ರೈತ ಮೋರ್ಚಾ ಸೇವಾ ಸಪ್ತಾಹ : ಗೋಕಳ್ಳರನ್ನು ಹಿಡಿದು ಕೊಟ್ಟರಷ್ಟೇ ಗೋವುಗಳ ಸಂರಕ್ಷಣೆಯಾಗುವುದಿಲ್ಲ : ಡಾ.ಬಿ.ಸಿ.ನವೀನ್ ಕುಮಾರ್ ಅಭಿಪ್ರಾಯ

September 30, 2020

ಮಡಿಕೇರಿ ಸೆ.30 : ಗೋವುಗಳನ್ನು ಕದ್ದೊಯ್ಯುವ ಸಂದರ್ಭ ಕಳ್ಳರನ್ನು ಹಿಡಿದು ಪೊಲೀಸರಿಗೆ ನೀಡುವುದರಿಂದಷ್ಟೇ ಗೋಸಂರಕ್ಷಣೆಯಾಗುವುದಿಲ್ಲ ಮತ್ತು ಭಾವನಾತ್ಮಕ ಪ್ರತಿಭನೆಗಳಿಂದ ಯಾವುದೇ ಪ್ರಯೋಜನವಿಲ್ಲವೆಂದು ರಾಜ್ಯ ರೈತ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಡಾ.ಬಿ.ಸಿ.ನವೀನ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ಪ್ರಧಾನಿ ನರೇಂದ್ರಮೋದಿ, ದೀನದಯಾಳ್ ಉಪಾಧ್ಯಾಯ ಹಾಗೂ ಮಹಾತ್ಮ ಗಾಂಧೀಜಿಯವರ ಜನ್ಮ ದಿನದ ಅಂಗವಾಗಿ ಬಿ.ಜೆ.ಪಿ. ರೈತ ಮೋರ್ಚಾದ ವತಿಯಿಂದ “ಸೇವಾ ಸಪ್ತಾಹ” ಕಾರ್ಯಕ್ರಮ ಮಡಿಕೇರಿಯಲ್ಲಿ ನಡೆಯಿತು.
ಗೋಪೂಜೆಯ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ದೇಶಿಯ ಗೋತಳಿಗಳನ್ನು ಉಳಿಸಲು ನೆರವಾಗಬೇಕು ಮತ್ತು ಹಸುಗಳ ಸಾಕಾಣಿಕೆಗೆ ಆರ್ಥಿಕವಾಗಿ ಸಹಕಾರಿಯಾಗಬೇಕಿದೆ ಎಂದರು. ಗೋವುಗಳ ಸಂರಕ್ಷಣೆÉ ಎಂದರೆ ಕದ್ದೊಯ್ಯುವ ಗೋಕಳ್ಳರನ್ನು ಹಿಡಿದು ಪೆÇಲೀಸ್ ಠಾಣೆಗೆ ನೀಡುವುದು ಎನ್ನುವ ಭಾವನೆ ಕೆಲವರಲ್ಲಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಗೋವಿನಿಂದ ಸಿಗುವ ಪಂಚದ್ರವ್ಯಗಳು ಔಷಧೀಯ ಗುಣಗಳನ್ನು ಹೊಂದಿವೆ. ಈ ಬಗ್ಗೆ ವೈಜ್ಞಾನಿಕವಾಗಿ ಸಂಶೋಧನೆ ನಡೆಯುತ್ತಿದ್ದು, ಗೋವಿನ ಪ್ರಾಮುಖ್ಯತೆ ಅರಿತು ರಕ್ಷಣೆಗೆ ಎಲ್ಲರು ಮುಂದಾಗಬೇಕು ಎಂದು ಕರೆ ನೀಡಿದರು.
ದೇಶದಲ್ಲಿ ಗೋವು, ಜಲ ಮತ್ತು ಮಣ್ಣಿಗೆ ಪೂಜ್ಯ ಸ್ಥಾನ ನೀಡಲಾಗಿದೆ. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದ್ದು, ಪಕ್ಷದ ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಪ್ರಸ್ತುತ ದಿನಗಳಲ್ಲಿ ಮಣ್ಣು ಮತ್ತು ಜೀವಜಲಕ್ಕೆ ಹಾನಿಯಾಗದಂತೆ ಎಚ್ಚರ ವಹಿಸಬೇಕಿದೆ. ನಿರ್ಲಕ್ಷ್ಯ ತೋರಿದರೆ, ಭವಿಷ್ಯದಲ್ಲಿ ಜೀವ ಸಂಕುಲವನ್ನು ಉಳಿಸಿಕೊಳ್ಳಲು ಸಾಧ್ಯವಾಗದ ಪರಿಸ್ಥಿತಿ ಎದುರಾಗಬಹುದು ಎಂದು ಡಾ.