ಕಾಲುಬಾಯಿ ಜ್ವರ ಲಸಿಕಾ ಕಾರ್ಯಕ್ರಮ : ಅ.2 ರಿಂದ ಆರಂಭ

September 30, 2020

ಮಡಿಕೇರಿ ಸೆ.30 : ಜಿಲ್ಲೆಯಲ್ಲಿ ಅ.2 ರಿಂದ ನ.15 ರವರೆಗೆ ಒಂದನೇ ಸುತ್ತಿನ ಕಾಲು ಬಾಯಿ ಜ್ವರ ರೋಗ ನಿರೋಧಕ ಲಸಿಕಾ ಕಾರ್ಯಕ್ರಮ ನಡೆಯಲಿದೆ. ಜಿಲ್ಲೆಯ ರೈತರು ತಮ್ಮ ರಾಸುಗಳಿಗೆ ತಪ್ಪದೇ ಲಸಿಕೆ ಹಾಕಿಸುವಂತೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಕಾಲುಬಾಯಿ ರೋಗ ಲಸಿಕಾ ಕಾರ್ಯಕ್ರಮದ ಜಿಲ್ಲಾ ಮಟ್ಟದ ನಿರ್ವಾಹಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗ್ರಾಮ ಪಂಚಾಯತಿ ವತಿಯಿಂದ ರೈತರು ತಮ್ಮ ರಾಸುಗಳಿಗೆ ಲಸಿಕೆ ಹಾಕುವ ಸಂಬಂಧ ಪ್ರಚಾರ ನೀಡಲು ಕ್ರಮವಹಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಲಸಿಕೆಯು ಸಂಪೂರ್ಣವಾಗಿ ಉಚಿತವಾಗಿದ್ದು ಯಾವುದೇ ರೀತಿಯ ಶುಲ್ಕವಿರುವುದಿಲ್ಲ. ಇದೊಂದು ರಾಷ್ಟ್ರೀಯ ಕಾರ್ಯಕ್ರಮವಾಗಿದ್ದು ಲಸಿಕಾದಾರರು ಜಾನುವಾರು ಮಾಲೀಕರ ಮನೆಗಳಿಗೆ ಬಂದಾಗ ಸಹಕಾರ ನೀಡಿ 3 ತಿಂಗಳ ಮೇಲ್ಪಟ್ಟ ಎಲ್ಲಾ ದನ/ಎಮ್ಮೆ ಮತ್ತು ಹಂದಿಗಳಿಗೆ ಲಸಿಕೆ ಹಾಕಿಸುವಂತೆ ಜಿಲ್ಲಾಧಿಕಾರಿ ಅವರು ಹೇಳಿದರು.
ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕರಾದ ಡಾ. ಸುರೇಶ ಭಟ್ಟ ಅವರು ಮಾತನಾಡಿ ಪ್ರತಿ 6 ತಿಂಗಳಿಗೊಮ್ಮೆ ಲಸಿಕೆ ಹಾಕಿಸಿ, ರೋಗ ಬಾರದಂತೆ ತಡೆಗಟ್ಟಬಹುದಾಗಿರುತ್ತದೆ. 20ನೇ ಜಾನುವಾರು ಗಣತಿಯಂತೆ ಜಿಲ್ಲೆಯಲ್ಲಿ ದನ ಹಾಗೂ ಎಮ್ಮೆಗಳ ಸಂಖ್ಯೆ 77,776 ಇದ್ದು 8625 ಹಂದಿಗಳಿರುತ್ತವೆ. ಒಟ್ಟು 86,401 ಜಾನುವಾರುಗಳಿಗೆ ಲಸಿಕೆ ಹಾಕುವ ಗುರಿಯನ್ನು ಹೊಂದಲಾಗಿರುತ್ತದೆ. ಈಗಾಗಲೇ ಲಸಿಕಾ ಕಾರ್ಯಕ್ರಮಕ್ಕೆ ಎಲ್ಲಾ ಪೂರ್ವಸಿದ್ದತೆಯನ್ನು ಮಾಡಿಕೊಳಲಾಗಿದ್ದು 75 ಲಸಿಕಾ ದಾರರನ್ನೊಳಗೊಂಡ ಒಟ್ಟು 11 ತಂಡಗಳನ್ನು ರಚಿಸಲಾಗಿರುತ್ತದೆ. ಲಸಿಕಾದಾರರು ರೈತರ/ಜಾನುವಾರು ಮಾಲೀಕರ ಮನೆ ಮನೆಗೆ ತೆರಳಿ ಲಸಿಕೆಯನ್ನು ಹಾಕಲಿದ್ದಾರೆ ಎಂದು ಮಾಹಿತಿ ನೀಡಿದರು.
