ಕೊಡಗಿನ ಪ್ರವಾಸೋದ್ಯಮಕ್ಕಾಗಿ 17.11 ಕೋಟಿ ರೂ. ಖರ್ಚಾಗಿದೆಯಂತೆ !

September 28, 2020

ಮಡಿಕೇರಿ ಸೆ.28 : ಕರ್ನಾಟಕದ ಕಾಶ್ಮೀರವೆಂದೇ ಖ್ಯಾತಿ ಪಡೆದಿರುವ ಕೊಡಗು ಜಿಲ್ಲೆಯ ಪ್ರವಾಸೋದ್ಯಮದ ಅಭಿವೃದ್ಧಿಗೆ ಕಳೆದ 3 ವರ್ಷಗಳಲ್ಲಿ ಸರ್ಕಾರ ಸುಮಾರು 17.11 ಕೋಟಿ ರೂ.ಗಳನ್ನು ಖರ್ಚು ಮಾಡಿದೆ ಎಂದು ಪ್ರವಾಸೋದ್ಯಮ ಇಲಾಖೆ ಸಚಿವ ಸಿ.ಟಿ.ರವಿ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಪರಿಸರ ಸ್ನೇಹಿ ಹಾಗೂ ಸುಸ್ಥಿರ ಪ್ರವಾಸೋದ್ಯಮ ಅಭಿವೃದ್ಧಿಗೆ ಸರ್ಕಾರ ಕೈಗೊಂಡಿರುವ ಕ್ರಮಗಳೇನು ಎಂದು ವಿಧಾನ ಪರಿಷತ್ ಸದಸ್ಯರಾದ ವೀಣಾಅಚ್ಚಯ್ಯ ಅವರು ಕೇಳಿದ ಪ್ರಶ್ನೆಗೆ ವಿಧಾನ ಪರಿಷತ್ ನಲ್ಲಿ ಸಚಿವ ರವಿ ಉತ್ತರ ನೀಡಿದರು.
ಕಳೆದ 3 ವರ್ಷಗಳಲ್ಲಿ ಪ್ರವಾಸಿ ಮೂಲ ಸೌಲಭ್ಯ ಅಭಿವೃದ್ಧಿಗೊಳಿಸಲು ರೂ.17.11 ಕೋಟಿ ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ಬಿಡುಗಡೆ ಮಾಡಿರುವ ಅನುದಾನ ಮತ್ತು ಕಾಮಗಾರಿಗಳ ವಿವರವನ್ನು ಅನುಬಂಧದಲ್ಲಿ ಒದಗಿಸಿದೆ ಎಂದು ಉತ್ತರಿಸಿದರು.
ಬಳಿಕ ಜಿಲ್ಲೆಯಲ್ಲಿ ಕಳೆದ 3 ವರ್ಷಗಳಲ್ಲಿ ಸಂಭವಿಸಿದ ಪ್ರವಾಹ ಹಾಗೂ ಭೂಕುಸಿತ ಹಿನ್ನಲೆಯಲ್ಲಿ ಪರಿಸರ ಸ್ನೇಹಿ ಸುಸ್ಥಿರ ಹಾಗೂ ಪ್ರವಾಸಿ ಸ್ನೇಹಿ ಪ್ರವಾಸೋದ್ಯಮವನ್ನು ಉತ್ತೇಜಿಸಲು, ಸರ್ಕಾರ ಕ್ರಮ ಕೈಗೊಂಡಿರುವ ವಿವರಗಳನ್ನು ನೀಡಬೇಕು ಎಂದು ವೀಣಾ ಅಚ್ಚಯ್ಯನವರು ಸಿ.ಟಿ.ರವಿ ಅವರನ್ನು ಪ್ರಶ್ನಿಸಿದರು.
ಜನವರಿ 2019 ರಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಮೂರು ದಿನಗಳ ಕಾಲ ಕೊಡಗು ಪ್ರವಾಸಿ ಉತ್ಸವವನ್ನು ರೂ.1 ಕೋಟಿ ವೆಚ್ಚದಲ್ಲಿ ಆಚರಿಸಲಾಗಿದೆ ಹಾಗೂ ಪ್ರವಾಸಿ ತಾಣಗಳಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧಿಸಲಾಗಿದೆ ಮತ್ತು ಭಾರತ ಸರ್ಕಾರದ ಸ್ವಚ್ಛತಾ ಪಕ್ವಾಡ ಕಾರ್ಯಕ್ರಮದ ಅಡಿಯಲ್ಲಿ ಜಿಲ್ಲೆಯ ಪ್ರಮುಖ ಪ್ರವಾಸಿ ಸ್ಥಳಗಳಲ್ಲಿ ಸಂಘ ಸಂಸ್ಥೆಗಳ ಜೊತೆಗೂಡಿ ಸ್ವಚ್ಛತಾ ಅಭಿಯಾನವನ್ನು ನಡೆಸಲಾಗಿದೆ ಹಾಗೂ ಪ್ರವಾಸೋದ್ಯಮವನ್ನು ಉತ್ತೇಜಿಸಲು ಸ್ಥಳೀಯ ಪ್ರವಾಸೋದ್ಯಮ ಪಾಲುದಾರರೊಂದಿಗೆ 2019, ಜು.19ರಂದು ಕನೆಕ್ಟ್ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ ಎಂದು ಸಚಿವರು ಉತ್ತರಿಸಿದರು.