ಮೃತ ಬಿ.ಎಸ್.ಎಫ್. ಯೋಧನಿಗೆ ಹುಟ್ಟೂರಿನಲ್ಲಿ ಗೌರವ ಸಲ್ಲಿಕೆ

ಪೊನ್ನಂಪೇಟೆ, ಸೆ.28: ದೇಶ ಸೇವೆಯಲ್ಲಿದ್ದಾಗಲೇ ಪ್ರಾಣತ್ಯಾಗ ಮಾಡಿದ ದೇಶ ಸೇವಕರು ಸಮಾಜದಲ್ಲಿ ವಿಶೇಷವಾಗಿ ಗುರುತಿಸಲ್ಪಡುತ್ತಾರೆ. ಅಲ್ಲದೆ ಅವರು ಸದಾ ಜನರ ಸ್ಮರಣೆಯಲ್ಲಿರುತ್ತಾರೆ ಎಂದು ವಿರಾಜಪೇಟೆ ಸಮೀಪದ ನಲ್ವತ್ತೋಕ್ಲು ಮೊಹಿದ್ದೀನ್ ಜುಮ್ಮಾ ಮಸೀದಿಯ ಧರ್ಮಗುರು ಸಿದ್ದಿಕ್ ಪಾಜ್ಹಿಳಿ ಅವರು ಹೇಳಿದರು.
ಕೋವಿಡ್-19 ಸಾಂಕ್ರಾಮಿಕ ಸೋಂಕಿನಿಂದಾಗಿ ತಿರುವನಂತಪುರಂನಲ್ಲಿ ಮೃತರಾದ ಬಿ.ಎಸ್.ಎಫ್. ಯೋಧ ದುದ್ದಿಯಂಡ ಎ.ಮಜೀದ್ ಅವರ ಗೌರವಾರ್ಥ ಅವರ ಹುಟ್ಟೂರಾದ ನಲ್ವತ್ತೋಕ್ಲಿನ ಮೊಹಿದ್ದೀನ್ ಜುಮಾ ಮಸೀದಿಯಲ್ಲಿ ಆಯೋಜಿಸಲಾಗಿದ್ದ ವಿಶೇಷ ಪ್ರಾರ್ಥನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮನುಷ್ಯನ ಅಮೂಲ್ಯ ಜೀವಕ್ಕೆ ಬೆಲೆ ಕಟ್ಟಲು ಸಾಧ್ಯವೇ ಇಲ್ಲ. ಅದರಲ್ಲೂ ದೇಶಸೇವೆ ಸಂದರ್ಭದಲ್ಲಿ ಅಮೂಲ್ಯವಾದ ಮನುಷ್ಯ ಜೀವವೊಂದು ತ್ಯಾಗವಾದರೆ ಅವರು ಸದಾ ಅಮರರಾಗುತ್ತಾರೆ ಎಂದು ಅಭಿಪ್ರಾಯಪಟ್ಟರಲ್ಲದೆ, ದೇಶಾಭಿಮಾನ ಮತ್ತು ರಾಷ್ಟ್ರಪ್ರೇಮ ಈಮಾನಿನ ಒಂದು ಭಾಗ ಎಂದು ಜಗತ್ತಿಗೆ ಕಲಿಸಿದ ಪ್ರವಾದಿ ಮೊಹಮ್ಮದರ ಆದರ್ಶಗಳು ದೇಶಸೇವೆಗೆ ಎಲ್ಲರಿಗೂ ಮಾದರಿಯಾಗಬೇಕು ಎಂದು ಅವರು ಕಿವಿಮಾತು ಹೇಳಿದರು.
ತಿರುವನಂತಪುರಂನಲ್ಲಿರುವ ಬಿ.ಎಸ್.ಎಫ್. ಸೆಕ್ಟರ್ ಹೆಡ್ ಕ್ವಾರ್ಟರ್ ನಲ್ಲಿ ಸೇವೆ ಸಲ್ಲಿಸುತ್ತಿದ್ದ ನಲ್ವತ್ತೋಕ್ಲು ಗ್ರಾಮದ ದುದ್ದಿಯಂಡ ಮಜೀದ್ ಅವರಿಗೆ ಸೆಪ್ಟಂಬರ್ ತಿಂಗಳ ಮೊದಲ ವಾರದಲ್ಲಿ ಕೊರೋನಾ ಸೋಂಕು ಬಾಧಿಸಿದ ಪರಿಣಾಮ ಬಹು ಅಂಗಾಂಗ ವೈಫಲ್ಯದಿಂದಾಗಿ ಇದೇ ತಿಂಗಳ 24ರಂದು ತಿರುವನಂತಪುರಂ ಮೆಡಿಕಲ್ ಕಾಲೇಜಿನ ಕೋವಿಡ್ ಆಸ್ಪತ್ರೆಯಲ್ಲಿ ನಿಧನರಾಗಿದ್ದರು. ಮಜೀದ್ ಅವರ ನಿಧನದ ನಂತರ ನಡೆಸಿದ ಮೃತದೇಹದ ಕೋವಿಡ್ ಪರೀಕ್ಷೆ ಸಂದರ್ಭದಲ್ಲೂ ಪಾಸಿಟಿವ್ ಫಲಿತಾಂಶ ಬಂದ ಕಾರಣ ಅವರ ಪ್ರಾರ್ಥಿವ ಶರೀರವನ್ನು ಹುಟ್ಟೂರಿಗೆ ತರಲು ಸಾಧ್ಯವಾಗಿರಲಿಲ್ಲ. ಹಿನ್ನೆಲೆಯಲ್ಲಿ ಅವರ ಹುಟ್ಟೂರಿನ ಮಸೀದಿಯಲ್ಲಿ ಆಯೋಜಿಸಲಾಗಿದ್ದ ವಿಶೇಷ ಪ್ರಾರ್ಥನೆ ಕಾರ್ಯಕ್ರಮದಲ್ಲಿ ನೂರಾರು ಜನರು ಭಾಗವಹಿಸಿ ಅಗಲಿದ ಗ್ರಾಮದ ಯೋಧನಿಗೆ ವಿಶೇಷವಾಗಿ ಗೌರವ ಅರ್ಪಿಸಿದರು.
