ಆದಿವಾಸಿಗಳು ಅರಣ್ಯದಂಚಿಗೆ ಬಂದರೆ ಮೂಲಭೂತ ಸೌಲಭ್ಯ : ಅಧಿಕಾರಿಗಳ ಭರವಸೆ

September 30, 2020

ಮಡಿಕೇರಿ ಸೆ.30 : ನಾಗರಹೊಳೆ ವನ್ಯಜೀವಿ ವ್ಯಾಪ್ತಿಯ ಕೋರ್ ಪ್ರದೇಶದಲ್ಲಿರುವ ಹಾಡಿಗಳ ವಾಸಿಗಳು ಹಕ್ಕುಪತ್ರ ಹೊಂದಿದ್ದು, ಅವರು ಸ್ವ ಇಚ್ಛೆಯಿಂದ ಅರಣ್ಯದಂಚಿಗೆ ಬರಲು ಒಪ್ಪಿದಲ್ಲಿ ವಾಸ್ತವಾಂಶ ಪರಿಶೀಲಿಸಿ ಸೂಕ್ತ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡಲು ಜಿಲ್ಲಾ ಮಟ್ಟದ ಅರಣ್ಯ ಹಕ್ಕು ಸಮಿತಿ ಸಭೆಯಲ್ಲಿ ನಿರ್ಧರಿಸಲಾಗಿದೆ.
ಅರಣ್ಯ ಹಕ್ಕು ಕಾಯ್ದೆಯಡಿ ಅರಣ್ಯ ಹಕ್ಕು ಪತ್ರ ನೀಡುವ ಸಂಬಂಧ ಮರು ಪರಿಶೀಲನೆಗೆ ಬಾಕಿ ಇರುವ 1872 ಅರ್ಜಿಗಳನ್ನು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು (ಗ್ರಾ.ಪಂ.ಅರಣ್ಯ ಹಕ್ಕು ಸಮಿತಿ) ಮರು ಪರಿಶೀಲಿಸಿ ಅ.7 ರೊಳಗೆ ಉಪ ವಿಭಾಗ ಮಟ್ಟದ ಸಮಿತಿಗೆ ಶಿಫಾರಸ್ಸು ಮಾಡಿ ಜಿಲ್ಲಾ ಮಟ್ಟದ ಸಮಿತಿಗೆ ವರದಿ ನೀಡುವಂತೆ ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಸೂಚನೆ ನೀಡಿದರು.
ಕಳೆದ ಹಲವು ತಿಂಗಳಿನಿಂದ ಅರಣ್ಯ ವಾಸಿಗಳಿಗೆ ವೈಯಕ್ತಿಕ ಅರಣ್ಯ ಹಕ್ಕು ಪತ್ರ ನೀಡಿಲ್ಲ ಎಂಬ ದೂರುಗಳು ಕೇಳಿ ಬರುತ್ತಿದ್ದು, ತಿರಸ್ಕøತಗೊಂಡಿರುವ ಅರಣ್ಯ ಹಕ್ಕುಪತ್ರ ಅರ್ಜಿಗಳನ್ನು ಮರು ಪರಿಶೀಲಿಸಬೇಕೆಂದರು.
ಹಾಡಿಗಳಲ್ಲಿ ಅಂಗನವಾಡಿಗಳ ನಿರ್ಮಾಣ ಸಂಬಂಧ ಗ್ರಾಮ ಸಭೆ ನಡೆಸಿ ಕಂದಾಯಾಧಿಕಾರಿಗಳ ಜಿಲ್ಲಾ ಮಟ್ಟದ ಸಭೆಯಲ್ಲಿ ನಿರ್ಧಾರ ಕೈಗೊಳ್ಳಬೇಕು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ ಅಂಗನವಾಡಿಗಳನ್ನು ನಿರ್ಮಿಸಲು ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಐಟಿಡಿಪಿ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅಕ್ಟೋಬರ್ ನಲ್ಲಿ ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನದ ನಿರ್ದೇಶಕರು ಮತ್ತು ಉಪ ವಿಭಾಗಾಧಿಕಾರಿ ಅವರೊಂದಿಗೆ ನಾಗರಹೊಳೆ ವ್ಯಾಪ್ತಿಯ ತಟ್ಟೇಕೆರೆ ಮತ್ತು ನಾಗರಹೊಳಿ ಗದ್ದೆಹಾಡಿಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಲಾಗುವುದು ಎಂದು ತಿಳಿಸಿದರು.
