ಟು ಬದಲಾವಣೆಯಾಗುತ್ತಿದೆ. ಆದ್ದರಿಂದ ಸಾಮಾನ್ಯ ಜನರಿಗೆ ಕಾನೂನಿನ ಅರಿವು ಅಗತ್ಯ. ಕಾನೂನಿನ ಶಿಕ್ಷಣ ಪ್ರತಿಯೊಬ್ಬರಿಗೂ ಅಗತ್ಯ ಎಂದರು.
ವಕೀಲ ಕೆ.ಎಂ.ಮೀನಾಕುಮಾರಿ ಅವರು ಮಾತನಾಡಿ ಸಂವಿಧಾನದ ಮೂಲಭೂತ ಹಕ್ಕುಗಳ ಜೊತೆಗೆ ಮೂಲಭೂತ ಕರ್ತವ್ಯಗಳನ್ನು ಪಾಲಿಸಬೇಕು ಎಂದರು. ಕಾನೂನು ಸೇವಾ ಪ್ರಾಧಿಕಾರದ ಆಡಳಿತ ಸಹಾಯಕರಾದ ಜಯಪ್ಪ ನಿರೂಪಿಸಿ ವಂದಿಸಿದರು, ದಿವ್ಯಾ ಪ್ರಾರ್ಥಿಸಿದರು.


error: Content is protected !!