ಬಿಜೆಪಿ ರೈತ ಮೋರ್ಚಾದಿಂದ ಕೃಷಿ ಕಾರ್ಮಿಕರಿಗೆ ಗೌರವ ಸಮರ್ಪಣೆ

30/09/2020

ಮಡಿಕೇರಿ ಸೆ. 30 : ಹೆಬ್ಬಾಲೆಯ ಬಿಜೆಪಿ ಶಕ್ತಿ ಕೇಂದ್ರದ ಆಶ್ರಯದಲ್ಲಿ ಮಂಗಳವಾರದಂದು ಬಿಜೆಪಿ ರೈತ ಮೋರ್ಚಾದಿಂದ ಪ್ರಧಾನಿ ಮೋದಿ, ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಮತ್ತು ಮಹಾತ್ಮಾ ಗಾಂಧೀಜಿಯವರ ಹುಟ್ಟು ಹಬ್ಬದ ಅಂಗವಾಗಿ ಹಮ್ಮಿಕೊಂಡಿದ್ದ, ಸೇವಾ ಸಪ್ತಾಹ ಕಾರ್ಯಕ್ರಮದ ಅಡಿಯಲ್ಲಿ ಗೋವು, ಗಂಗಾ ಮತ್ತು ಭೂಮಿ ಪೂಜೆಗಳನ್ನು ನೆರವೇರಿಸುವುದರ ಮೂಲಕ ಕೃಷಿಕರು, ಕೃಷಿಕಾರ್ಮಿಕರನ್ನು ಗೌರವಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಮಾತನಾಡಿದ ರಾಜ್ಯ ಬಿಜೆಪಿ ರೈತ ಮೋರ್ಚಾದ ಕಾರ್ಯದರ್ಶಿ ಡಾ. ಬಿ.ಸಿ ನವೀನ್ ಕುಮಾರ್ ಅವರು, ದೇಶ ಸೇವೆಯನ್ನು ಮಾಡುವ ಯಜ್ಞ ಕುಂಡದಲ್ಲಿ ಸಾಕಷ್ಟು ಜನರು ತೊಡಗಿಸಿಕೊಂಡಿದ್ದಾರೆ. ಆದರೆ, ಪ್ರಧಾನಿ ನರೇಂದ್ರ ಮೋದಿ, ಪಂಡಿತ ದೀನ್ ದಯಾಳ್ ಉಪಾಧ್ಯಾಯ ಮತ್ತು ಮಹಾತ್ಮ ಗಾಂಧೀಜಿಯವರು ರಾಷ್ಟ್ರ ಜ್ಯೋತಿಯನ್ನು ಬೆಳಗಿಸಿದವಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಪ್ರಧಾನಿ ಮೋದಿ ಅವರಿಂದ ಜನಪ್ರತಿನಿಧಿಗಳು ನಿಸ್ವಾರ್ಥ ಸೇವೆ ಮತ್ತು ಶಿಸ್ತು, ಬದ್ದ ಜೀವನ, ಪಂಡಿತ ದೀನ್ ದಯಾಳ್ ಉಪಾಧ್ಯಾಯರಿಂದ ಸಂಘಟನಾ ಶಕ್ತಿ, ಅಂತ್ಯೋದಯ ಮತ್ತು ಏಕಾತ್ಮ ಮಾನವತಾವಾದ ವಿಷಯಗಳನ್ನು ಕಲಿಯಬೇಕಾಗಿದೆ. ಮಹಾತ್ಮ ಗಾಂಧೀಜಿಯವರಿಂದ ಸತ್ಯ ಮತ್ತು ಅಹಿಂಸೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ ಎಂದು ಡಾ. ಬಿ.ಸಿ.ನವೀನ್ ಕುಮಾರ್ ಹೇಳಿದರು.

