ಬಂದ್ ಗೆ ಬೆಂಬಲ ನೀಡದಂತೆ ಕೊಡಗು ಬಿಜೆಪಿ ಮನವಿ

27/09/2020

ಮಡಿಕೇರಿ ಸೆ.27 : ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಮಸೂದೆ ರೈತರ ಪರವಾಗಿದ್ದು, ಅಮಾಯಕ ರೈತರ ಹೆಸರಿನಲ್ಲಿ ದಲ್ಲಾಳಿಗಳ ಪರ ಕರೆ ನೀಡಿರುವ ಕೊಡಗು ಬಂದ್‍ಗೆ ಯಾರೂ ಬೆಂಬಲ ನೀಡಬಾರದೆಂದು ಜಿಲ್ಲಾ ಬಿಜೆಪಿ ವಕ್ತಾರ ಮಹೇಶ್ ಜೈನಿ ಮನವಿ ಮಾಡಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕೃಷಿಕ ವರ್ಗದ ಅಭ್ಯುದಯಕ್ಕಾಗಿ ಜಾರಿಗೆ ತಂದಿರುವ ಮಸೂದೆಗಳ ಬಗ್ಗೆ ನೆಲೆ ಕಳೆದುಕೊಳ್ಳುತ್ತಿರುವ ಕೆಲವು ರಾಜಕೀಯ ಪಕ್ಷಗಳು ತಪ್ಪು ಮಾಹಿತಿಯನ್ನು ನೀಡುತ್ತಿವೆ ಎಂದು ಆರೋಪಿಸಿದ್ದಾರೆ. ನೈಜ ರೈತರೆಲ್ಲರೂ ಮಸೂದೆಯನ್ನು ಬೆಂಬಲಿಸಿದ್ದು, ಕೋವಿಡ್ ಸಂಕಷ್ಟದ ಸಂದರ್ಭದಲ್ಲಿ ಬಂದ್ ನಂತಹ ಹೋರಾಟಗಳನ್ನು ನಡೆಸುತ್ತಿರುವುದನ್ನು ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ ಎಂದು ಹೇಳಿದ್ದಾರೆ.
ಕೊಡಗಿನ ಪ್ರಜ್ಞಾವಂತ ಜನತೆ ಬಂದ್ ನ್ನು ಬೆಂಬಲಿಸುವುದಿಲ್ಲವೆಂದು ವಿಶ್ವಾಸ ವ್ಯಕ್ತಪಡಿಸಿರುವ ಮಹೇಶ್ ಜೈನಿ, ಬಲವಂತದ ಬಂದ್ ನಡೆಯದಂತೆ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.