ತಲಕಾವೇರಿ ಆತಂಕ : ಸರ್ಕಾರದ ಗಮನ ಸೆಳೆದ ಎಂಎಲ್‍ಸಿ ವೀಣಾಅಚ್ಚಯ್ಯ

26/09/2020

ಮಡಿಕೇರಿ ಸೆ.26 : ಕೊಡಗಿನಲ್ಲಿ ಮಳೆಗಾಲದಲ್ಲಿ ಸಂಭವಿಸುವ ಭೂಕುಸಿತ ಸೇರಿದಂತೆ ತಲಕಾವೇರಿಯಲ್ಲಿ ಉಂಟಾಗಿರುವ ಆತಂಕದ ವಾತಾವರಣದ ಬಗ್ಗೆ ವಿಧಾನ ಪರಿಷತ್ ಸದಸ್ಯರಾದ ವೀಣಾಅಚ್ಚಯ್ಯ ಅವರು ವಿಧಾನ ಪರಿಷತ್ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆದಿದ್ದಾರೆ.
ಕಾವೇರಿ ಉಗಮ ಸ್ಥಾನವಾದ ತಲಕಾವೇರಿಯಲ್ಲಿ ಭಾರಿ ಮಳೆ ಬಂಧಿದ್ದು ಗಜಗಿರಿಯೆಂಬ ಬೆಟ್ಟದ ಭಾಗವೇ ಕುಸಿದಿದ್ದು ಇದರಿಂದ ಅರ್ಚಕ ಕುಟುಂಬದ ಐವರು ವಾಸಿಸುತ್ತಿದ್ದ ಮನೆ ಸಹಿತ ಜೀವಂತ ಸಮಾಧಿಯಾಗಿ ಹೋದರು. ಮುಂದೆಯೂ ಈ ವಿಭಾಗದಲ್ಲಿ ಇನ್ನೂ ಭಾರೀ ಅನಾಹುತವಾಗುವ ಮುನ್ಸೂಚನೆ ಇದೆ. ಈ ವಿಭಾಗದ ಗಜಗಿರಿ, ಮೊದಲಾದ ಬೆಟ್ಟಗಳು ನಿಧಾನವಾಗಿ ಕುಸಿಯುವ ಅಪಾಯ ಕಂಡು ಬರುತ್ತಿವೆ.
ದೇಶದ ಜೀವನಾಡಿಯಾದ ಕಾವೇರಿಯ ಉದ್ಭವ ಸ್ಥಳವಾದ ಬ್ರಹ್ಮ ಕುಂಡಿಕೆ ಭಾಗಕ್ಕೂ ಮುಂದಿನ ಮಳೆಗಾಲದಲ್ಲಿ ಅಪಾಯ, ಎಚ್ಚರಿಕೆಯ ಗಂಟೆ ಈಗಾಗಲೇ ಬಾರಿಸಲ್ಪಟ್ಟಿದೆ. ಈ ಕೂಡಲೆ ಎಚ್ಚೆತ್ತುಕೊಂಡು, ನುರಿತ ಇಂಜಿನಿಯರ್ ಗಳು, ತಂತ್ರಜ್ಞರುಗಳು ಹಾಗೂ ಪರಿಸರ ಯೋಜನೆಗಳನ್ನು ಬಲ್ಲವರನ್ನು ಕರೆಸಿ, ಸ್ಥಳ ಪರಿಶೀಲನೆ ನಡೆಸಿ ಮುಂದಿನ ವರ್ಷಗಳಲ್ಲಿ ಅನಾಹುತ ಸಂಭವಿಸದಂತೆ ತಕ್ಷಣವೇ ಕಾರ್ಯ ಯೋಜನೆಯನ್ನು ಪ್ರಾರಂಭಿಸಬೇಕು. ಅದು ಬೃಹತ್ತಾದ, ಅತ್ಯಂತ ಶಕ್ತಿಯುತ ತಡೆಗೋಡೆ ಇರುಬಹುದು ಅಥವಾ ಬೆಟ್ಟ ಕುಸಿಯದಂತೆ ಇನ್ನಿತರ ಯಾವುದೇ ಬದಲಿ ಕ್ರಮ ಇರಬಹುದು, ಪರಿಣಿತರ ಪ್ರತ್ಯಕ್ಷ ನೇತ್ರತ್ವದಲ್ಲಿಯೇ ಈ ಕಾರ್ಯ ಯೋಜನೆಯನ್ನು ಈಗಿನಿಂದಲೇ ಕೈಗೊಳ್ಳಬೇಕು ಎಂದು ವೀಣಾ ಅಚ್ಚಯ್ಯ ಅವರು ಗಮನ ಸೆಳೆದರು.
ಈ ಕುರಿತು ಕಂದಾಯ ಸಚಿವರಾದ ಆರ್.ಅಶೋಕ್ ಅವರು ಮಾಹಿತಿ ನೀಡಿ ಇತ್ತೀಚಿನ ದಿನಗಳಲ್ಲಿ ಕೊಡಗು ಜಿಲ್ಲೆಯಲ್ಲಿ ಸಂಭವಿಸುತ್ತಿರುವ ಭೂಕುಸಿತಗಳ ಬಗ್ಗೆ ಸರ್ಕಾರದ ಗಮನ ಹರಿಸಿದೆ. ಈಗಾಗಲೇ ಜಿಐಎಸ್ (ಭಾರತೀಯ ಭೂ ವೈಜ್ಞಾನಿಕ ಸಮೀಕ್ಷ) ಕೊಡಗು ಜಿಲ್ಲೆಯ ಭೂಕುಸಿತ ಪ್ರದೇಶಗಳ ಅಧ್ಯಯನವನ್ನು ನಡೆಸುತ್ತಿದೆ. ಆದರೂ ವಿಪತ್ತು ನಿರ್ವಹಣೆಯ ಭಾಗವಾಗಿ ಬರುವ ದಿನಗಳಲ್ಲಿ ನುರಿತ ಎಂಜಿನಿಯರ್‍ಗಳು ಹಾಗೂ ಭೂ ವಿಜ್ಞಾನಿಗಳನ್ನೊಳಗೊಂಡ ತಜ್ಞರ ಸಮಿತಿಯನ್ನು ರಚಿಸಿ ಅಧ್ಯಯನ ನಡೆಸಿ ಸೂಕ್ತ ಶಿಫಾರಸ್ಸು ಗಳನ್ನು ನೀಡಲು ಸೂಚಿಸಲಾಗುವುದು. ಶಿಫಾರಸ್ಸುಗಳನ್ವಯ ಸಂಬಂದಪಟ್ಟ ಇಲಾಖೆಯಿಂದ ವಿವಾರವಾದ ಯೋಜನೆಯ ಪ್ರಸ್ತಾವನೆಯನ್ನು ತಯಾರಿಸಿ ಸರ್ಕಾರಕ್ಕೆ ನೀಡಲು ಹಾಗೂ ತದನಂತರ ಅನುμÁ್ಠನಗೊಳಿಸಲು ಸೂಚಿಸಲಾಗುವುದು ಎಂದು ಕಂದಾಯ ಸಚಿವರಾದ ಆರ್.ಅಶೋಕ್ ಅವರು ಮಾಹಿತಿ ನೀಡಿದ್ದಾರೆ.