ಈ ಭೂಮಂಡಲದಲ್ಲಿರುವ ಮಣ್ಣು, ನೀರು ಮತ್ತು ಗೋಸಂಕುಲ, ಸಕಲ ಜೀವ ರಾಶಿಗಳನ್ನು ಲಕ್ಷಾಂತರ ವರ್ಷಗಳಿಂದ ಪೋಷಿಸುತ್ತಿವೆ. ಆದರೆ, ನಾವು ಮಣ್ಣು ನೀರು ಮತ್ತು ಪಶುಪಕ್ಷಿ ಪ್ರಾಣಿಗಳ ವಿಷಯದಲ್ಲಿ ಹೇಗೆ ನಡೆದುಕೊಳ್ಳುತ್ತಿದ್ದೇವೆ ಎಂಬುದನ್ನು ನಾವೆಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಕೇಂದ್ರ ಸರ್ಕಾರವು ಮಣ್ಣಿನ ಆರೋಗ್ಯವನ್ನು ಕಾಪಾಡಲು “ಸಾಯಿಲ್ ಕಾರ್ಡ್”, ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ, ಪರಂಪರಾನುಗತ ಕೃಷಿ ವಿಕಾಸನ ಯೋಜನೆ, ಅಂತರ್ಜಲ ಸಂರಕ್ಷಣೆಗೋಸ್ಕರ ಅಟಲ್ ಭೂಜಲ ಯೋಜನೆ ಮೊದಲಾದ ಕಾರ್ಯಕ್ರಮಗಳನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ ಎಂದು ಡಾ|| ಬಿ.ಸಿ. ನವೀನ್ ಕುಮಾರ್ ಮಾಹಿತಿ ನೀಡಿದರು.

ನೀರು ಕಲುಷಿತವಾಗುವುದನ್ನು ತಪ್ಪಿಸಲು ಒಳಚರಂಡಿ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಗೋಸಂರಕ್ಷಣೆಗೋಸ್ಕರ ರಾಷ್ಟ್ರೀಯ ಗೋಕುಲ್ ಮಿಷನ್ ಮುಖಾಂತರ ದೇಶದ, ದೇಶಿಯ ತಳಿಗಳನ್ನು ಉಳಿಸುವ ಕಾರ್ಯಕ್ರಮಗಳು ನಡೆಯುತ್ತಿವೆ. ದೇಶದಲ್ಲಿ ಜಾನುವಾರುಗಳ ಸಂರಕ್ಷಣೆಗಾಗಿ ಚುಚ್ಚು ಮದ್ದು ನೀಡುವ ಅಭಿಯಾನ ಕೂಡಾ ನಡೆಯುತ್ತಿದೆ ಎಂದು ಡಾ|| ಬಿ.ಸಿ.ನವೀನ್ ಕುಮಾರ್ ಮಾಹಿತಿ ನೀಡಿದರು.

ಹಸುವಿನಿಂದ ಬರುವ ಪಂಚಕವ್ಯಗಳಾದ ಹಾಲು, ತುಪ್ಪ, ಮೊಸರು, ಗಂಜಲ ಮತ್ತು ಸಗಣಿ ಬಳಕೆಗೆ ಉದ್ಯಮ ರೂಪವನ್ನು ಕೊಡಲು “ನವೋದ್ಯಮ”ಗಳನ್ನು ರೂಪಿಸಲು ಕೇಂದ್ರ ಸರ್ಕಾರ ಸಹಾಯ ಧನವನ್ನು ಘೋಷಿಸಿದೆ. ಸರ್ಕಾರ ಮಾಡಿರುವಂತಹ ಎಲ್ಲಾ ಕಾರ್ಯಕ್ರಮಗಳನ್ನು ಬೂತ್‍ಮಟ್ಟದ ಕಾರ್ಯಕ್ರಮಗಳ ಮೂಲಕ ಜನರನ್ನು ತಲುಪಬೇಕಾಗಿದೆ ಮತ್ತು ಜನರಿಗೆ ಮಣ್ಣಿನ, ನೀರಿನ ಮತ್ತು ಹಸುಗಳ ಮಹತ್ವ ಹಾಗೂ ನಾವು ಸೇರಿದಂತೆ ಜೀವ ಸಂಕುಲ ಉಳಿಯಬೇಕಾದರೆ ಇವುಗಳ ಮಹತ್ವ ಏನು ಎಂಬುದರ ಬಗ್ಗೆ ತಿಳಿದುಕೊಳ್ಳಬೇಕೆಂದು ಅವರು ಕರೆ ನೀಡಿದರು.

