ಮಾಧ್ಯಮ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಧೋರಣೆ ಖಂಡನೀಯ: ಎಸ್ ಕೆ ಎಸ್ ಎಸ್ ಎಫ್ ಜಿಸಿಸಿ ಕೊಡಗು

ಮಡಿಕೇರಿ:ದೇಶದ ಸಂವಿಧಾನ ನೀಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯದ ಮತ್ತೊಂದು ರೂಪವೇ ಮಾಧ್ಯಮಗಳು. ಸಂವಿಧಾನದ ನಾಲ್ಕನೇ ಅಂಗ ಎಂದು ಕರೆಯಲ್ಪಡುವ ಪತ್ರಿಕೋದ್ಯಮವನ್ನು ನಿರ್ಬಂಧಿಸುವ ಯತ್ನಗಳು ನಡೆಯುತ್ತಲೇ ಇದೆ.
ಖಾಸಗಿ ಮಾಧ್ಯಮವೊಂದು ಮುಖ್ಯಮಂತ್ರಿಯ ಪುತ್ರನ ವಿರುದ್ಧ ಭ್ರಷ್ಟಾಚಾರ ಆರೋಪ ಹೊರಿಸಿ ವರದಿ ಮಾಡಿತ್ತು. ಅದರ ಬೆನ್ನಲ್ಲೇ ಆಡಳಿತವನ್ನು ದುರುಪಯೋಗಪಡಿಸಿಕೊಂಡು ಆ ಸಂಸ್ಥೆಯನ್ನು ಮುಚ್ಚಿಸಿರುವುದು ಸರ್ವಾಧಿಕಾರ ಧೋರಣೆಯನ್ನು ಎತ್ತಿ ತೋರಿಸುತ್ತದೆ, ಈ ಕ್ರಮ ಖಂಡನೀಯ ಎಂದು ಎಸ್.ಕೆ.ಎಸ್.ಎಸ್.ಎಫ್ ಜಿಸಿಸಿ ಕೊಡಗು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ .
ಯಾವುದೇ ಮಾಧ್ಯಮಗಳು ರಾಜಕೀಯ ವ್ಯಕ್ತಿಗಳ ಅಥವಾ ಸರಕಾರದ ವಿರುದ್ಧ ಆರೋಪಿಸಿದರೆ ತನಿಖೆಗೆ ಆದೇಶಿಸುವುದರ ಮೂಲಕ ನೈಜತೆಯನ್ನು ಜನಸಾಮಾನ್ಯರ ಮುಂದಿಡುವುದನ್ನು ಬಿಟ್ಟು, ಒಂದು ಖಾಸಗಿ ಮಾಧ್ಯಮ ಸಂಸ್ಥೆಯನ್ನೇ ಮುಚ್ಚಿಸಿರುವುದು ಅತ್ಯಂತ ಖಂಡನೀಯವಾಗಿದೆ.
ಪತ್ರಿಕಾರಂಗವನ್ನು ಬೆಂಬಲಿಸುವತ್ತ ನಮ್ಮ ಬದ್ಧತೆಯನ್ನು ಬೆಳೆಸಿಕೊಳ್ಳಬೇಕಾಗಿದೆ. ಇದು ಸೌಹಾರ್ದತೆ ಹಾಗೂ ಸಮಾಜದ ಸ್ವಾಸ್ಥ್ಯ ಕಾಪಾಡಲು ಅತ್ಯವಶ್ಯಕವಾಗಿದೆ. ಆಡಳಿತ ಶಾಹಿ ವ್ಯವಸ್ಥೆಗಳು ಮಾಧ್ಯಮಗಳ ಮೇಲೆ ಹಿಡಿತ ಹೆಚ್ಚಿಸುತ್ತಲೇ ಇದೆ. ಪತ್ರಕರ್ತರು ನಿರ್ಭೀತರಾಗಿ ಕಾರ್ಯನಿರ್ವಹಿಸಲು ಅವಕಾಶ ಕಲ್ಪಿಸುವುದರ ಜೊತೆಗೆ ಪತ್ರಕರ್ತರ ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನಗಳು ಕೊನೆಗೊಳಿಸಬೇಕೆಂದು ಎಸ್ ಕೆ ಎಸ್ ಎಸ್ ಎಫ್ ಜಿಸಿಸಿ ಕೊಡಗು ಸಮಿತಿ ಆಗ್ರಹಿಸಿದೆ.
