ಮಸಗೋಡು ಸರ್ಕಾರಿ ಶಾಲೆಯಲ್ಲಿ ಮಕ್ಕಳ ದೌರ್ಜನ್ಯ ತಡೆ ಕಾಯ್ದೆಗಳ ಮಾಹಿತಿ ಕಾರ್ಯಾಗಾರ

September 29, 2020

ಸೋಮವಾರಪೇಟೆ ಸೆ. 29 : ಮಕ್ಕಳ ಸಹಾಯವಾಣಿ ಕೇಂದ್ರದ ವತಿಯಿಂದ ಸಮೀಪದ ಮಸಗೋಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆ, ದೌರ್ಜನ್ಯ ತಡೆ ಕಾಯ್ದೆಗಳ ಬಗ್ಗೆ ಮಾಹಿತಿ ಕಾರ್ಯಾಗಾರ ನಡೆಯಿತು.
ಮಕ್ಕಳ ಸಹಾಯವಾಣಿ ಕೇಂದ್ರದ ಕಾರ್ಯಕರ್ತೆ ಬಿ.ಕೆ. ಕುಮಾರಿ ಅವರು ಭಾಗವಹಿಸಿ ಮಾತನಾಡಿ, ತೊಂದರೆಯಲ್ಲಿರುವ ಮಕ್ಕಳನ್ನು ರಕ್ಷಿಸಲು ಹಲವಾರು ಕಾಯ್ದೆಗಳಿವೆ. ಮಕ್ಕಳ ಹಕ್ಕುಗಳು ಉಲ್ಲಂಘನೆಯಾದಲ್ಲಿ ಉಚಿತ ಕರೆ 1098 ಗೆ ಮಾಹಿತಿ ನೀಡಬಹುದು ಎಂದರು.
ಬಾಲ್ಯವಿವಾಹ ರದ್ದತಿ, ಬಾಲ ಕಾರ್ಮಿಕ ಪದ್ದತಿ ನಿಯಂತ್ರಣದ ಬಗ್ಗೆ ಮಾಹಿತಿ ನೀಡಿದ ಕುಮಾರಿ ಅವರು, ದೌರ್ಜನ್ಯಗಳಿಗೆ ಸಿಲುಕಿಕೊಳ್ಳುವ ಮಕ್ಕಳನ್ನು ರಕ್ಷಿಸಿ ಪುನರ್ವಸತಿ ಕೇಂದ್ರದಲ್ಲಿ ಉಪಚರಿಸಲಾಗುವದು ಎಂದರು. ಈ ಸಂದರ್ಭ ಮಕ್ಕಳ ಸಹಾಯವಾಣಿ ಕೇಂದ್ರದ ಯೋಗೇಶ್, ಶಾಲಾ ಶಿಕ್ಷಕ ಉದಯ್ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.