ಕೃಷಿ ಮಸೂದೆಗೆ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ವಿರೋಧ

01/10/2020

ಮಡಿಕೇರಿ ಅ.1 : ಲೋಕಸಭೆಯಲ್ಲಿ ಅಂಗೀಕರಿಸಲ್ಪಟ್ಟ ಮೂರು ಕೃಷಿ ಸಂಬಂಧಿತ ಸುಧಾರಣಾ ಮಸೂದೆಯನ್ನು ಹಿಂಪಡೆಯಬೇಕು ಎಂಬ ರೈತರ ಎಲ್ಲಾ ನಿಲುವನ್ನು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಬೆಂಬಲಿಸಲಿದೆ ಎಂದು ತಿಳಿಸಿರುವ ಪಕ್ಷದ ರಾಜ್ಯಾಧ್ಯಕ್ಷ ತಾಹಿರ್ ಹುಸೈನ್, ಈ ಮಸೂದೆಗಳು ಕೃಷಿ ಕ್ಷೇತ್ರದ ವಿನಾಶ ಮತ್ತು ರೈತರ ಪಾಲಿನ ಮರಣ ಶಾಸನವಾಗಿದೆ ಎಂದು ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೂತನ ಮಸೂದೆಗಳು ಬಂಡವಾಳಶಾಹಿಗಳಿಗೆ ಲಾಭವನ್ನುಂಟು ಮಾಡುವುದಕ್ಕೆ ಸೀಮಿತವಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತರ ಮುಖಕ್ಕೆ ಮಾಸ್ಕ್ ತೊಡಿಸಿ ಪ್ರಜಾತಾಂತ್ರಿಕ ವ್ಯವಸ್ಥೆಯ ಮೇಲೆ ಲಾಕ್ ಡೌನ್ ಹೇರಿ, ಪ್ರತಿಪಕ್ಷಗಳನ್ನು ಕ್ವಾರಂಟೈನ್‍ಗೆ ಒಳಪಡಿಸಿ ಜಾರಿಗೆ ತಂದಿರುವ ಈ ಕೃಷಿ ಮಸೂದೆಗಳಿಂದ ಇಡೀ ಕೃಷಿ ಕ್ಷೇತ್ರ ಹಾಗೂ ಸಮಸ್ತ ರೈತ ಸಮುದಾಯಕ್ಕೆ ಕೊರೊನಾ ಸೋಂಕು ಆವರಿಸಿದಂತಾಗಿದೆ ಎಂದು ಟೀಕಿಸಿದರು.
ರೈತರು ಹಾಗೂ ಗ್ರಾಹಕರ ಹಿತದೃಷ್ಟಿಯಿಂದ ಮಸೂದೆಯನ್ನು ಹಿಂತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ ಅವರು, ಎಪಿಎಂಸಿಗಳ ನಿಯಂತ್ರಣವಿಲ್ಲದೇ ಸ್ವತಂತ್ರವಾಗಿ ವ್ಯಾಪಾರ ನಡೆಸುವ ಅವಕಾಶಕ್ಕಾಗಿ ಪ್ರಯತ್ನಿಸುತ್ತಲೇ ಬಂದಿರುವ ಕಾರ್ಪೋರೇಟ್ ಸಂಸ್ಥೆಗಳಿಗೆ ಅವಕಾಶ ಕಲ್ಪಿಸುವುದೇ ನೂತನ ಮಸೂದೆಗಳ ಉದ್ದೇಶವೆಂದು ಆರೋಪಿಸಿದರು.
ನೂತನ ಕೃಷಿ ಮಸೂದೆಗಳಿಂದ ರೈತರಿಗೆ ಎಪಿಎಂಸಿಗಳ ಮೂಲಕ ಲಭ್ಯವಿದ್ದ ‘ಬೆಂಬಲ ಬೆಲೆ’ ಮುಂದುವರಿಯಲಿದೆಯೇ ಎನ್ನುವ ಬಗ್ಗೆ ಸರ್ಕಾರ ರೈತರಿಗೆ ಖಾತರಿಪಡಿಸಬೇಕೆಂದು ಒತ್ತಾಯಿಸಿದ ತಾಹಿರ್ ಹುಸೈನ್, ದೇಶದ ಆರ್ಥಿಕ ಪರಿಸ್ಥಿತಿ ಹದಗೆಡುತ್ತಿರುವುದು ವಿಧಿಯ ಆಟವೆಂದು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿಕೆ ನೀಡಿದ್ದಾರೆ. ಆದರೆ, ಇದು ವಿಧಿಯ ಆಟವಲ್ಲ, ಅರ್ಥ ವ್ಯವಸ್ಥೆಯನ್ನು ಅವರಿಂದ ಸಮರ್ಪಕವಾಗಿ ನಿಭಾಯಿಸಲಾಗದ ಸ್ಥಿತಿ ಎಂದು ವ್ಯಂಗ್ಯವಾಡಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೂಡಲೇ ಎಚ್ಚೆತ್ತು ಬಂಡವಾಳ ಶಾಹಿಗಳ ಪರವಾದ ನಿಲುವುಗಳನ್ನು ಕೈಬಿಟ್ಟು ರೈತರು, ಬೆಳೆಗಾರರು, ಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳದಿದ್ದಲ್ಲಿ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ವತಿಯಿಂದ ತೀವ್ರ ಹೋರಾಟ ನಡೆಸಲಾಗುವುದೆಂದು ಎಚ್ಚರಿಕೆ ನೀಡಿದರು.
