ಹರದಾಸ ಅಪ್ಪಚ್ಚ ಕವಿ ಜನ್ಮ ದಿನಾಚರಣೆ : ಪ್ರಾಥಮಿಕ ಶಾಲೆಯಲ್ಲಿ ಕೊಡವ ಕಲಿಕೆ : ಡಾ.ಪಾರ್ವತಿ ಅಪ್ಪಯ್ಯ ಅಭಿಲಾಷೆ

30/09/2020

ಮಡಿಕೇರಿ ಸೆ.29 : ಪ್ರಾಥಮಿಕ ಶಾಲೆಗಳಲ್ಲಿ ಕೊಡವ ಭಾಷೆಯನ್ನು 3ನೇ ಭಾಷೆಯಾಗಿ ಮಕ್ಕಳಿಗೆ ಕಲಿಸುವಂತಾಗಬೇಕು. ಈ ಬಗ್ಗೆ ಸಂಬಂಧಪಟ್ಟ ಸಚಿವರ ಗಮನ ಸೆಳೆಯಲಾಗುವುದು ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡಮಿ ಅಧ್ಯಕ್ಷರಾದ ಡಾ.ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ಅವರು ತಿಳಿಸಿದ್ದಾರೆ.
ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ನಗರದ ಭಾರತೀಯ ವಿದ್ಯಾಭವನ ಸಭಾಂಗಣದಲ್ಲಿ ನಡೆದ ಹರದಾಸ ಅಪ್ಪನೆರವಂಡ ಅಪ್ಪಚ್ಚ ಕವಿ ಅವರ 152ನೇ ಜನ್ಮದಿನ ಆಚರಣೆ ಮತ್ತು ಪೊಂಗಾರಿ ತ್ರೈಮಾಸಿಕ ಪತ್ರಿಕೆ ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೊಡವ ಸಾಹಿತ್ಯದಲ್ಲಿ ಇನ್ನೂ ಹೆಚ್ಚಿನ ಪುಸ್ತಕಗಳು ರಚನೆಯಾಗಬೇಕು ಮತ್ತು ಉತ್ತಮ ಗುಣಮಟ್ಟದ ಬರಹಗಳನ್ನು ಕೃತಿ ಹೊಂದಿರಬೇಕು ಎಂದು ಹೇಳಿದರು. ಕೊಡವ ಸಾಹಿತ್ಯ ಅಕಾಡಮಿ ಭಾಷಾ ಬೆಳವಣಿಗೆಯ ಉದ್ದೇಶದೊಂದಿಗೆ ಸಾಹಿತ್ಯ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ ಎಂದರು.
ಪ್ರೆಸ್ ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿ 152 ವರ್ಷಗಳ ಹಿಂದೆ ಹುಟ್ಟಿದ ಹರದಾಸ ಅಪ್ಪನೆರವಂಡ ಅಪ್ಪಚ್ಚ ಕವಿ ಒಬ್ಬ ಅಮರ ಕವಿಯಾಗಿದ್ದು, ಕೊಡಗಿನ ಕಾಳಿದಾಸ ಎಂದೇ ಪ್ರಸಿದ್ಧಿಯಾಗಿದ್ದಾರೆ ಎಂದರು.
ಅಪ್ಪಚ್ಚು ಕವಿ ಜಿಲ್ಲೆ ಮಾತ್ರವಲ್ಲದೆ ರಾಜ್ಯವೇ ಹೆಮ್ಮೆ ಪಡುವಂತಹ ವ್ಯಕ್ತಿ. ಜ್ಞಾನಪೀಠ ಪ್ರಶಸ್ತಿಗೆ ಭಾಜನರಗುವಷ್ಟರ ಮಟ್ಟಿಗೆ ಸಾಹಿತ್ಯ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ತ್ರಿಭಾಷ ಕವಿ ಐ.ಮ.ಮುತ್ತಣ್ಣನವರೇ ಅಪ್ಪನೆರವಂಡ ಅಪ್ಪಚ್ಚು ಕವಿ ಅವರನ್ನು ಕೊಡಗಿನ ಕಾಳಿದಾಸ ಎಂದು ಕರೆದಿದ್ದಾರೆ ಎಂದು ಹೇಳಿದರು.
