ಸರ್ಕಾರಿ ಕಚೇರಿ ಕಟ್ಟಡ, ಸಮುದಾಯ ಭವನ ನಿರ್ಮಾಣಕ್ಕೆ ಜಾಗ ಗುರುತಿಸಿ : ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಸೂಚನೆ

ಮಡಿಕೇರಿ ಅ.01 : ಜಿಲ್ಲೆಯಲ್ಲಿ ಅಂಗನವಾಡಿ ನಿರ್ಮಾಣಕ್ಕೆ ಅವಶ್ಯವಿರುವ ಭೂಮಿ ಸರ್ವೇ ಮಾಡಿ ಕಟ್ಟಡ ನಿರ್ಮಾಣಕ್ಕೆ ಕ್ರಮ ವಹಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಸೂಚಿಸಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ಮಟ್ಟದ ಕಂದಾಯಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಈಗಾಗಲೇ ಸ್ಥಳ ಗುರುತಿಸಿರುವ ಪ್ರದೇಶಗಳಲ್ಲಿ ಸರ್ವೇ ಕಾರ್ಯ ಪೂರ್ಣಗೊಳಿಸಬೇಕು. ಬಳಿಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರ ಕಚೇರಿ ಹೆಸರಿಗೆ ಆರ್.ಟಿ.ಸಿ ಮಾಡಬೇಕು ಎಂದು ಜಿಲ್ಲಾಧಿಕಾರಿ ಅವರು ನಿರ್ದೇಶನ ನೀಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರಾದ ಅರುಂಧತಿ ಅವರು ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ ಗುರುತಿಸಿರುವ ನಿವೇಶನಕ್ಕೆ ಸಂಬಂಧಿಸಿದಂತೆ ಕೆಲವು ಕಡೆ ಅರಣ್ಯ ಇಲಾಖೆಯ ಅಭಿಪ್ರಾಯದ ಅಗತ್ಯವಿದೆ ಎಂದರು.
ಜಿಲ್ಲಾಧಿಕಾರಿ ಅವರು ಮಾತನಾಡಿ ಅರಣ್ಯ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಕ್ರಮವಹಿಸಿ ಸೂಕ್ತ ರೀತಿಯಲ್ಲಿ ಮತ್ತು ಶೀಘ್ರವಾಗಿ ಅಭಿಪ್ರಾಯ ನೀಡುವಂತೆ ತಿಳಿಸಿದರು.
ನಗರದಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ಸಂಬಂಧಿಸಿದಂತೆ ಸಾಕಷ್ಟು ಬಾರಿ ಮನವಿ ಬಂದಿದೆ. ಈ ನಿಟ್ಟಿನಲ್ಲಿ ಸೂಕ್ತ ನಿವೇಶನ ಗುರುತಿಸುವಂತೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಸೂಚಿಸಿದರು.
ಇಲಾಖಾವಾರು ಕಟ್ಟಡ ನಿರ್ಮಾಣ, ಕಸ ವಿಲೇವಾರಿಗೆ ಜಾಗ ಗುರುತಿಸುವಿಕೆ ಪ್ರದೇಶಗಳು ಸೇರಿದಂತೆ ಮತ್ತಿತರ ಸ್ಥಳಗಳ ಸರ್ವೇ ಕಾರ್ಯವನ್ನು ಚುರುಕುಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಿಳಿಸಿದರು.
ಸರ್ವೇ ಕಾರ್ಯ ವಿಳಂಬವಾದರೆ ಮತ್ತಿತರ ಕಾರ್ಯಗಳು ವಿಳಂಬವಾಗುತ್ತವೆ. ಈ ನಿಟ್ಟಿನಲ್ಲಿ ದಿನಾಂಕಗಳನ್ನು ನಿಗದಿಪಡಿಸಿ. ಆಯಾಯ ದಿನಾಂಕಗಳಂದು ನಿಗದಿತ ಸ್ಥಳಗಳಿಗೆ ಭೇಟಿ ನೀಡಿ ಸರ್ವೇ ಕಾರ್ಯ ಮುಗಿಸಿ ಎಂದು ಭೂ ದಾಖಲೆಗಳ ಉಪ ನಿರ್ದೇಶಕರಿಗೆ ಸೂಚನೆ ನೀಡಿದರು.
ಕೃಷಿ ಇಲಾಖೆಯ ಉಪ ನಿರ್ದೇಶಕರಾದ ರಾಜು ಅವರು ಮಾತನಾಡಿ ಭಾಗಮಂಡಲದಲ್ಲಿ ರೈತ ಸಂಪರ್ಕ ಕೇಂದ್ರ ನಿರ್ಮಾಣ ಮಾಡಬೇಕಿದೆ. ಈಗಾಗಲೇ ತೋಟಗಾರಿಕಾ ಇಲಾಖೆಗೆ ಸೇರಿದ ಸ್ಥಳ ಗುರುತಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅವರ ಗಮನಕ್ಕೆ ತಂದರು.
