ಮನೆ ಬಾಗಿಲಲ್ಲೇ ಡಿಜಿಟಲ್ ಅಂಚೆ ಖಾತೆ : ಅಭಿಯಾನಕ್ಕೆ ಸೆ.29 ರಂದು ಚಾಲನೆ

26/09/2020

ಮಡಿಕೇರಿ ಸೆ.26 : ಒಂದೇ ನಿಮಿಷದಲ್ಲಿ ಶೂನ್ಯ ಮೊತ್ತದಲ್ಲಿ ಮನೆ ಬಾಗಿಲಲ್ಲೇ ಡಿಜಿಟಲ್ ಅಂಚೆ ಖಾತೆ ತೆರೆಯುವ ವಿನೂತನ ಅಭಿಯಾನ ಸೆ.29 ರಿಂದ ಭಾರತೀಯ ಅಂಚೆ ಇಲಾಖೆ ಮೂಲಕ ಆರಂಭಗೊಳ್ಳಲಿದೆ ಎಂದು ಅಂಚೆ ಇಲಾಖೆಯ ಕೊಡಗು ವಲಯ ಅಧೀಕ್ಷಕ ಹೆಚ್.ಜೆ.ಸೋಮಯ್ಯ ಅವರು ತಿಳಿಸಿದ್ದಾರೆ.
ಅಂಚೆ ಕಚೇರಿ ಹಾಗೂ ಅಂಚೆಯಣ್ಣನ ಮೂಲಕ ಈ ಸೌಲಭ್ಯ ಮನೆ ಬಾಗಿಲಿಗೆ ತಲುಪಲಿದೆ. ತನ್ಮೂಲಕ ಅಂಚೆ ಬ್ಯಾಂಕಿಂಗ್ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಹಾಗೂ ಮನೆ ಮನೆಗೆ ತಲುಪಿಸುವ ನಿಟ್ಟಿನಲ್ಲಿ ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್‍ನ ಖಾತೆ ತೆರೆಯಲು ಅಭಿಯಾನದ ರೂಪ ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
::: ಕಾಗದ ರಹಿತ ಸೇವೆ :::
ಪೋಸ್ಟ್‍ಮ್ಯಾನ್ ಮನೆ ಮನೆ ಭೇಟಿ ಮಾಡಿ ಈ ಸೌಲಭ್ಯ ಒದಗಿಸಿಕೊಡಲು ಬೇಕಾದ ಅಗತ್ಯ ಪರಿಕರಗಳನ್ನು ನೀಡಲಾಗಿದೆ. ಸಾರ್ವಜನಿಕರು ನೇರವಾಗಿ ಅಂಚೆ ಕಚೇರಿಗೆ ಬಂದು ಖಾತೆ ತೆರೆಯಲು ಅನುಕೂಲವಾಗುವ ನಿಟ್ಟಿನಲ್ಲಿ ಅಂಚೆ ಕಚೇರಿಯಲ್ಲಿ ವಿಶೇಷ ವ್ಯವಸ್ಥೆಗಳನ್ನು ಮಾಡಲಾಗಿದೆ. ಇದು ಸಂಪೂರ್ಣ ಕಾಗದ ರಹಿತವಾಗಿದ್ದು, ಯಾವುದೇ ಸಹಿ ಅಥವಾ ದಾಖಲೆಗಳ ಪ್ರತಿ ನೀಡಬೇಕಾಗಿಲ್ಲ. ಆಧಾರ್ ಸಂಖ್ಯೆ ಮೊಬೈಲ್ ಪೋನ್ ನಂಬರ್ ಹಾಗೂ ಪ್ರಾರಂಭಿಕ ಶುಲ್ಕ 100 ರೂ. ನೀಡಿದರೆ ಒಂದೇ ನಿಮಿಷದಲ್ಲಿ ಖಾತೆ ಗ್ರಾಹಕನ ಕೈ ಸೇರುತ್ತದೆ.
ಐಪಿಪಿಬಿ ಮೊಬೈಲ್ ಆ್ಯಪ್ ಅನ್ನು ಗೂಗಲ್ ಪ್ಲೇ ಸ್ಟೋರ್‍ನಿಂದ ಡೌನ್‍ಲೋಡ್ ಮಾಡಿಕೊಂಡು ಬ್ಯಾಂಕಿಂಗ್ ವ್ಯವಹಾರ ಮಾಡಬಹುದು. ಕ್ಯೂ ಆರ್ ಕೋಡ್ ಮೂಲಕ ಅಂಗಡಿಗಳಲ್ಲಿ ಹಣ ಪಾವತಿಗೆ ಅವಕಾಶ ನೀಡಲಾಗಿದೆ. ವ್ಯಾಪಾರಿಗಳಿಗೆ ಖಾತೆ ಮೂಲಕ ಡಿಜಿಟಲ್ ಪಾವತಿಗೆ ಅವಕಾಶವಿದೆ.