ಕೊಡವ ಸಮಾಜ ಅಧ್ಯಕ್ಷ ಕೊಂಗಂಡ ಎಸ್.ದೇವಯ್ಯ ಅವರು ಮಾತನಾಡಿ ಮಕ್ಕಳಿಗೆ ಮನೆಯಲ್ಲಿ ಕೊಡವ ಭಾಷೆಯನ್ನು ಕಲಿಸಬೇಕು. ಕೊಡವ ಭಾಷೆ ಸಾಹಿತ್ಯದ ಅರಿವನ್ನು ಮಕ್ಕಳಲ್ಲಿ ಮೂಡಿಸಬೇಕು. ಎಲ್ಲರೂ ಒಟ್ಟಾಗಿ ಕೊಡವ ಭಾಷೆಯ ಸಾಹಿತ್ಯ, ಸಂಸ್ಕøತಿಯನ್ನು ಉಳಿಸಿ ಬೆಳೆಸುವ ಕಾರ್ಯವಾಗಬೇಕು ಎಂದು ಹೇಳಿದರು.
ಈ ಸಂದರ್ಭ ಹಿರಿಯ ಸಾಹಿತಿ ಮೊಣ್ಣಂಡ ಶೋಭಾ ಸುಬ್ಬಯ್ಯ ಅವರು ಡಾ. ಕಳ್ಳಿಚಂಡ ರಶ್ಮಿ ನಂಜಪ್ಪ ಇವರು ಬರೆದ “ಪೊಮ್ಮೊದಿರ ಪೊನ್ನಪ್ಪ” (ನಾಟಕ) ಪುಸ್ತಕ ಮತ್ತು ಶ್ರೀ ಕೊಟ್ಟುಕತ್ತಿರ ಜಾಲಿ ಸೋಮಣ್ಣ ಇವರು ಬರೆದ “ಡೌರಿ ಡೈವೋರ್ಸ್” ಪುಸ್ತಕ ಹಾಗೂ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಪ್ರಕಟಿಸಿದ ತ್ರೈಮಾಸಿಕ “ಪೊಂಗುರಿ” ಸಂಚಿಕೆ ಬಿಡುಗಡೆಯನ್ನು ನೆರವೇರಿಸಿದರು.
ಅಪ್ಪನೆರವಂಡ ಕುಟುಂಬದ ಪಟ್ಟೇದಾರ್ ಅಪ್ಪನೆರವಂಡ ಅಪ್ಪಣ್ಣ, ವಿನಿತಾ ಅನೂಪ್, ಸದಸ್ಯರಾದ ಗೌರಮ್ಮ ಮಾದಮ್ಮಯ್ಯ, ಪಡಿಞರಂಡ ಎ.ಪ್ರಭುಕುಮಾರ್, ಕುಡಿಯರ ಮುತ್ತಪ್ಪ ಇತರರು ಹಾಜರಿದ್ದರು.
ಕರ್ನಾಟಕ ಕೊಡವ ಸಾಹಿತ್ಯ ಅಕಾಡಮಿಯ ಸದಸ್ಯರಾದ ಮಾಚಿಮಾಡ ಜಾನಕಿ ಮಾಚಯ್ಯ ಪ್ರಾರ್ಥಿಸಿದರು, ಅಕಾಡಮಿಯ ರಿಜಿಸ್ಟ್ರಾರ್ ಅಜ್ಜಿಕುಟ್ಟಿರ ಸಿ.ಗಿರೀಶ್ ಅವರು ಸ್ವಾಗತಿಸಿದರು, ಸಂಚಾಲಕರಾದ ತೇಲಪಂಡ ಕವನ್ ಕಾರ್ಯಪ್ಪ ಅವರು ನಿರೂಪಿಸಿದರು.