ತುಳು ಸ್ಪರ್ಧೆ ಬಹುಮಾನ ವಿತರಣೆ : ತುಳು ಭಾಷೆಯನ್ನು ಅಧಿಕೃತಗೊಳಿಸಿ : ಅಕಾಡೆಮಿ ಅಧ್ಯಕ್ಷ ದಯಾನಂದ್ ಜಿ.ಕತ್ತಲ್‍ಸರ್ ಒತ್ತಾಯ : ಕೊಡಗಿನಲ್ಲಿ ತುಳು ಭವನ ನಿರ್ಮಾಣದ ಚಿಂತನೆ

27/09/2020

ಮಡಿಕೇರಿ ಸೆ.27 : ಎರಡೂವರೆ ಸಾವಿರ ವರ್ಷಗಳ ಇತಿಹಾಸ ಹೊಂದಿರುವ ತುಳು ಭಾಷೆಯನ್ನು 8 ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸುವ ಮೂಲಕ ಅಧಿಕೃತ ಭಾಷೆಯೆಂದು ಸರ್ಕಾರ ಘೋಷಣೆ ಮಾಡಬೇಕೆಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ದಯಾನಂದ್ ಜಿ.ಕತ್ತಲ್‍ಸರ್ ಅವರು ಒತ್ತಾಯಿಸಿದ್ದಾರೆ.
ತುಳು ಸಾಹಿತ್ಯ ಅಕಾಡೆಮಿ ಮತ್ತು ಕೊಡಗು ಜಿಲ್ಲಾ ತುಳುವೆರ ಜನಪದ ಕೂಟದ ವತಿಯಿಂದ ನಗರದ ಪತ್ರಿಕಾ ಭವನದಲ್ಲಿ ನಡೆದ ತುಳು ಭಾಷಾ ವಿವಿಧ ಸ್ಪರ್ಧೆಗಳ ವಿಜೇರಿಗೆ ಬಹುಮಾನ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪಂಚದ್ರಾವಿಡ ಭಾಷೆಗಳ ಸಾಲಿಗೆ ತುಳು ಭಾಷೆಯೂ ಸೇರುತ್ತಿದ್ದು, ತಮಿಳು ಭಾಷೆಯಷ್ಟೇ ಪ್ರಾಚೀನತೆ ತುಳು ಭಾಷೆಗೂ ಇದೆ. ತುಳು ಜನರ ಆರಾಧನೆಗಳು ಮಾನಸಿಕ ಮತ್ತು ದೈಹಿಕ ಆರೋಗ್ಯ ವೃದ್ಧಿಗೆ ಪೂರಕವಾಗಿದೆ. ತುಳು ಭಾಷೆಗೆ ತನ್ನದೇ ಆದ ಲಿಪಿ ಇದ್ದು, “ಓಂ” ಲಿಪಿ ತುಳುಭಾಷೆಯಿಂದಲೇ ಬಂದಿದೆ. ತುಳುನಾಡಿನ ಅರಸರು, ಮಠಾಧೀಶರು ತುಳು ಭಾಷೆಯಲ್ಲೇ ಸಹಿ ಮಾಡುತ್ತಿದ್ದ ಸಾಕ್ಷ್ಯಗಳು ದೊರೆತ್ತಿವೆ ಮತ್ತು ತುಳು ಸಂಸ್ಕøತಿ, ಆಚಾರ, ವಿಚಾರಗಳನ್ನು ಪ್ರತಿಬಿಂಬಿಸುವ 50 ಕ್ಕೂ ಹೆಚ್ಚು ಶಿಲಾಶಾಸನಗಳು ಪತ್ತೆಯಾಗಿವೆ.
ಇಷ್ಟಲ್ಲಾ ಇತಿಹಾಸ ಹೊಂದಿರುವ ತುಳು ಭಾಷೆಗೆ ಇಲ್ಲಿಯವರೆಗೆ ಅಧಿಕೃತ ಸ್ಥಾನಮಾನ ದೊರೆಯದೇ ಇರುವುದು ವಿಷಾದಕರವೆಂದು ದಯಾನಂದ್ ಜಿ.ಕತ್ತಲ್‍ಸರ್ ಬೇಸರ ವ್ಯಕ್ತಪಡಿಸಿದರು.
