ಸ್ವಚ್ಛೋತ್ಸವ-ನಿತ್ಯೋತ್ಸವ ಮಾಸಾಚರಣೆಗೆ ಅ.2 ರಂದು ಚಾಲನೆ

30/09/2020

ಮಡಿಕೇರಿ ಸೆ.29 : ಸ್ವಚ್ಛ ಭಾರತ್ ಮಿಷನ್(ಗ್ರಾ) ಯೋಜನೆಯಡಿ ಘನ ತ್ಯಾಜ್ಯ ನಿರ್ವಹಣೆ ಕುರಿತಂತೆ ಗ್ರಾಮೀಣ ಸಮುದಾಯ ಜಾಗೃತಿ ಮೂಡಿಸುವ ಸಲುವಾಗಿ ಅ.2 ರಿಂದ 30 ರವರೆಗೆ ಸ್ವಚ್ಛೋತ್ಸವ-ನಿತ್ಯೋತ್ಸವ ಮಾಸಾಚರಣೆ ಕಾರ್ಯಕ್ರಮ ನಡೆಯಲಿದೆ.
ಸ್ವಚ್ಛ ಭಾರತ್ ಮಿಷನ್(ಗ್ರಾ) ಆಂದೋಲನದಡಿಯಲ್ಲಿ ಕರ್ನಾಟಕದ ಪ್ರತಿಯೊಂದು ಗ್ರಾಮವನ್ನು ತ್ಯಾಜ್ಯ ಮುಕ್ತ, ಸ್ವಚ್ಛ, ಸುಂದರ ಮತ್ತು ಆರೋಗ್ಯಕರವಾಗಿಸುವ ಉದ್ದೇಶದಿಂದ ಕರ್ನಾಟಕ ಸರ್ಕಾರ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ರಾಜ್ಯದಲ್ಲಿನ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ತ್ಯಾಜ್ಯ ನಿರ್ವಹಣಾ ಘಟಕಗಳನ್ನು ಸ್ಥಾಪಿಸಲು ಕ್ರಮಕೈಗೊಂಡಿದೆ.
ರಾಜ್ಯದ ಎಲ್ಲಾ ಘನ ದ್ರವ ತ್ಯಾಜ್ಯ ನಿರ್ವಹಣಾ ಘಟಕದಲ್ಲಿ ಸ್ವಚ್ಛ ಸಂಕೀರ್ಣ ಎಂಬ ಏಕ ರೂಪದ ಬ್ರ್ಯಾಂಡಿಂಗ್, ಏಕ ರೂಪದ ಬಣ್ಣ, ಚಿಹ್ನೆ, ಸಂದೇಶ ಮತ್ತು ವಿನ್ಯಾಸವನ್ನು ಹೊಂದಿರುವಂತೆ ಪ್ರಕ್ರಿಯೆಗೆ ಚಾಲನೆ ನೀಡಿದೆ.
ಸ್ವಚ್ಛ ಸಂಕೀರ್ಣದಲ್ಲಿ ಘನ ದ್ರವ ತ್ಯಾಜ್ಯ ತಿರಸ್ಕøತ, ಇ-ತ್ಯಾಜ್ಯ ಮತ್ತು ಜೈವಿಕ, ವೈದ್ಯಕೀಯ ತ್ಯಾಜ್ಯಗಳನ್ನು ಸಂಗ್ರಹಿಸಲು ಮತ್ತು ಸಂಸ್ಕರಿಸಲು ಮೀಸಲಾದ ಪ್ರದೇಶವನ್ನು ಸ್ವಯಂ ಸುಸ್ಥಿರ ವ್ಯವಸ್ಥೆಯನ್ನೊಳಗೊಂಡ ಪರಿಸರ ಸ್ನೇಹಿ ಉದ್ಯಾನವನದ ಅನುಭವ ನೀಡುವ ಯೋಜನೆ ರೂಪಿಸಲಾಗಿದೆ.
ಸ್ವಚ್ಛ ಸಂಕೀರ್ಣ ಇದು ಬರಿ ತ್ಯಾಜ್ಯ ನಿರ್ವಹಣೆಯ ತಾಣವಲ್ಲದೆ ಇದರ ಜೊತೆ ಮಕ್ಕಳು, ಮಹಿಳೆಯರು, ಯುವಕರು, ವಿದ್ಯಾರ್ಥಿಗಳು ಈ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಹಾಗೂ ಎಲ್ಲರಿಗೂ ಘನ ತ್ಯಾಜ್ಯ ನಿರ್ವಹಣೆಯ ಉಪಯೋಗದ ಕುರಿತು ಅರ್ಥ ಮಾಡಿಕೊಳ್ಳುವುದಾಗಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸ್ವಚ್ಛ ಭಾರತ್ ಮಿಷನ್(ಗ್ರಾ) ಯೋಜನೆಯಡಿ ಘನ ತ್ಯಾಜ್ಯ ಸಂಪನ್ಮೂಲ ಘಟಕಗಳನ್ನು ಸ್ಥಾಪಿಸಲಾಗಿದ್ದು, ಈಗಾಗಲೇ 400 ಕ್ಕೂ ಹೆಚ್ಚಿನ ಘಟಕಗಳು ಪೂರ್ಣಗೊಂಡು ಕಾರ್ಯನಿರ್ವಹಣೆಯ ಹಂತದಲ್ಲಿದೆ. ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 150ನೇ ವರ್ಷಾಚರಣೆ ಸಮಾರೋಪ ಸಮಾರಂಭದಲ್ಲಿ ಅ.2 ರಂದು ತ್ಯಾಜ್ಯ ನಿರ್ವಹಣಾ ಘಟಕಗಳಿಗೆ ಏಕ ರೂಪದ ಬ್ರ್ಯಾಂಡಿಂಗ್ ಪ್ರಕ್ರಿಯೆಗೆ ಚಾಲನೆ ನೀಡಲಾಗುತ್ತಿದೆ.
