ಕಾಂಗ್ರೆಸ್‍ನಿಂದ 2 ಕೋಟಿ ಸಹಿ ಸಂಗ್ರಹ

29/09/2020

ಬೆಂಗಳೂರು ಸೆ.28 : ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ರೈತ ವಿರೋಧಿ ನೀತಿಗಳ ವಿರುದ್ಧ ಅ.2ರ ಗಾಂಧಿ ಜಯಂತಿಯಂದು ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಹೇಳಿದ್ದಾರೆ.
ಕೆಪಿಸಿಸಿ ವತಿಯಿಂದ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಅ.10 ರಂದು ರೈತ ಸಮಾವೇಶ ನಡೆಸಲಾಗುವುದು. ಅ.30ರೊಳಗೆ ಬಿಜೆಪಿ ನೀತಿ ವಿರುದ್ಧ ದೇಶಾದ್ಯಂತ ಜನರಿಂದ 2 ಕೋಟಿ ಸಹಿ ಸಂಗ್ರಹಿಸಿ ಅದನ್ನು ಎಐಸಿಸಿ ನಾಯಕಿ ಸೋನಿಯಾಗಾಂಧಿ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಗುವುದು ಎಂದರು.
ಮೋದಿ ಹಾಗೂ ಯಡಿಯೂರಪ್ಪ ರೈತರ ಪರ ಕಾಯ್ದೆ ಜಾರಿಗೆ ತರುತ್ತಿದ್ದೇವೆ ಎಂದು ಹೇಳುತ್ತಿದ್ದರಾದರೂ ದೇಶದ ಎಲ್ಲ ರಾಜ್ಯಗಳಲ್ಲಿ ರೈತರ ಪ್ರತಿಭಟನೆ ನಡೆಯುತ್ತಿವೆ. ಪ್ರಧಾನಿ ಮೋದಿ ದೇಶದ ಜನರಿಗೆ ಸುಳ್ಳು ಹೇಳುತ್ತಿದ್ದಾರೆ. ಈ ಕಾಯ್ದೆ ಜಾರಿಯಾದರೆ ಕೇವಲ ಸಿರಿವಂತರಷ್ಟೇ ಭೂಮಿ ಖರೀದಿಸುತ್ತಾರೆ. ಆಗ ರೈತರು ಎಲ್ಲಿಗೆ ಹೋಗಬೇಕು. ರೈತರಿಗೆ ಬೆಂಬಲ ಬೆಲೆ ಕೊಡುತ್ತೇವೆಂದು ಮೋದಿ ಹಸಿ ಸುಳ್ಳು ಹೇಳುತ್ತಿದ್ದಾರೆ.