ಕೊಡಗಿನಲ್ಲಿ ಮಹಿಳೆಯರ ಮತ್ತು ಮಕ್ಕಳ ಸುರಕ್ಷತೆಗಾಗಿ ಕಾವೇರಿ ಪಡೆ ಮಹಿಳಾ ತಂಡ ರಚನೆ

01/10/2020

ಮಡಿಕೇರಿ ಅ. 1 : ಕೊಡಗು ಜಿಲ್ಲೆಯಲ್ಲಿ ಮಹಿಳೆಯರ ಮತ್ತು ಮಕ್ಕಳ ಸುರಕ್ಷತೆ ಸಲುವಾಗಿ ಕೊಡಗು ಜಿಲ್ಲಾ ಪೊಲೀಸ್ಇಲಾಖೆ ವತಿಯಿಂದ 18 ಜನ ಮಹಿಳಾ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಗಳನ್ನೊಳಗೊಂಡ ಕಾವೇರಿ ಪಡೆ ಮಹಿಳಾ ತಂಡವನ್ನು ರಚನೆ ಮಾಡಲಾಗಿದೆ ಎಂದು ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿಸಿದ್ದಾರೆ.
ಕಾವೇರಿ ಪಡೆ ಮಹಿಳಾ ತಂಡದ ಸದಸ್ಯರಿಗೆ ಪ್ರತ್ಯೇಕವಾದ ಸಮವಸ್ತ್ರವನ್ನು ಒದಗಿಸಲಾಗಿದ್ದು, ಜಿಲ್ಲೆಯ ಎಲ್ಲಾ ಪ್ರಮುಖ ಪಟ್ಟಣಗಳಲ್ಲಿ ಗಸ್ತು ತಿರುಗಲು ಪ್ರತ್ಯೇಕವಾಗಿ ಒಂದು ವಾಹನದ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಈ ಪಡೆ ಪ್ರತಿದಿನ ಜಿಲ್ಲೆಯ ವಿವಿಧ ಪಟ್ಟಣಗಳ ಶಾಲಾ ಕಾಲೇಜು, ಬಸ್ ನಿಲ್ದಾಣ ಹಾಗೂ ಇನ್ನಿತರ ಜನನಿಬಿಡ ಪ್ರದೇಶಗಳಲ್ಲಿ, ಮಹಿಳೆಯರು ಹಾಗೂ ಹೆಣ್ಣು ಮಕ್ಕಳು ಓಡಾಡುವ ಸ್ಥಳಗಳಲ್ಲಿ ಮಹಿಳೆಯರ ರಕ್ಷಣೆ ಬಗ್ಗೆ ಸೂಕ್ತ ನಿಗಾ ವಹಿಸಲಾಗುವುದು.
ಕಾವೇರಿ ಪಡೆಯನ್ನು ಎರಡು ತಂಡಗಳಾಗಿ ವಿಭಾಗಿಸಲಾಗಿದ್ದು, ಕರ್ತವ್ಯ ನಿರ್ವಹಿಸುತ್ತಿರುವ ಮಹಿಳಾ ಅಧಿಕಾರಿ ಹಾಗೂ ಸಿಬ್ಬಂದಿಯವರಿಗೆ ವಿವಿಧ ಕಾನೂನುಗಳ ಬಗ್ಗೆ ತಿಳುವಳಿಕೆ, ಪೊಲೀಸ್ ಮ್ಯಾನ್ಯುಯಲ್ ಜನಸ್ನೇಹಿ ಪೊಲೀಸ್ ಲಿಂಗಸಂವೇದನೆ ಹಾಗೂ ಮಹಿಳೆಯರ ಮತ್ತು ಮಕ್ಕಳ ಬಗೆಗಿನ ಕಾನೂನಿನ ಬಗ್ಗೆ ತರಬೇತಿ ನೀಡಿ ತಿಳುವಳಿಕೆ ಮೂಡಿಸಲಾಗುತ್ತಿದೆ.
ಪ್ರಸ್ತುತ ಸನ್ನಿವೇಶದಲ್ಲಿ ಮಹಿಳೆಯರು ಮತ್ತು ಮಕ್ಕಳು ಎದುರಿಸುತ್ತಿರುವ ಸವಾಲು ಹಾಗೂ ಅವರ ರಕ್ಷಣೆ ಬಗ್ಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ತಿಳುವಳಿಕೆ ಮೂಡಿಸಲಾಗುತ್ತಿದೆ. ಮಹಿಳೆಯರಿಂದ ಮಹಿಳೆಯರಿಗಾಗಿ ಮಹಿಳೆಯರು ರಕ್ಷಣೆಗೋಸ್ಕರ ರೂಪಿಸಲ್ಪಟ್ಟ ಒಂದು ವಿಶೇಷ ಪಡೆ ಯಾಗಿದ್ದು, ಜಿಲ್ಲೆಯಲ್ಲಿ ಯಾವುದೇ ಮಹಿಳೆಯರು, ಶಾಲಾ ಕಾಲೇಜಿನ ಹೆಣ್ಣು ಮಕ್ಕಳು ತಮಗೆ ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ರೀತಿಯ ತೊಂದರೆ ಉಂಟಾದಲ್ಲಿ ಕಾವೇರಿ ಪಡೆಯ ಅಧಿಕಾರಿಗಳಿಗೆ ಮಾಹಿತಿ ನೀಡಬಹುದಾಗಿದೆ.