ತಲಕಾವೇರಿ ಸಂಪ್ರದಾಯದಲ್ಲಿ ಹಸ್ತಕ್ಷೇಪಕ್ಕೆ ಅವಕಾಶವಿಲ್ಲ : ಕೋಡಿ ಮತ್ತು ಬಳ್ಳಡ್ಕ ತಕ್ಕರ ಸ್ಪಷ್ಟನೆ

30/09/2020

ಮಡಿಕೇರಿ ಸೆ.30 : ಕಾವೇರಿ ತುಲಾ ಸಂಕ್ರಮಣಕ್ಕೆ ಸಂಬಂಧಿಸಿದಂತೆ ಭಾಗಮಂಡಲ ಮತ್ತು ತಲಕಾವೇರಿ ಕ್ಷೇತ್ರಗಳಲ್ಲಿ ಕೋಡಿ ಹಾಗೂ ಬಳ್ಳಡ್ಕ ಕುಟುಂಬಗಳ ತಕ್ಕರ ಆಜ್ಞೆಯಂತೆ ಕೆಲವು ವಿಧಿ, ವಿಧಾನಗಳು ನಡೆಯುತ್ತಿದ್ದು, ಇದರಲ್ಲಿ ಇತರರ ಹಸ್ತಕ್ಷೇಪಕ್ಕೆ ಅವಕಾಶವಿರುವುದಿಲ್ಲವೆಂದು ಶ್ರೀಕ್ಷೇತ್ರ ತಲಕಾವೇರಿಯ ದೇವತಕ್ಕರಾದ ಕೋಡಿ ಮೋಟಯ್ಯ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ತಲಕಾವೇರಿ ಮತ್ತು ಭಾಗಮಂಡಲ ದೇವಾಲಯಗಳಲ್ಲಿ ವರ್ಷಂಪ್ರತಿ ಸೆ.26 ರಂದು ಬಳ್ಳಡ್ಕ ತಕ್ಕರು ಪತ್ತಾಯಕ್ಕೆ ಅಕ್ಕಿ ಹಾಕುವ ಮೂಲಕ ಜಾತ್ರೆ ವಿಧಿ ಆರಂಭವಾಗುವುದು ಸಂಪ್ರದಾಯವಾಗಿದೆ. ಆದರೆ ಈ ಬಾರಿ ಅಕ್ಕಿ ಹಾಕುವ ಸಂದರ್ಭ ಸಂಪ್ರದಾಯಕ್ಕೆ ವಿರುದ್ಧವಾಗಿ ಇತರ ಕೆಲವು ವ್ಯಕ್ತಿಗಳು ಅಕ್ಕಿ ಹಾಕಿ ಗೊಂದಲ ಸೃಷ್ಟಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಇನ್ನು ಮುಂದೆ ಈ ರೀತಿಯ ಯಾವುದೇ ಗೊಂದಲಗಳಿಗೆ ಅವಕಾಶ ನೀಡುವುದಿಲ್ಲವೆಂದು ಅವರು ಸ್ಪಷ್ಟಪಡಿಸಿದರು. ಪವಿತ್ರ ಕ್ಷೇತ್ರ ಭಾಗಮಂಡಲ ಮತ್ತು ತಲಕಾವೇರಿಯ ಸಂಪ್ರದಾಯಗಳು ಇತರ ದೇವಾಲಯಗಳಿಗಿಂತ ಭಿನ್ನವಾಗಿದೆ. ಇದನ್ನು ಪ್ರತಿಯೊಬ್ಬರು ಅರ್ಥ ಮಾಡಿಕೊಂಡು ಗೊಂದಲಗಳಿಗೆ ತೆರೆ ಎಳೆಯಬೇಕಾಗಿದೆ ಎಂದರು.
ಅ.4 ರಂದು ಗೊನೆ ಕಡಿಯುವ ಮೂಲಕÀ ಅಧಿಕೃತ ತುಲಾಸಂಕ್ರಮಣ ಉತ್ಸವದ ಕಟ್ಟಾಜ್ಞೆ ಆರಂಭವಾಗುತ್ತದೆ. ಅಂದು ಬಳ್ಳಡ್ಕ ತಕ್ಕರು ಶ್ರೀಭಗಂಡೇಶ್ವರ ದೇವಸ್ಥಾನದ ನಡೆಯಲ್ಲಿ ನಿಂತು ಪ್ರಾರ್ಥನೆ ಮಾಡಲಾಗುತ್ತದೆ. ಭಾಗಮಂಡಲ, ತಾವೂರು, ತಣ್ಣಿಮಾನಿ, ಕೋರಂಗಾಲ ಮತ್ತು ಚೇರಂಗಾಲದ ಜನ ಪ್ರಾಣಿ ಹಿಂಸೆ ಮಾಡುವಂತಿಲ್ಲ, ಮದುವೆ ಸಮಾರಂಭ ನಡೆಸುವಂತಿಲ್ಲ. ಗಾಮಸ್ಥರೆಲ್ಲರೂ ಈ ಸಂಪ್ರದಾಯವನ್ನು ಚಾಚೂ ತಪ್ಪದೆ ನಡೆಸಿಕೊಂಡು ಬರುತ್ತಿದ್ದಾರೆ.