ಜಿಲ್ಲಾ ರೈತ ಮೋರ್ಚಾದ ಅಧ್ಯಕ್ಷರಾದ ನಾಗೇಶ್ ಕುಂದಲ್ಪಾಡಿ ಅವರು ಮಾತನಾಡಿ, ಪಶು-ಪಕ್ಷಿ ಮತ್ತು ಪ್ರಕೃತಿ ಉಳಿದರೆ, ಮನುಷ್ಯ ತನ್ನ ಜೀವನ ಮಟ್ಟವನ್ನು ಸುಧಾರಿಸಿಕೊಳ್ಳಬಹುದು ಎಂದರು. ರೈತರು ಕೃಷಿ ಒಂದಿಗೆ ತೋಟಗಾರಿಕೆ, ಹೈನುಗಾರಿಕೆ, ಮೀನುಗಾರಿಕೆ, ಜೇನು ಸಾಕಾಣಿಕೆ ಸೇರಿದಂತೆ ಕೃಷಿಗೆ ಪೂರಕವಾದ ವ್ಯವಸ್ಥೆಗಳನ್ನು ಹೊಂದಿಕೊಳ್ಳುವ ಈ ಮೂಲಕ ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳಬೇಕೆಂದು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ, ಸೋಮವಾರಪೇಟೆ ತಾಲೂಕು ಬಿಜೆಪಿ ಅಧ್ಯಕ್ಷರಾದ ಮನುಕುಮಾರ್ ರೈ ಅವರು ಮಾತನಾಡಿ, ಕೃಷಿ ಸಮಾಜದ ಬೆನ್ನೆಲುಬು ಆಗಿದ್ದು, ಈ ಕ್ಷೇತ್ರ ಉನ್ನತೀಕರಣಗೊಂಡರೆ, ಸಮಾಜದಲ್ಲಿ ಸುಧಾರಣೆ ತರಬಹುದು ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಜಿಲ್ಲಾ ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಹುಲ್ಲೂರಿಕೊಪ್ಪ ಮಾದಪ್ಪ, ಜಿಲ್ಲಾ ಬಿಜೆಪಿಯ ವಿಕಟಪೂರ್ವ ಅಧ್ಯಕ್ಷ ಬಿ.ಬಿ. ಭಾರತೀಶ್, ನಿಕಟಪೂರ್ವ ರೈತ ಮೋರ್ಚಾದ ಅಧ್ಯಕ್ಷ ತಾಕೇರಿ ಪೊನ್ನಪ್ಪ, ಜಿಲ್ಲಾ ಕಾರ್ಯದರ್ಶಿ ರೂಪಸತೀಶ್, ಜಿಲ್ಲಾ ಪಂಚಾಯಿತಿ ಸದಸ್ಯರಾದ ಹೆಚ್. ಆರ್. ಶ್ರೀನಿವಾಸ್, ಹೆಬ್ಬಾಲೆ ಶಕ್ತಿ ಕೇಂದ್ರದ ಅಧ್ಯಕ್ಷ ಮಂಜುನಾಥ್ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಕೃಷಿಕರು ಮತ್ತು ಕೃಷಿ ಕಾರ್ಮಿಕರನ್ನು ಸನ್ಮಾನಿಸಲಾಯಿತು.