2003 ರಲ್ಲಿ ದೇಶದ ನಾಲ್ಕು ಉಪಭಾಷೆಗಳೊಂದಿಗೆ ತುಳು ಭಾಷೆಗೂ 8 ನೇ ಸೇರ್ಪಡೆಗೊಳ್ಳುವ ಅವಕಾಶವಿತ್ತಾದರೂ ಕೊನೇ ಗಳಿಗೆಯಲ್ಲಿ ಕೈತಪ್ಪಿ ಹೋಗಿದೆ. ಲಿಪಿ ಇಲ್ಲದ ಭಾಷೆಗಳಿಗೂ ಸ್ಥಾನಮಾನ ದೊರೆತ್ತಿದೆ, ಆದರೆ ಎಲ್ಲಾ ಅರ್ಹತೆಗಳಿದ್ದರೂ ತುಳು ಭಾಷೆ ವಂಚಿತವಾಗಿದೆ. ರಾಜ್ಯ ಮತ್ತು ಕೇಂದ್ರದಲ್ಲಿ ಒಂದೇ ಸಕಾರಗಳಿದ್ದು, ನಮ್ಮ ಬೇಡಿಕೆ ಈಡೇರುವ ಭರವಸೆ ಇದೆ. ಒಂದು ವೇಳೆ ಸ್ಪಂದನೆ ದೊರೆಯದಿದ್ದಲ್ಲಿ ಹೋರಾಟ ರಾಜಧಾನಿ ಬೆಂಗಳೂರಿನವರೆಗೂ ವ್ಯಾಪಿಸಲಿದೆ ಎಂದು ದಯಾನಂದ್ ಜಿ.ಕತ್ತಲ್‍ಸರ್ ಹೇಳಿದರು.
ಪಠ್ಯ ಕ್ರಮದಲ್ಲೂ ತುಳು ಭಾಷೆಯನ್ನು ಅಳವಡಿಸಬೇಕೆಂದು ಒತ್ತಾಯಿಸಿದ ಅವರು ಕೊಡಗಿನಲ್ಲಿ ತುಳು ಭವನ ನಿರ್ಮಾಣಕ್ಕೆ ಕನಿಷ್ಠ ಒಂದು ಎಕರೆ ಜಾಗವನ್ನಾದರೂ ಜಿಲ್ಲಾಡಳಿತದಿಂದ ಮಂಜೂರು ಮಾಡಲಿಸಲು ಜಿಲ್ಲೆಯ ತುಳು ಮುಖಂಡರು ಪ್ರಯತ್ನಿಸಬೇಕೆಂದು ಮನವಿ ಮಾಡಿದರು. ಕಾವೇರಿ ನದಿಯ ಉಗಮ ಸ್ಥಾನ ಕೊಡಗು ಜಿಲೆಯಲ್ಲಿ 50 ಸಾವಿರಕ್ಕೂ ಅಧಿಕ ಮಂದಿ ತುಳು ಭಾಷಿಕರಿದ್ದಾರೆ. ಇವರು ತುಳು ಭಾಷೆ, ಸಾಹಿತ್ಯ ಮತ್ತು ಸಂಸ್ಕøತಿಯ ಬೆಳವಣಿಗೆಗೆ ಅಪಾರ ಕೊಡುಗೆಯನ್ನು ನೀಡುತ್ತಿದ್ದಾರೆ. ಇದೇ ಕಾರಣಕ್ಕಾಗಿ ತುಳು ಅಕಾಡೆಮಿಯಲ್ಲಿ ಜಿಲ್ಲೆಗೆ ಪ್ರಾತಿನಿಧ್ಯ ನೀಡಲಾಗಿದೆ ಎಂದು ದಯಾನಂದ್ ಜಿ.ಕತ್ತಲ್‍ಸರ್ ತಿಳಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ತುಳುವೆರ ಜನಪದ ಕೂಟದ ಜಿಲ್ಲಾಧ್ಯಕ್ಷ ಶೇಖರ್ ಭಂಡಾರಿ, ತುಳು ಅಕಾಡೆಮಿಯ ಎಲ್ಲಾ ಕಾರ್ಯಕ್ರಮಗಳಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಕೊಡಗಿನಲ್ಲಿ ತುಳು ಭಾಷೆಯ ಬೆಳವಣಿಗೆಗೆ ಪೂರಕವಾದ ಕಾರ್ಯಕ್ರಮಗಳನ್ನು ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳಲಾಗುವುದು ಮತ್ತು ಆ ಮೂಲಕ ಒಗ್ಗಟ್ಟನ್ನು ಮೂಡಿಸಲಾಗುವುದು ಎಂದರು.