ಕೊಡಗು ಜಿಲ್ಲೆಯ 104 ಗ್ರಾಮ ಪಂಚಾಯತ್‍ಗಳಿಗೆ ಘನ ತ್ಯಾಜ್ಯ ನಿರ್ವಹಣೆಗೆ ಸರ್ಕಾರದ ಅನುದಾನ ಹಾಗೂ ಅನುಮೋದನೆ ದೊರೆತಿರುತ್ತದೆ. ಈಗಾಗಲೇ ಜಿಲ್ಲೆಯಲ್ಲಿ 25 ಗ್ರಾಮ ಪಂಚಾಯತ್‍ಗಳಲ್ಲಿ ಘನ ತ್ಯಾಜ್ಯ ನಿರ್ವಹಣೆಯನ್ನು ಪ್ರಾರಂಭಿಸಲಾಗಿದೆ. ಇನ್ನುಳಿದ 79 ಗ್ರಾಮ ಪಂಚಾಯತ್‍ಗಳಿಗೆ ಈ ಪ್ರಕ್ರಿಯೆಯೊಂದಿಗೆ ಚಾಲನೆಯನ್ನು ಅ.2 ರಂದು ನೀಡಲಾಗುತ್ತಿದೆ.
ಆದ್ದರಿಂದ ಅಕ್ಟೋಬರ್ ತಿಂಗಳು ಪೂರ್ತಿ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಏಕರೂಪದ ಬ್ರ್ಯಾಂಡಿಂಗ್ ಕುರಿತು ವ್ಯಾಪಕ ಪ್ರಚಾರ, ಘನ ತ್ಯಾಜ್ಯ ನಿರ್ವಹಣೆ, ವಿಲೇವಾರಿ ಶೌಚಾಲಯ ಬಳಕೆ ಮತ್ತು ನಿರ್ವಹಣೆ, ದ್ರವ ತ್ಯಾಜ್ಯ ನಿರ್ವಹಣೆ ಕುರಿತು ಮನೆ ಭೇಟಿ ಮತ್ತು ಗುಂಪು ಸಭೆಯ ಮೂಲಕ ಜಾಗೃತಿ ಮೂಡಿಸುವುದಾಗಿದೆ. ಅಲ್ಲದೆ, ಪ್ರತಿ ಗ್ರಾಮಗಳಲ್ಲಿ ಸ್ವಚ್ಛತೆಯ ಕಾರ್ಯ ಹಮ್ಮಿಕೊಂಡು ಶಾಲೆ, ಅಂಗನವಾಡಿ, ಸಾರ್ವಜನಿಕ ಸ್ಥಳಗಳಲ್ಲಿ ಪ್ರವಾಸಿ ತಾಣಗಳಲ್ಲಿ ಶ್ರಮದಾನವನ್ನು ಹಮ್ಮಿಕೊಂಡು ಶುಚಿತ್ವ ಮಾಡುವುದಾಗಿದೆ. ಕೊಡಗು ಜಿಲ್ಲಾ ಪಂಚಾಯತ್ ಸ್ವಚ್ಛ ಸಂಕೀರ್ಣದ ಜಿಲ್ಲಾ ಮಟ್ಟದ ಬ್ರ್ಯಾಂಡಿಂಗ್ ಹಾಗೂ ಉದ್ಘಾಟನೆಯ ಕಾರ್ಯಕ್ರಮವನ್ನು ಸೋಮವಾರಪೇಟೆ ತಾಲ್ಲೂಕಿನ ಮುಳ್ಳುಸೋಗೆ ಗ್ರಾಮ ಪಂಚಾಯಿತಿ, ವಿರಾಜಪೇಟೆ ತಾಲ್ಲೂಕಿನ ಕಾರ್ಮಾಡು ಮತ್ತು ಕುಟ್ಟ ಗ್ರಾಮ ಪಂಚಾಯಿತಿ ಹಾಗೂ ಮಡಿಕೇರಿ ತಾಲ್ಲೂಕಿನ ಹೊಸ್ಕೇರಿ ಗ್ರಾಮ ಪಂಚಾಯಿತಿಗಳಲ್ಲಿ ಬ್ರ್ಯಾಂಡಿಂಗ್ ಕಾರ್ಯಕ್ರಮದ ಉದ್ಘಾಟನೆಯನ್ನು ಹಮ್ಮಿಕೊಳ್ಳಲಾಗಿದೆ.
ಸ್ವಚ್ಛ್ಯೋತ್ಸವ-ನಿತ್ಯೋತ್ಸವ ಮಾಸಚರಣೆ ಅ.2 ರಿಂದ ಪ್ರಾರಂಭವಾಗಿ 31 ರಂದು ಸಮಾರೋಪ ಸಮಾರಂಭದೊಂದಿಗೆ, ನಿರಂತರ ಜಾಗೃತಿ ಮೂಡಿಸುವ ಕಾರ್ಯಕ್ರಮವಾಗಿದೆ ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭನ್ವರ್ ಸಿಂಗ್ ಮೀನಾ ಅವರು ತಿಳಿಸಿದ್ದಾರೆ.