ಬಡತನದ ನಡುವೆ ನಿರಂತರ ಪರಿಶ್ರಮದ ಮೂಲಕ ಭವಿಷ್ಯ ಕಂಡುಕೊಂಡಿದ್ದ ಮಜೀದ್ ಅವರ ಬಗ್ಗೆ ಪಾಲ್ಗೊಂಡಿದ್ದ ಹಲವರು ಗುಣಗಾನಗೈದರು. ಬಡತನ, ಕಠಿಣ ಪರಿಸ್ಥಿತಿ ಮತ್ತು ಕೌಟುಂಬಿಕ ಸಮಸ್ಯೆಗಳನ್ನು ಮೆಟ್ಟಿನಿಂತು, ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುತ್ತಾ ಸುದೀರ್ಘ 30 ವರ್ಷಗಳ ಕಾಲ ದೇಶ ಸೇವೆಗೈದಿರುವ ದುದ್ದಿಯಂಡ ಮಜೀದ್ ಅವರ ಹೆಸರು ಗ್ರಾಮದಲ್ಲಿ ಸದಾ ಹಸಿರಾಗಿರುತ್ತದೆ ಎಂದು ಗ್ರಾಮಸ್ಥರು ಇದೇ ವೇಳೆ ಸ್ಮರಿಸಿಕೊಂಡರು. ಮಜೀದ್ ಅವರ ಹೆಸರಿನಲ್ಲಿ ನಡೆದ ವಿಶೇಷ ಪ್ರಾರ್ಥನೆ ಸಂದರ್ಭ ದಿವಂಗತರ ಪಾರತ್ರಿಕ ಲೋಕದ ಉನ್ನತಿಗಾಗಿ ಸರ್ವಶಕ್ತನಲ್ಲಿ ಪ್ರಾರ್ಥನೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಧರ್ಮಗುರುಗಳಾದ ಸಿದ್ದೀಕ್ ಪಾಜ್ಹಿಳಿ ಅವರು ಮಯ್ಯತ್ ನಮಾಜಿಗೆ ನೇತೃತ್ವ ನೀಡಿದರು. ಹಿರಿಯ ವಿದ್ವಾಂಸರಾದ ಮೆಹದಿ ತಂಗಳ್ ಅವರ ನೇತೃತ್ವದಲ್ಲಿ ಸಾಮೂಹಿಕ ಪ್ರಾರ್ಥನೆ ಜರುಗಿತು. ನಲ್ವತ್ತೋಕ್ಲು ಮೊಹಿದ್ದೀನ್ ಜುಮಾ ಮಸೀದಿಯ ಆಡಳಿತ ಮಂಡಳಿ ಅಧ್ಯಕ್ಷರೂ ಆಗಿರುವ ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ.ಎಂ.ಎ.) ಅಧ್ಯಕ್ಷರಾದ ದುದ್ದಿಯಂಡ ಹೆಚ್.ಸೂಫಿ ಹಾಜಿ ಸೇರಿದಂತೆ ಆಡಳಿತ ಮಂಡಳಿ ಪದಾಧಿಕಾರಿಗಳು, ಗ್ರಾಮಸ್ಥರು, ದಿ.ಯೋಧ ಮಜೀದ್ ಅವರ ಸಂಬಂಧಿಗಳು ಈ ಸಂದರ್ಭದಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಇತ್ತೀಚಿಗೆ ನಿಧನರಾದ ಹಿರಿಯ ಧಾರ್ಮಿಕ ಪಂಡಿತರು ಮತ್ತು ಕರ್ಮಶಾಸ್ತ್ರ ತಜ್ಞರಾಗಿದ್ದ ಉಡುಪಿಯ ಇಬ್ರಾಹಿಂ ಮುಸ್ಲಿಯಾರ್ ಬೇಕಲ ಅವರ ಹೆಸರಿನಲ್ಲೂ ಮಯ್ಯತ್ ನಮಾಜ್ ನಿರ್ವಹಿಸಿ, ಅವರ ಪರಲೋಕ ಮೋಕ್ಷಕ್ಕಾಗಿ ಪ್ರಾರ್ಥಿಸಲಾಯಿತು.

