ಪ್ರತಿಭಟನೆಯ ಹಕ್ಕನ್ನು ಕಸಿದುಕೊಳ್ಳಲಾಗಿದೆ : ಕೊಡಗು ದಸಂಸ ಟೀಕೆ
28/09/2020

ಮಡಿಕೇರಿ ಸೆ.28 : ಮಡಿಕೇರಿ ನಗರದಲ್ಲಿ ರೈತಾಪಿ ವರ್ಗದ ಪರ ಪ್ರತಿಭಟನೆ ನಡೆಸುತ್ತಿದ್ದವರನ್ನು ಪೊಲೀಸರು ಏಕಾಏಕಿ ಬಂಧನಕ್ಕೆ ಒಳಪಡಿಸಿರುವುದು ಖಂಡನೀಯವೆಂದು ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಹೆಚ್.ಎಲ್.ದಿವಾಕರ್ ತಿಳಿಸಿದ್ದಾರೆ.
ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಪ್ರತಿಭಟನೆಯನ್ನು ನಡೆಸುವ ಹಕ್ಕನ್ನು ಸಂವಿಧಾನ ಪ್ರತಿಯೊಬ್ಬರಿಗೆ ನೀಡಿದೆ. ಆದರೆ ಹೋರಾಟವನ್ನು ಹತ್ತಿಕ್ಕುವ ಕಾರ್ಯಕ್ಕೆ ಕೈಹಾಕಿರುವ ಸರ್ಕಾರ ಪ್ರತಿಭಟನೆಯ ಹಕ್ಕನ್ನು ಕಸಿದುಕೊಂಡಿದೆ ಎಂದು ಆರೋಪಿಸಿದ್ದಾರೆ.
ಕೃಷಿ ಮಸೂದೆ ವಿರುದ್ಧ ಬೀದಿಗಿಳಿದು ಹೋರಾಟ ನಡೆಸುತ್ತಿರುವ ರೈತರ ನೋವಿಗೆ ಸ್ಪಂದಿಸದ ಸರ್ಕಾರ ಪ್ರತಿಭಟನೆ ನಡೆಸುತ್ತಿದ್ದವರನ್ನು ಬಂಧಿಸುವ ಮೂಲಕ ಸಂವಿಧಾನ ವಿರೋಧಿ ನೀತಿಯನ್ನು ಅನುಸರಿಸಿದೆ ಎಂದು ದಿವಾಕರ್ ಪತ್ರಿಕಾ ಪ್ರಕಟಣೆಯಲ್ಲಿ ಟೀಕಿಸಿದ್ದಾರೆ.