::: ವಿದ್ಯುತ್ ಬಿಲ್ ಪಾವತಿ :::
ಈ ಖಾತೆ ತೆರೆದರೆ ಮನೆಯಿಂದಲೇ ವಿದ್ಯುತ್ ಬಿಲ್ ಪಾವತಿ, ಡಿಟಿಎಚ್ ರೀಚಾರ್ಟ್, ಮೊಬೈಲ್ ರೀಚಾರ್ಟ್ ಮಾಡಲು ಅವಕಾಶ ಇದೆ. ಯಾವುದೇ ಬ್ಯಾಂಕ್‍ಗಳಿಗೆ ದಿನದ 24 ಗಂಟೆಗಳೂ ಹಣ ಕಳುಹಿಸಬಹುದು. ಬೇರೆ ಬ್ಯಾಂಕ್‍ಗಳಿಂದ ಹಣವನ್ನು ಈ ಖಾತೆಗೆ ವರ್ಗಾಯಿಸಬಹುದು. ಅಂಚೆ ಉಳಿತಾಯ ಖಾತೆಯೊಂದಿಗೆ ಜೋಡಿಸಿ, ಅದಕ್ಕೆ ಹಣ ಹಾಕುವ ಅಥವಾ ಅದರಿಂದ ಹಣತೆಗೆಯುವ ಸೌಲಭ್ಯವು ಲಭ್ಯವಿದೆ. ಅಂಚೆ ಕಚೇರಿಯ ಆರ್.ಡಿ.ಪಿ.ಪಿ.ಎಫ್ ಸುಕನ್ಯಾ ಸಮೃದ್ಧಿ ಖಾತೆಗಳಿಗೆ ಮನೆಯಿಂದಲೇ ಹಣ ಜಮೆ ಮಾಡಬಹುದು. ವೇತನ, ವಿಧವಾ ವೇತನ ಇತ್ಯಾದಿಗಳನ್ನು ಅರ್ಹ ಫಲಾನುಭವಿಗಳು ಪಡೆಯಬಹುದು. ಇಂತಹ ಹತ್ತಾರು ಸೌಲಭ್ಯಗಳನ್ನು ಈ ಖಾತೆ ಒಳಗೊಂಡಿದೆ.
ಡಿಜಿಟಲ್ ಬ್ಯಾಂಕ್‍ನ ಸೌಲಭ್ಯಗಳನ್ನು ಅತ್ಯಂತ ಸರಳವಾಗಿ ಮನೆಯಂಗಳದಲ್ಲೇ ಪಡೆದುಕೊಳ್ಳುವ ಸಲುವಾಗಿ ಭಾರತೀಯ ಅಂಚೆ ಇಲಾಖೆ ಕೊಡಗು ವಿಭಾಗ ಸೆ.29 ರಿಂದ ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್‍ನಲ್ಲಿ ಖಾತೆಗಳನ್ನು ತೆರೆಯುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದು ಹೆಚ್.ಜೆ.ಸೋಮಯ್ಯ ತಿಳಿಸಿದ್ದಾರೆ.
ಇಂಡಿಯಾ ಪೋಸ್ಟ್ ಪೇಮಂಟ್ ಬ್ಯಾಂಕ್‍ನ ಸೇವೆಗಳು ಭಾರತದ 1,55,531 ಅಂಚೆ ಕಚೇರಿಗಳಲ್ಲಿ ಲಭ್ಯವಿದೆ ಮತ್ತು ಅಂಚೆಯಣ್ಣನ ಮೂಲಕವೂ ಮನೆ ಬಾಗಿಲಿನಲ್ಲಿ ಈ ಸೇವೆಗಳು ಲಭ್ಯವಿದೆ.
ಪೋಸ್ಟ್‍ಮ್ಯಾನ್ ಮನೆ ಬಾಗಿಲಿಗೆ ಬಂದು ಡಿಜಿಟಲ್ ಖಾತೆ ಮಾಡುವ ಪ್ರಕ್ರಿಯೆ ಇದು. ಅಲ್ಲದೆ ಪ್ರತಿನಿತ್ಯ ಅಂಚೆ ಕಚೇರಿಗೆ ಬಂದು ಖಾತೆ ತೆರೆಯಲು ಅವಕಾಶವಿದೆ. ಈ ಯೋಜನೆಯ ಲಾಭವನ್ನು ಕೊಡಗಿನ ಜನ ಪಡೆದುಕೊಳ್ಳಬೇಕೆಂದು ಸೋಮಯ್ಯ ಮನವಿ ಮಾಡಿದ್ದಾರೆ.