::: ಮಾಧ್ಯಮ ಸ್ವಾತಂತ್ರ್ಯಕ್ಕೆ ಧಕ್ಕೆ :::
ಖಾಸಗಿ ದೂರದರ್ಶನ ವಾಹಿನಿ ಪವರ್ ಟಿ.ವಿ. ಮುಖ್ಯಮಂತ್ರಿಗಳ ಪುತ್ರನ ವಿರುದ್ಧ ಭ್ರಷ್ಟಾಚಾರ ಆರೋಪದ ಬಗ್ಗೆ ವರದಿ ಮಾಡಿದೆ ಎಂಬ ಕಾರಣಕ್ಕಾಗಿ ಆ ಸಂಸ್ಥೆಯನ್ನು ಮುಚ್ಚಿಸಿರುವುದು ಸರ್ವಾಧಿಕಾರ ಧೋರಣೆಯಾಗಿದೆ ಎಂದ ಅವರು, ಪತ್ರಿಕಾ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕುವ ಪ್ರಯತ್ನ ಖಂಡನೀಯ ಎಂದರು.
ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಎಲ್ಲಾ ಆರೋಪಿಗಳು ನಿರಪರಾಧಿಗಳು ಎಂದು ಸಿಬಿಐ ವಿಶೇಷ ಕೋರ್ಟ್ ತೀರ್ಪು ನೀಡಿರುವುದು ನಿರಾಸೆಯನ್ನು ಉಂಟು ಮಾಡಿದೆ. ಪೂರ್ವಯೋಜಿತ ಕೃತ್ಯವಲ್ಲವೆಂದು ತಿಳಿಸಿ ಆರೋಪಿಗಳನ್ನು ಖುಲಾಸೆಗೊಳಿಸಿರುವುದು ಸರಿಯಾದ ಕ್ರಮವಲ್ಲ. ಬಾಬರಿ ಮಸೀದಿ ಧಾರ್ಮಿಕ ಸ್ಥಳ ಅಲ್ಲವೆಂದಾದಲ್ಲಿ ಅದೊಂದು ಸ್ಮಾರಕವಾಗಿತ್ತು. ಅದನ್ನು ಧ್ವಂಸಗೊಳಿಸಿದವರಿಗೆ ಶಿಕ್ಷೆ ಆಗಬೇಕಾಗಿತ್ತು ಎಂದು ಅಭಿಪ್ರಾಯಪಟ್ಟರು.
ಪಕ್ಷದ ಜಿಲ್ಲಾಧ್ಯಕ್ಷ ಕೆ.ಟಿ.ಬಶೀರ್ ಮಾತನಾಡಿ, ಈಗಾಗಲೇ ಜಿಲ್ಲೆಯಲ್ಲಿ ವ್ಯತಿರಿಕ್ತ ಹವಾಮಾನದಿಂದ ಕಂಗೆಟ್ಟಿರುವ ಜಿಲ್ಲೆಯ ಕಾಫಿ ಬೆಳೆಗಾರರು ಹಾಗೂ ರೈತರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ನಿರ್ಧಾರಗಳಿಂದ ಮತ್ತಷ್ಟು ಸಂಕಷ್ಟಕ್ಕೊಳಗಾಗುವ ಸಾಧ್ಯತೆಗಳಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಎರಡು ಬಾರಿ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದ ಇನ್ನೂ ನೈಜ ಫಲಾನುಭವಿಗಳಿಗೆ ಸೂರು ದೊರಕಿಲ್ಲ. ಸರ್ಕಾರ ಈ ಕುರಿತು ಕಾಳಜಿ ವಹಿಸದೇ ಇರುವುದು ಖಂಡನೀಯ ಎಂದರು.
ಜಿಲ್ಲೆಯಲ್ಲಿ ವನ್ಯ ಜೀವಿಗಳ ಉಪಟಳ ಹೆಚ್ಚುತ್ತಿದ್ದು, ಆನೆ ಮಾನವ ಸಂಘರ್ಷ, ಹುಲಿ ದಾಳಿಗಳಿಂದ ಕೃಷಿಕ ಸಮೂಹ ತೊಂದರೆಗೆ ಸಿಲುಕಿದೆ. ಅರಣ್ಯ ಇಲಾಖೆ ಸಮರ್ಪಕ ಪರಿಹಾರ ನೀಡುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು.
ಜಿಲ್ಲೆಗೆ ತುರ್ತಾಗಿ ಸ್ಪೆಷಾಲಿಟಿ ಆಸ್ಪತ್ರೆಯ ಅಗತ್ಯವೆನ್ನುವ ಕೂಗು ಕೇಳಿ ಬರುತ್ತಿದ್ದರೂ ಆರೋಗ್ಯ ಸಚಿವರು, ಈ ವಿಚಾರ ನನ್ನ ಗಮನಕ್ಕೆ ಬಂದಿಲ್ಲವೆಂದು ಹೇಳಿರುವುದು ಸ್ಥಳೀಯ ಜನಪ್ರತಿನಿಧಿಗಳ ಬೇಜವಾಬ್ದಾರಿಗೆ ಸಾಕ್ಷಿಯಾಗಿದೆ. ಜಿಲ್ಲೆಯಲ್ಲಿ ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಜನಸಾಮಾನ್ಯರ ಗಮನವನ್ನು ಬೇರೆಡೆಗೆ ಸೆಳೆದು ಗೊಂದಲ ಮೂಡಿಸುವ ಪ್ರಯತ್ನ ನಡೆಯುತ್ತಿದೆ ಎಂದು ದೂರಿದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ವಿಭಾಗೀಯ ಕಾರ್ಯದರ್ಶಿ ಸುಲೈಮಾನ್ ಕಲ್ಲರ್ಪೆ ಹಾಗೂ ಮಾಧ್ಯಮ ಕಾರ್ಯದರ್ಶಿ ಅಜೀಜ್ ಜಾಗಿರ್ದಾರ್ ಉಪಸ್ಥಿತರಿದ್ದರು.