ತುಳು ಅಕಾಡೆಮಿ ಸದಸ್ಯ ಪಿ.ಎಂ.ರವಿ ಮಾತನಾಡಿ ತನ್ನದೇ ಆದ ಶ್ರೀಮಂತಿಕೆಯನ್ನು ಹೊಂದಿರುವ ತುಳು ಭಾಷೆ, ಸಾಹಿತ್ಯ, ಸಂಸ್ಕøತಿಯನ್ನು ಉಳಿಸಿ, ಬೆಳೆಸಿಕೊಂಡುವ ಹೋಗುವ ಜವಬ್ದಾರಿ ಪ್ರತಿಯೊಬ್ಬ ತುಳು ಭಾಷಿಕನ ಮೇಲಿದ್ದು, ಎಲ್ಲಾ ಕಾರ್ಯಕ್ರಮಗಳೊಂದಿಗೆ ಕೈಜೋಡಿಸುವಂತೆ ಮನವಿ ಮಾಡಿದರು. ತುಳು ಭವನ ನಿರ್ಮಾಣಕ್ಕೆ ಅಗತ್ಯವಿರುವ ಎಲ್ಲಾ ಪ್ರಯತ್ನಗಳನ್ನು ಮಾಡುವುದಾಗಿ ತಿಳಿಸಿದ ಅವರು ಅಕಾಡೆಮಿಯಲ್ಲಿ ತಮಗೆ ಸ್ಥಾನ ಕಲ್ಪಿಸಿದಕ್ಕೆ ಕೃತಜ್ಞತೆ ಸಲ್ಲಿಸಿದರು. ವಿನೂತನ ಕಾರ್ಯಕ್ರಮಗಳ ಮೂಲಕ ತುಳು ಭಾಷಿಕರನ್ನು ಒಗ್ಗೂಡಿಸುವ ಕಾರ್ಯ ಮಾಡುವುದಾಗಿ ರವಿ ಭರವಸೆ ನೀಡಿದರು.
ತುಳುವೆರ ಜನಪದ ಕೂಟದ ಸಲಹೆಗಾರರಾದ ಐತ್ತಪ್ಪ ರೈ ಹಾಗೂ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷೆ ಬಿ.ಆರ್.ಸವಿತಾರೈ ಮಾತನಾಡಿದರು.
ತುಳು ಅಕಾಡೆಮಿ ಸದಸ್ಯರುಗಳಾದ ದಿನೇಶ್ ರೈ ಕಡಬ, ನಾಗೇಶ್ ಕುಳಾಯಿ, ನರೇಂದ್ರ ಕರೆಕಾಡು, ಕೂಟದ ಉಪಾಧ್ಯಕ್ಷ ಬಿ.ವೈ.ಆನಂದರಘು, ಸಲಹೆಗಾರ ಎಂ.ಬಿ.ನಾಣಯ್ಯ, ಸದಸ್ಯ ಗೌತಮ್ ಶಿವಪ್ಪ ಮತ್ತಿತರರು ಉಪಸ್ಥಿತರಿದ್ದರು. ಇದೇ ಸಂದರ್ಭ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ದಯಾನಂದ್ ಜಿ.ಕತ್ತಲ್‍ಸರ್ ಅವರನ್ನು ಕೂಟದ ವತಿಯಿಂದ ಸನ್ಮಾನಿಸಲಾಯಿತು. ‘ತುಳುಗಾದೆ ಸ್ಪರ್ಧೆ’, ‘ಒಗಟು ಸ್ಪರ್ಧೆ’ ಮತ್ತು ತುಳು ಕವಿತೆ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ತುಳು ಗಾದೆ ಸಂಗ್ರಹ ಸ್ಪರ್ಧೆಯಲ್ಲಿ ಸೋಮವಾರಪೇಟೆಯ ಪುಲ್ಲುರಿಕೊಪ್ಪದ ಅನ್ವಿತ ಹೆಚ್.ಶೆಟ್ಟಿ ಪ್ರಥಮ ಹಾಗೂ ಮಡಿಕೇರಿಯ ಶಶಿಕಲಾ ಪೂಜಾರಿ ದ್ವಿತೀಯ ಸ್ಥಾನ ಗಳಿಸಿದರು.
ತುಳು ಎದುರು ಕತೆ (ಒಗಟು) ಸ್ಪರ್ಧೆಯಲ್ಲಿ ಮಡಿಕೇರಿಯ ಸೌಮ್ಯ ವಿಜಯ ಪ್ರಥಮ ಹಾಗೂ ಗೋಣಿಕೊಪ್ಪದ ವಿನುತಾ ಎಸ್.ರೈ ದ್ವಿತೀಯ ಬಹುಮಾನ ಗಳಿಸಿದರು.
ತುಳು ಕವಿತೆ ಸ್ಪರ್ಧೆಯಲ್ಲಿ ಸೋಮವಾರಪೇಟೆಯ ಮಸಗೋಡು ಗ್ರಾಮದ ಕೆ.ವಿ.ಪುಟ್ಟಣಾಚಾರ್ಯ ಪ್ರಥಮ ಹಾಗೂ ಮೂರ್ನಾಡು ಗ್ರಾಮದ ರಮ್ಯ ಕೆ.ಜಿ ದ್ವಿತೀಯ ಸ್ಥಾನ ಗಳಿಸಿದರು.