ಜೊತೆಗೆ ಮಜ್ಜಿಗೆ ಹಳ್ಳ ಫಾರಂ, ಚೈನಿಹಡ್ಲು, ಕಾರೆಕಂಡಿ, ಬಂಬುಕಾಡು ಮತ್ತು ಬೊಮ್ಮಾಡು ಹಾಡಿಗಳಲ್ಲಿ ಹಲವು ಸಮಯದಿಂದ ಮೂಲಭೂತ ಸೌಕರ್ಯ ಕಲ್ಪಿಸಲು ವಿಳಂಬವಾಗಿತ್ತು. ಇದೀಗ ಈ ಹಾಡಿಗಳಲ್ಲಿ ಮೂಲಭೂತ ಸೌಕರ್ಯವನ್ನು ಕಲ್ಪಿಸಲು ಸರ್ಕಾರದಿಂದ ಅನುಮತಿ ದೊರೆತಿರುವುದರಿಂದ ಈ ಸಂಬಂಧ ಸೂಕ್ತ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.
ಜಿ.ಪಂ ಸದಸ್ಯರಾದ ಕೆ.ಆರ್.ಮಂಜುಳಾ ಅವರು ಮಾತನಾಡಿ ಹಾಡಿಗಳಲ್ಲಿ ಬಾಕಿ ಇರುವ ಸರ್ವೇ ಕಾರ್ಯವನ್ನು ಶೀಘ್ರ ಪೂರ್ಣಗೊಳಿಸಬೇಕು. ಮೂಲ ನಿವಾಸಿಗಳಿಗೆ ಯಾವುದೇ ತೊಂದರೆಯಾಗದಂತೆ ಸರ್ಕಾರದ ಯೋಜನೆಗಳನ್ನು ಅವರಿಗೆ ತಲುಪಿಸಬೇಕು ಎಂದು ಹೇಳಿದರು.
ಐಟಿಡಿಪಿ ಇಲಾಖೆ ಅಧಿಕಾರಿ ಶಿವಕುಮಾರ್ ಅವರು ಹಾಡಿಗಳಿಗೆ ನೀಡಬೇಕಿರುವ ಮೂಲಭೂತ ಸೌಕರ್ಯಗಳು ಮತ್ತು ಸಮುದಾಯ ಸಂಪನ್ಮೂಲ ಹಕ್ಕು ಕ್ಲೇಮುಗಳಿಗೆ ಸಂಬಂಧಿಸಿದಂತೆ ಸಭೆಗೆ ಮಾಹಿತಿ ನೀಡಿದರು.
ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನದ ನಿರ್ದೇಶಕರು ಮತ್ತು ಅರಣ್ಯ ಸಂರಕ್ಷಣಾಧಿಕಾರಿ ಡಿ.ಮಹೇಶ್ ಕುಮಾರ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರನ್ ಹಾಗೂ ಉಪ ವಿಭಾಗಾಧಿಕಾರಿ ಈಶ್ವರ್ ಕುಮಾರ್ ಖಂಡು ಅವರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ತಹಶೀಲ್ದಾರ್ ಮಹೇಶ್, ನಂದೀಶ್, ಎಸಿಎಫ್ ಅಂತೋಣಿ, ತಾಲೂಕು ಸಮಾಜ ಕಲ್ಯಾಣಾಧಿಕಾರಿ ಶೇಖರ್, ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಗುರುಶಾಂತಪ್ಪ, ಆಶಿಕ್ ಇತರರು ಹಾಜರಿದ್ದರು.