ವಸತಿಗಾಗಿ ಒತ್ತಾಯ : ಸರಣಿ ಪ್ರತಿಭಟನೆಗೆ ಅ.2 ರಂದು ಚಾಲನೆ

01/10/2020

ಮಡಿಕೇರಿ ಅ.1 : ಕೊಡಗು ಜಿಲ್ಲೆಯಲ್ಲಿರುವ ಎಲ್ಲಾ ನಿರಾಶ್ರಿತ ಬಡಕುಟುಂಬಗಳಿಗೆ ಸರ್ಕಾರ ವಸತಿ ಸೌಲಭ್ಯ ಕಲ್ಪಿಸಬೇಕೆಂದು ಒತ್ತಾಯಿಸಿ ಗಾಂಧಿ ಜಯಂತಿಯ ದಿನವಾದ ಅ.2 ರಿಂದ ಎಐಟಿಯುಸಿ ವತಿಯಿಂದ ಸರಣಿ ಪ್ರತಿಭಟನೆ ನಡೆಯಲಿದೆ ಎಂದು ಸಂಘಟನೆಯ ಜಿಲ್ಲಾಧ್ಯಕ್ಷ ಹೆಚ್.ಎಂ.ಸೋಮಪ್ಪ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಜಿಲ್ಲೆಯಲ್ಲಿರುವ ವಸತಿ ಹೀನರ ಮರು ಸಮೀಕ್ಷೆ ನಡೆಸಬೇಕು, ಖಾಲಿ ಜಮೀನನ್ನು ಗುರುತಿಸಿ ಅದನ್ನು ವಸತಿ ಯೋಜನೆಗೆಂದೇ ಕಾಯ್ದಿರಿಸಬೇಕು, ಪ್ರತಿ ವರ್ಷ ಪ್ರವಾಹಕ್ಕೆ ತುತ್ತಾಗುವ ಕುಟುಂಬಗಳನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಿ ಪುನರ್‍ವಸತಿ ಕಲ್ಪಿಸಬೇಕೆಂದು ಪ್ರತಿಭಟನೆ ಸಂದರ್ಭ ಒತ್ತಾಯಿಸಲಾಗುವುದು ಎಂದು ಹೇಳಿದ್ದಾರೆ.
ಸಿಪಿಐ ಪಕ್ಷದ ನೇತೃತ್ವದಲ್ಲಿ ರಾಜ್ಯಾದ್ಯಂತ ಸೂರಿಗಾಗಿ ಸಮರ ಜಾಥಾ ನಡೆಯುತ್ತಿದ್ದು, ಇದಕ್ಕೆ ಬೆಂಬಲ ಸೂಚಿಸಿ ಎ.ಐ.ಟಿ.ಯು.ಸಿ ಸಂಘಟನೆ ಕೊಡಗಿನಲ್ಲಿ ಪ್ರತಿಭಟನೆ ನಡೆಸುತ್ತಿದೆ. ಶುಕ್ರವಾರ ಸೋಮವಾರಪೇಟೆಯ ಗಾಂಧಿ ಪ್ರತಿಮೆ ಬಳಿಯಿಂದ ಜಾಥಾಕ್ಕೆ ಚಾಲನೆ ನೀಡಲಾಗುವುದು. ಸಿಪಿಐ ರಾಜ್ಯಾಧ್ಯಕ್ಷರಾದÀ ಸ್ವಾತಿ ಸುಂದರೇಶ್, ಎಐಟಿಯುಸಿ ಪ್ರಧಾನ ಕಾರ್ಯದರ್ಶಿ ಕೆ.ಗುಣಶೇಖರ್, ಜಿಲ್ಲಾ ಕಾರ್ಯದರ್ಶಿ ಸುನೀಲ್ ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಅ.2 ರಿಂದ 5ರ ವರೆಗೆ ವಿವಿಧ ಗ್ರಾ.ಪಂ ಗಳ ಎದುರು ಪ್ರತಿಭಟನೆ ನಡೆಸಲಾಗುವುದು. ಅ.2 ರಂದು ಬೇಳೂರು, ಐಗೂರು, ಕಿರಗಂದೂರು ಗ್ರಾ.ಪಂ, ಅ.3 ರಂದು ಮಾದಾಪುರ, ಕಂಬಿಬಾಣೆ, ಅ.5 ರಂದು ಸುಂಟಿಕೊಪ್ಪ, ಕೆದಕಲ್ ಗ್ರಾ.ಪಂ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿರುವ ಸೋಮಪ್ಪ, ಕಳೆದು 20 ವರ್ಷಗಳಿಂದ ಜಿಲ್ಲೆಯಲ್ಲಿ ಸೂರಿಗಾರಿ ಹೋರಾಟ ನಡೆಸುತ್ತಾ ಬಂದಿದ್ದರೂ ಸರ್ಕಾರ ಸೂಕ್ತ ರೀತಿಯಲ್ಲಿ ಸ್ಪಂದಿಸಿಲ್ಲವೆಂದು ಆರೋಪಿಸಿದ್ದಾರೆ.
::: ಬೇಡಿಕೆಗಳು :::
ವಿವಿಧ ವಸತಿ ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳ ಬಾಕಿ ಬಿಲ್ಲುಗಳನ್ನು ತಕ್ಷಣ ಬಿಡುಗಡೆ ಮಾಡಬೇಕು, ಎಲ್ಲಾ ಸ್ಥಳೀಯ ಸಂಸ್ಥೆಗಳ ವಸತಿ ಯೋಜನೆಗೆ ಹೊಸದಾಗಿ ಅರ್ಜಿ ಸಲ್ಲಿಸಲು ಸರ್ಕಾರ ಅವಕಾಶ ನೀಡಬೇಕು, ಪರಿಶಿಷ್ಟ ಜಾತಿ ಮತ್ತು ಪಂಗಡದ ಕುಟುಂಬಗಳ ವಾಸಕ್ಕೆ ಯೋಗ್ಯವಲ್ಲದ ಮನೆಗಳನ್ನು ದುರಸ್ತಿ ಪಡಿಸಲು ತಕ್ಷಣ ಅನುದಾನ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.