ಕಾಲುಬಾಯಿ ಜ್ವರವು ಒಂದು ವೈರಾಣು ರೋಗವಾಗಿದ್ದು ನಿರ್ಧಿಷ್ಟ ಚಿಕಿತ್ಸೆ ಅಸಾಧ್ಯವಾಗಿರುತ್ತದೆ. ಕಾಲುಬಾಯಿ ರೋಗದಿಂದ ಗುಣಮುಖವಾದರೂ ಸಹ ಜಾನುವಾರುಗಳು ಬಿಸಿಲಿಗೆ ಏದುಸಿರು ಬಿಡುತ್ತವೆ. ಹೈನು ರಾಸುಗಳಲ್ಲಿ ಹಾಲಿನ ಇಳುವರಿ ಇಳಿಮುಖವಾಗಲಿದ್ದು ಗರ್ಭಪಾತ, ಗರ್ಭಕಟ್ಟುವಲ್ಲಿ ವಿಳಂಬ, ಎತ್ತು/ಹೋರಿಗಳಲ್ಲಿ ಕೆಲಸ ಮಾಡುವ ಸಾಮರ್ಥ್ಯ ಕ್ಷೀಣಿಸಿ ತೀವ್ರ ಆರ್ಥಿಕ ನಷ್ಟವನ್ನುಂಟುಮಾಡುತ್ತದೆ. ಆದ್ದರಿಂದ ಲಸಿಕೆ ಹಾಕಿಸುವುದೊಂದೇ ಕಾಲುಬಾಯಿ ರೋಗ ನಿಯಂತ್ರಿಸಲು ಇರುವ ಏಕೈಕ ಮಾರ್ಗವಾಗಿದ್ದು ರೈತರು, ಜಾನುವಾರು ಮಾಲೀಕರು ಅಗತ್ಯ ಸಹಕಾರ ನೀಡುವಂತೆ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕರು ಕೋರಿದರು.
ಈ ಸಂಬಂಧಹೆಚ್ಚಿನ ಮಾಹಿತಿಗಾಗಿ ಸಹಾಯಕ ನಿರ್ದೇಶಕರು ಪಶು ಆಸ್ಪತ್ರೆ ಮಡಿಕೇರಿ 08272 228805, ಸಹಾಯಕ ನಿರ್ದೇಶಕರು ಪಶು ಆಸ್ಪತ್ರೆ ಸೋಮವಾರಪೇಟೆ 08276 282127, ಸಹಾಯಕ ನಿರ್ದೇಶಕರು ಪಶು ಆಸ್ಪತ್ರೆ ವಿರಾಜಪೇಟೆ 08274 257228 ಸಂಪರ್ಕಿಸುವಂತೆ ತಿಳಿಸಿದರು.
ಹಾಸನ ಹಾಲು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರದ ಸುಂದರೇಶ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಕೆ. ಮೋಹನ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಅರುಂಧತಿ ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ. ಪಿ.ಬೊಳಕ್, ಡಾ. ಎಸ್.ವಿ ಬಾದಾಮಿ, ಡಾ. ಎ.ಬಿ. ತಮ್ಮಯ್ಯ ಇತರರು ಹಾಜರಿದ್ದರು.