ಚೆಟ್ಟಳ್ಳಿ ಸಹಕಾರ ಸಂಘಕ್ಕೆ 30 ಲಕ್ಷ ರೂ. ಲಾಭ : ಪ್ರಗತಿಯಲ್ಲಿ ಮಾದರಿ

29/09/2020

ಸಿದ್ದಾಪುರ ಸೆ.29 : (ಅಂಚೆಮನೆ ಸುಧಿ) ಸಹಕಾರಿ ಕ್ಷೇತ್ರದಲ್ಲಿ ಮಾದರಿ ಸಂಘ ಎನಿಸಿಕೊಂಡಿರುವ ಚೆಟ್ಟಳ್ಳಿ ಕೃಷಿ ಪತ್ತಿನ ಸಹಕಾರ ಸಂಘ ರೂ.30 ಲಕ್ಷ ಲಾಭ ಗಳಿಸಿದ್ದು, ಅನೇಕ ಪ್ರಗತಿ ಕಾರ್ಯಗಳೊಂದಿಗೆ ಸಹಕಾರಿಗಳ ಮೆಚ್ಚುಗೆಗೆ ಪಾತ್ರವಾಗಿದೆ.
1976 ರಲ್ಲಿ ಸ್ಥಾಪನೆಯಾದ ಸಂಘ ಸುಮಾರು 4.70 ಲಕ್ಷ ರೂ. ನಷ್ಟದಲ್ಲಿ ಮುನ್ನಡೆಯುತ್ತಿತ್ತು. 15 ವರ್ಷಗಳ ಹಿಂದೆ 500 ಸದಸ್ಯರನ್ನು ಹೊಂದಿದ್ದ ಸಂಘ ಇಂದು 1250 ಸದಸ್ಯ ಬಲದೊಂದಿಗೆ ಪ್ರಗತಿ ಸಾಧಿಸುತ್ತಿದೆ. ಕಳೆದ 20 ವರ್ಷಗಳಿಂದ ಈ ಸಂಘದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಬಲ್ಲಾರಂಡ ಮಣಿಉತ್ತಪ್ಪ ಅವರು ಸತತ ಮೂರು ಬಾರಿ ಅಧ್ಯಕ್ಷರಾಗುವ ಮೂಲಕ ಸಂಘದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ರೈತ ಸದಸ್ಯರು ಹಾಗೂ ಖಾತೆದಾರರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಘವನ್ನು ಪ್ರಗತಿಪಥದತ್ತ ಕೊಂಡೊಯ್ಯುವಲ್ಲಿ ಯಶಸ್ವಿಯಾಗಿದ್ದಾರೆ. ಹಳೆಯ ಕಟ್ಟಡವನ್ನು ನೆಲಸಮಗೊಳಿಸಿ ನೂತನ ಕಟ್ಟಡವನ್ನು ನಿರ್ಮಿಸಿ ಸಂಘದ ಕಚೇರಿ ಮತ್ತು ಚಟುವಟಿಕೆಗಳನ್ನು ನಡೆಸಲಾಗುತ್ತಿದೆ. ಕಟ್ಟಡದಲ್ಲಿ ಶ್ರೀಕಾವೇರಿ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗಿದೆ. ಸುಮಾರು 1.10 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣಗೊಂಡಿರುವ ನರೇಂದ್ರಮೋದಿ ಭವನ ಸಾರ್ವಜನಿಕರಿಗೆ ಸಹಕಾರಿಯಾಗಿದೆ. ಯಾವುದೇ ಮೂಲದಿಂದ ಸಾಲ ಮಾಡದೆ ಕೃಷಿಕರು ಹಾಗೂ ದಾನಿಗಳ ಸಹಕಾರದಿಂದ ಭವನವನ್ನು ನಿರ್ಮಿಸಲಾಗಿದೆ.
ಇದೀಗ ನೂತನ ವಾಣಿಜ್ಯ ಸಂಕೀರ್ಣವನ್ನು ನಿರ್ಮಿಸಲಾಗಿದ್ದು, ಸುಮಾರು 35 ಲಕ್ಷ ರೂ. ವೆಚ್ಚದ ವಿಶ್ರಾಂತಿ ಕೊಠಡಿಯೂ ಇಲ್ಲಿದೆ. ಸಂಘ ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳನ್ನು ಕೂಡ ಆಯೋಜಿಸಿ ಯಶಸ್ವಿಯಾಗಿದ್ದು, ರೈತರು ಹಾಗೂ ವಿದ್ಯಾರ್ಥಿಗಳಿಗೆ ಹೆಚ್ಚು ಸಹಕಾರಿಯಾಗಿದೆ. ಗೊಬ್ಬರ, ಸಿಮೆಂಟ್, ಸುಣ್ಣ ಸೇರಿದಂತೆ ರೈತರಿಗೆ ಅಗತ್ಯವಿರುವ ವಸ್ತುಗಳು ಸಂಘದಲ್ಲೇ ಲಭಿಸುತ್ತಿದೆ. ಬಿಎಸ್‍ಎನ್‍ಎಲ್ ಮತ್ತು ಚೆಸ್ಕಾಂ ಕಚೇರಿ ಕೂಡ ಸಂಘದ ಕಟ್ಟಡದಲ್ಲೇ ಇದ್ದು, ಒಂದೇ ಸೂರಿನಡಿ ಎಲ್ಲಾ ವ್ಯವಸ್ಥೆ ಸಿಗಬೇಕೆನ್ನುವ ಉದ್ದೇಶ ನಮ್ಮದು ಎಂದು ಅಧ್ಯಕ್ಷ ಬಲ್ಲಾರಂಡ ಉತ್ತಪ್ಪ ತಿಳಿಸಿದ್ದಾರೆ.
ಸಂಘದ ಉಪಾಧ್ಯಕ್ಷ ಮಡದಾಳು ಉಲ್ಲಾಸ್, ನಿರ್ದೇಶಕರುಗಳಾದ ನೂಜಿಬೈಲು ನಾಣಯ್ಯ, ಪೇರಿಯನ ಪೂಣಚ್ಚ, ಪುತ್ತೇರಿರ ಸೀತಮ್ಮ, ಕೊಂಡೇಟಿರ ವಾಣಿಕಾಳಪ್ಪ, ಕಣಂಜಾಲು ಪೂವಯ್ಯ, ಶಾಂತಪ್ಪ, ಬಟ್ಟೀರ ಅಪ್ಪಣ್ಣ, ಕಾಶಿ, ಧನಂಜಯ್, ಜೆ.ಕೆ.ಸೀತಮ್ಮ, ಶಾಂತಪ್ಪ, ಹರಿಣಿ, ಅಡಿಕೆರ ಜಯಾಮುತ್ತಣ್ಣ ಹಾಗೂ ಸಿಬ್ಬಂದಿ ವರ್ಗದ ಸಹಕಾರದಿಂದ ಸಂಘ ಲಾಭದ ಹಾದಿಯಲ್ಲಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದ್ದಾರೆ.