ಅ.15 ರಂದು ಶ್ರೀಭಗಂಡೇಶ್ವರ ದೇವಸ್ಥಾನದಿಂದ ದೇವರ ಆಭರಣಗಳನ್ನು ಬಳ್ಳಡ್ಕ ತಕ್ಕರು ಕೋಡಿ ತಕ್ಕರಿಗೆ ವಹಿಸುತ್ತಾರೆ. ಅಂದಿನಿಂದ ಬಳ್ಳಡ್ಕ ತಕ್ಕರು ಶ್ರೀಭಗಂಡೇಶ್ವರ ದೇವಸ್ಥಾನದಲ್ಲಿ ಮತ್ತು ಕೋಡಿ ತಕ್ಕರು ತಲಕಾವೇರಿ ದೇವಸ್ಥಾನದಲ್ಲಿ ಕಿರು ಸಂಕ್ರಮಣದವರೆಗೆ ಒಂದು ತಿಂಗಳ ಕಾಲ ವಾಸ್ತವ್ಯ ಹೂಡುತ್ತಾರೆ. ತೀರ್ಥೋದ್ಭವದ ಒಂದು ಗಂಟೆಗೆ ಮೊದಲು ಬಳ್ಳಡ್ಕ ತಕ್ಕರು ಭಗಂಡೇಶ್ವರ ದೇವಾಲಯದಿಂದ ಆಭರಣ, ತೀರ್ಥ ಬಿಂದಿಗೆಯೊಂದಿಗೆ ಹೋಗಿ ಕಾವೇರಿ ಮಾತೆಗೆ ಆಭರಣವನ್ನು ನೀಡುತ್ತಾರೆ, ನಂತರÀ ಕೋಡಿ ತಕ್ಕರು ಮಾತೆ ಕಾವೇರಿಗೆ ಆಭರಣ ತೊಡಿಸುತ್ತಾರೆ.
ತೀರ್ಥ ಬರುವ ಮೊದಲು ಕೋಡಿ ತಕ್ಕರು ತಮ್ಮ ಮನೆಯಿಂದ ಆಗÀ ಕರೆದ ಹಸುವಿನ ಹಾಲನ್ನು ತಂದು ಕುಂಡಿಕೆಗೆ ಹಾಕುತ್ತಾರೆ ಮತ್ತು ಕೊಬ್ಬರಿ ಕಾಯಿಯಲ್ಲಿ ಹಸುವಿನ ತುಪ್ಪದಲ್ಲಿ ಕುಂಡಿಕೆ ಬಳಿ ದೀಪ ಹಚ್ಚುತ್ತಾರೆ. ಈ ಸಂಪ್ರದಾಯ ಶತಮಾನಗಳಿಂದ ನಡೆದುಕೊಂಡು ಬಂದಿದ್ದು, ಯಾವುದೇ ಗೊಂದಲಗಳಿಗೆ ಅವಕಾಶಗಳಿರುವುದಿಲ್ಲವೆಂದು ಕೋಡಿ ಮೋಟಯ್ಯ ತಿಳಿಸಿದರು.
ಪವಿತ್ರ ಕ್ಷೇತ್ರಗಳಿಗೆ ತುಂಡು ಉಡುಗೆಗಳನ್ನು ತೊಟ್ಟು ಬರುವುದಕ್ಕೆ ಮಾತ್ರ ನಮ್ಮ ಆಕ್ಷೇಪವಿದೆ. ಆದರೆ ವಸ್ತ್ರಗಳ ಬಗ್ಗೆ ಪ್ರಸ್ತುತ ನಡೆಯುತ್ತಿರುವ ವಾದ, ವಿವಾದಗಳಿಗೆ ನಾವು ಪ್ರತಿಕ್ರಿಯೆ ನೀಡಲು ಬಯಸುವುದಿಲ್ಲ. ದೇವತಕ್ಕನಾಗಿ ನನ್ನ ವ್ಯಾಪ್ತಿಗೆ ಸಂಬಂಧಿಸಿದ ವಿಚಾರಗಳನ್ನಷ್ಟೇ ಮಂಡಿಸಲು ನಾನು ಅರ್ಹನಾಗಿದ್ದೇನೆ ಹೊರತು ಬೇರೆಯವರ ಅಭಿಪ್ರಾಯಗಳಿಗೆ ಪ್ರತಿಕ್ರಿಯೆ ನೀಡುವುದಿಲ್ಲವೆಂದು ಅವರು ಸ್ಪಷ್ಟಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಶ್ರೀಭಗಂಡೇಶ್ವರ ದೇವಾಲಯದ ತಕ್ಕರಾದ ಬಳ್ಳಡ್ಕ ಸಿ.ಅಪ್ಪಾಜಿ, ಕುಟುಂಬಸ್ಥರಾದ ಬಳ್ಳಡ್ಕ ಮೋಹನ್ ಕುಮಾರ್, ಬಳ್ಳಡ್ಕ ಮುದ್ದಪ್ಪ, ಕೋಡಿ ಕುಟುಂಬದ ವಕೀಲ ನಿರ್ಮಲಾನಂದ ಹಾಗೂ ಕೋಡಿ ಕೇಶವ ಉಪಸ್ಥಿತರಿದ್ದರÀು.