ನವೀನ್ ಕುಮಾರ್ ಆತಂಕ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಕೃಷಿಯ ಜೊತೆಗೆ ಪ್ರವಾಸೋದ್ಯಮದ ಬೆಳವಣಿಗೆಯಾಗಬೇಕಿದೆ. ಗ್ರಾಮೀಣ ಭಾಗದಲ್ಲಿ ರೈತರು ಬೆಳೆಯುವ ತರಕಾರಿಗಳನ್ನು ನೇರವಾಗಿ ನಗರದ ಜನರಿಗೆ ಮಾರಾಟ ಮಾಡಲು ಆನ್‍ಲೈನ್ ಟ್ರೇಡಿಂಗ್ ವ್ಯವಸ್ಥೆ ಕಲ್ಪಿಸಬಹುದು. ದಳ್ಳಾಳಿಗಳ ಸಹಾಯ ಇಲ್ಲದೆಯೇ ತರಕಾರಿಗಳನ್ನು ಮಾರಾಟ ಮಾಡಬಹುದು. ಇದರಿಂದ ರೈತರಿಗೆ ದುಪ್ಪಟ್ಟು ಲಾಭವಾಗಲಿದೆ. ಈ ಬಗ್ಗೆ ಸ್ತ್ರೀಶಕ್ತಿ ಸಂಘ, ಸ್ವ-ಸಹಾಯ ಸಂಘಗಳು ಚಿಂತನೆ ನಡೆಸಬೇಕೆಂದು ಡಾ.ನವೀನ್ ಕುಮಾರ್ ಸಲಹೆ ನೀಡಿದರು.
ರೈತರ ಆದಾಯವನ್ನು ದ್ವಿಗುಣ ಗೊಳಿಸಲು ನೂತನ ಕೃಷಿ ವಿಧೇಯಕ ಪ್ರಯೋಜನಕಾರಿಯಾಗಿದೆ. ಆದಾಯ ದ್ವಿಗುಣದ ಬಗ್ಗೆ ತಿಳಿಯದ ವಿರೋಧ ಪಕ್ಷಗಳು ಮಧ್ಯವರ್ತಿಗಳ ಬೆಂಬಲಕ್ಕೆ ನಿಂತಿವೆ ಎಂದು ಅವರು ಟೀಕಿಸಿದರು.
ರೈತ ಮೋರ್ಚಾದ ಜಿಲ್ಲಾಧ್ಯಕ್ಷ ನಾಗೇಶ್ ಕುಂದಲ್ಪಾಡಿ ಮಾತನಾಡಿ, ರೈತರು ಆರ್ಥಿಕವಾಗಿ ಹಿನ್ನಡೆಯನ್ನು ಅನುಭವಿಸುತ್ತಿದ್ದು, ಪ್ರತಿಯೊಬ್ಬರು ರೈತಾಪಿ ವರ್ಗದ ಏಳಿಗೆಯ ಬಗ್ಗೆ ಚಿಂತಿಸಬೇಕಿದೆ ಎಂದರು. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮಹಾತ್ವಾಕಾಂಕ್ಷೆಯ ನೂತನ ಮಸೂದೆಗಳು ಕೃಷಿಕರಿಗೆ ಲಾಭದಾಯಕವಾಗಲಿದೆ. ಈ ಬಗ್ಗೆ ಪಕ್ಷದ ಕಾರ್ಯಕರ್ತರು ಮನೆ ಮನೆಗೆ ತೆರಳಿ ಅರಿವು ಮೂಡಿಸಬೇಕು ಎಂದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಬಿನ್ ದೇವಯ್ಯ ಮಾತನಾಡಿ, ಪ್ರಕೃತಿಯ ಆರಾಧಕರು ಆಗಿರುವ ಪ್ರತಿಯೊಬ್ಬರು ನೆಲ, ಜಲ, ಪಶು, ಪ್ರಾಣಿಗಳ ರಕ್ಷಣೆಗೆ ಮುಂದಾಗಬೇಕು, ರೈತರ ಬೆಳವಣಿಗೆಯಿಂದ ಮಾತ್ರ ದೇಶದ ಆರ್ಥಿಕ ಬೆಳವಣಿಗೆ ಸಾಧ್ಯ ಎಂದು ಅಭಿಪ್ರಾಯಪಟ್ಟರು.
ನಗರ ಬಿಜೆಪಿ ಅಧ್ಯಕ್ಷ ಮನುಮಂಜುನಾಥ್ ಮಾತನಾಡಿ, ದೇಶದ ಬೆನ್ನೆಲುಬಾಗಿರುವ ರೈತರಿಗೆ ಕೃಷಿ ಮಸೂದೆ ಉತ್ತಮ ಲಾಭವನ್ನು ತಂದುಕೊಡಲಿದೆ. ಮಧ್ಯವರ್ತಿಗಳ ಹಾವಳಿಯಿಂದ ಬೇಸತ್ತಿರುವ ರೈತರಿಗೆ ನೂತನ ಮಸೂದೆಗಳು ವರದಾನವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ರೈತರನ್ನು ಹಾಗೂ ಕೃಷಿ ಕಾರ್ಮಿಕರನ್ನು ಶಾಲು ಹೊದಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಪಕ್ಷದ ಪ್ರಮುಖರಾದ ಉಮೇಶ್ ಸುಬ್ರಮಣಿ, ನಂದಾ, ವಿನೋದ್, ನಗರ ಬಿಜೆಪಿ ಹಾಗೂ ಕೃಷಿ ಮೋರ್ಚಾದ ಪದಾಧಿಕಾರಿಗಳು ಹಾಜರಿದ್ದರು.

error: Content is protected !!