ಸಚಿವ ಸ್ಥಾನ ಬಿಡಲಿದ್ದಾರೆ ರವಿ !

28/09/2020

ಬೆಂಗಳೂರು ಸೆ.28 : ಮಂತ್ರಿ ಪದವಿಗೆ ರಾಜೀನಾಮೆ ನೀಡಲು ಮತ್ತು ಪಕ್ಷದ ಸೂಚನೆಯಂತೆ ಪಕ್ಷದ ಬಲವರ್ಧನೆಗೆ ನೆರವಾಗುವಂತೆ ಕೆಲಸ ಮಾಡಲು ತಮ್ಮನ್ನು ತಾವು ಅರ್ಪಿಸಿಕೊಳ್ಳಲು ಸಿದ್ಧ ಎಂದು ಕರ್ನಾಟಕ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿದ್ದಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು “ನನ್ನ ಮುಖ್ಯ ಉದ್ದೇಶ ಅದು ಎಂದಿಗೂ ಪಕ್ಷದ ಸಂಘಟನೆಯಾಗಿರುತ್ತದೆ. ನಾನು ಬಿಜೆಪಿ ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನು ನಿರೀಕ್ಷಿಸಿರಲಿಲ್ಲ. ನಾನು ಯಾವತ್ತೂ ಯಾವುದೇ ಆಕಾಂಕ್ಷೆಯನ್ನಿಟ್ಟುಕೊಂಡು ಕೆಲಸ ಮಾಡಿದವನಲ್ಲ. ಪಕ್ಷ ನಿಷ್ಠೆ ಮತ್ತು ಕಠಿಣ ಪರಿಶ್ರಮ ನನ್ನ ತತ್ವವಾಗಿದೆ. ನಾನು ಯಾವಾಗಲೂ ನನಗೆ ವಹಿಸಿರುವ ಎಲ್ಲ ಜವಾಬ್ದಾರಿಗಳನ್ನು ಶ್ರದ್ದೆಯಿಂದ ನಿಭಾಯಿಸುತ್ತೇನೆ” ಎಂದು ಅವರು ಹೇಳಿದರು.
ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ರವಿ, ದಿವಂಗತ ನಾಯಕ ಅನಂತ್ ಕುಮಾರ್ ಅವರ ಸಾಧನೆ ಮಹತ್ವವಾದದ್ದು. ಅವರಂತೆ ಎಂದೂ ಆಗಲು ಸಾಧ್ಯವಿಲ್ಲ. ಅವರು ತಲುಪಿದ ಎತ್ತರವನ್ನು ತಲುಪಲು ಪ್ರಯತ್ನಿಸುತ್ತೇನೆ ಎಂದು ಹೇಳಿದರು. ಅಂತಹ ಅವಕಾಶ ನಮ್ಮ ಪಕ್ಷದಲ್ಲಿ ಮಾತ್ರವೇ ಸಿಕ್ಕುವಂತಹುದು. ನಾನು ತಳಮಟ್ಟದಲ್ಲಿ ಕೆಲಸ ಮಾಡುತ್ತೇನೆ ಮತ್ತು ದೆಹಲಿಯಲ್ಲಿ ಕುಳಿತು ಕೆಲಸ ಮಾಡುವುದಿಲ್ಲ. ನನ್ನ ಮೊದಲ ಆದ್ಯತೆಯೆಂದರೆ ಪಕ್ಷದ ಸಂಘಟನೆಯಾಗಿದೆ ಎಂದಿದ್ದಾರೆ.