ಜಿಲ್ಲಾಧಿಕಾರಿ ಅವರು ಮಾತನಾಡಿ ತೋಟಗಾರಿಕಾ ಇಲಾಖೆಗೆ ಈ ಸಂಬಂಧ ಪ್ರಸ್ತಾವನೆ ಸಲ್ಲಿಸಿ ಕ್ರಮ ವಹಿಸುವಂತೆ ಸೂಚನೆ ನೀಡಿದರು. ಈ ವೇಳೆ ಮಾತನಾಡಿದ ರಾಜು ಅವರು ಸಂಪಾಜೆಯಲ್ಲಿ ಕೃಷಿ ಇಲಾಖೆಗೆ ಸಂಬಂಧಿಸಿದಂತೆ ಕಟ್ಟಡ ನಿರ್ಮಾಣ ಮಾಡಬೇಕಿದ್ದು, ತಾಂತ್ರಿಕ ಸಮಸ್ಯೆಗಳಿಂದ ತೊಂದರೆಯುಂಟಾಗಿದೆ ಎಂದು ತಿಳಿಸಿದರು. ಜಿಲ್ಲಾಧಿಕಾರಿ ಅವರು ಮಾತನಾಡಿ ಈ ಸಂಬಂಧ ಉಪವಿಭಾಗಾಧಿಕಾರಿ ಅವರು ಸ್ಥಳಕ್ಕೆ ಭೇಟಿ ನೀಡಿ ವಾಸ್ತವ ಸ್ಥಿತಿ ಪರಿಶೀಲಿಸುವಂತೆ ತಿಳಿಸಿದರು. ಐಟಿಡಿಪಿ ಇಲಾಖೆಗೆ ಸಂಬಂಧಿಸಿದಂತೆ ಅರಣ್ಯ ಹಕ್ಕುಪತ್ರ ವಿತರಣೆ ಕುರಿತಂತೆ ಜಿಲ್ಲಾಧಿಕಾರಿ ಅವರು ಮಾಹಿತಿ ಪಡೆದರು. ಅಲ್ಲದೆ ಅರಣ್ಯ ಹಕ್ಕು ಪತ್ರ ವಿತರಣೆ ಸಂಬಂಧಿಸಿದಂತೆ ಬಾಕಿ ಇರುವ ಅರ್ಜಿಗಳ ವಿಲೇವಾರಿ ಕಾರ್ಯವನ್ನು ತ್ವರಿತಗತಿಯಲ್ಲಿ ಮುಗಿಸುವಂತೆ ಜಿಲ್ಲಾಧಿಕಾರಿ ಅವರು ಸೂಚನೆ ನೀಡಿದರು. ಜೊತೆಗೆ ಐಟಿಡಿಪಿ ಇಲಾಖೆ ವತಿಯಿಂದ ಆದಿವಾಸಿ ಭವನ ನಿರ್ಮಾಣ ಸಂಬಂಧ ಅನುದಾನ ಇಲಾಖೆಗೆ ಬಂದಿದ್ದು, ಭವನ ನಿರ್ಮಾಣ ಸಂಬಂಧ ಸರ್ವೇ ಕಾರ್ಯ ಕೈಗೊಂಡು ಕ್ರಮ ವಹಿಸಬೇಕಿದೆ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು. ಇದಕ್ಕೂ ಮೊದಲು ಗ್ರಾ.ಪಂ.ವ್ಯಾಪ್ತಿಯಲ್ಲಿ ಕಸ ವಿಲೇವಾರಿಗೆ ಅವಶ್ಯವಿರುವ ಜಮೀನುಗಳ ಸರ್ವೇ ವಿಳಂಬದ ಬಗ್ಗೆ ಮಾತನಾಡಿದ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ತಹಶೀಲ್ದಾರರು, ಭೂ ದಾಖಲೆಗಳ ಉಪ ನಿರ್ದೇಶಕರು ಮತ್ತು ಸಹಾಯಕ ನಿರ್ದೇಶಕರು ಶಿರಸ್ತೇದಾರ್ ಮತ್ತು ಸರ್ವೇ ಸೂಪರ್ ವೈಸರ್‍ಗಳು ಈ ಬಗ್ಗೆ ಸಭೆ ನಡೆಸಿ ಬಾಕಿ ಇರುವ ಕಾರ್ಯವನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸುವಂತೆ ತಿಳಿಸಿದರು. ಪ್ರವಾಸೋದ್ಯಮ ಇಲಾಖೆಯ ಬಗ್ಗೆ ಮಾಹಿತಿ ಪಡೆದು ಮಾತನಾಡಿದ ಜಿಲ್ಲಾಧಿಕಾರಿ ಅವರು ಅನುಮೋದನೆ ನೀಡಲು ಬಾಕಿ ಇರುವ ಹೋಂ ಸ್ಟೇಗಳಿಗೆ ಅನುಮೋದನೆ ನೀಡುವ ಸಂಬಂಧ ಕ್ರಮವಹಿಸಿ. ನಗರ ವ್ಯಾಪ್ತಿಯಲ್ಲಿ ಮುನಿಸಿಪಾಲ್ ಕಮಿಷನರ್ ಅವರಿಂದ ಈ ಕಾರ್ಯ ಪೂರ್ಣಗೊಳಿಸಿ ಎಂದರು. ಈ ಸಂದರ್ಭ ಮಾತನಾಡಿದ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ರಾಘವೇಂದ್ರ ಅವರು ಮಡಿಕೇರಿ ವ್ಯಾಪ್ತಿಯಲ್ಲಿ 95 ಹೋಂಸ್ಟೇಗಳ ದಾಖಲೆ ಪರಿಶೀಲಿಸಿ ಅನುಮೋದನೆ ನೀಡಲು ಬಾಕಿ ಇದೆ. ಹಲವು ಕಡೆ ಗ್ರಾ.ಪಂ ಮತ್ತು ಪೊಲೀಸ್ ಇಲಾಖೆಯಿಂದ ಎನ್‍ಒಸಿ ದೊರೆತಿಲ್ಲ ಎಂದು ಅವರು ತಿಳಿಸಿದರು. ಜಿಲ್ಲಾಧಿಕಾರಿ ಅವರು ಮಾತನಾಡಿ ಹೋಂಸ್ಟೇ ಅಸೋಸಿಯೇಷನ್ ಅವರ ಜೊತೆ ಮಾತನಾಡಿ ಗ್ರಾ.ಪಂ ಮತ್ತು ಪೊಲೀಸ್ ಠಾಣೆ ವಾರು ಮಾಹಿತಿ ನೀಡಿ ಜಿಲ್ಲಾ ಪೆÇಲೀಸ್ ವರಿμÁ್ಠಧಿಕಾರಿ ಅವರ ಗಮನಕ್ಕೆ ತರುವಂತೆ ತಿಳಿಸಿದರು. ಇದರೊಂದಿಗೆ 2019-20ನೇ ಸಾಲಿನಲ್ಲಿ ಪ್ರಕೃತಿ ವಿಕೋಪದಿಂದ ವಾಸದ ಮನೆ ಹಾನಿಯುಂಟಾದ ಬಗ್ಗೆ ಆನ್‍ಲೈನ್ ಮೂಲಕ ಮಾಹಿತಿ ನೀಡಬೇಕಿದೆ. ಈ ಕಾರ್ಯವನ್ನು ಮತ್ತಷ್ಟು ಚುರುಕುಗೊಳಿಸಬೇಕು. ಅಲ್ಲದೆ ಈ ಮಾಹಿತಿಯನ್ನು ಜಿಲ್ಲಾಧಿಕಾರಿಗಳಿಗೆ ನೀಡಬೇಕು. ಇಲ್ಲವಾದರೆ ಹಣ ಬಿಡುಗಡೆ ವಿಳಂಬವಾಗಲಿದೆ ಎಂದು ಸೂಚನೆ ನೀಡಿದರು. ಮಾಜಿ ಸೈನಿಕರಿಗೆ ನಿವೇಶನ ನೀಡುವ ಸಂಬಂಧ ಈಗಾಗಲೇ ಹಲವು ಬಾರಿ ಚರ್ಚೆಯಾಗಿದೆ. ಮಾಜಿ ಸೈನಿಕರಿಗೆ ಭೂಮಿ ನೀಡುವ ಸಂಬಂಧ ಸೈನಿಕ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರು ಹೋಬಳಿ ಮಟ್ಟದಲ್ಲಿ ಸಭೆ ನಡೆಸಲಿದ್ದು, ತಹಶೀಲ್ದಾರರು ಮತ್ತು ಹೋಬಳಿ ಮಟ್ಟದ ಅಧಿಕಾರಿಗಳು ಸಹಕಾರ ನೀಡುವಂತೆ ಸೂಚನೆ ನೀಡಿದರು. ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಶಬಾನ ಎಂ.ಶೇಖ್ ಅವರು ಮಾತನಾಡಿ ಜಿಲ್ಲೆಯಲ್ಲಿನ ಶೇ.47 ರಷ್ಟು ಬೆಳೆ ಸಮೀಕ್ಷೆ ಕಾರ್ಯ ಪೂರ್ಣವಾಗಿದೆ ಎಂದು ಸಭೆಯ ಗಮನಕ್ಕೆ ತಂದರು. ಜಿಲ್ಲಾಧಿಕಾರಿ ಅವರು ಮಾತನಾಡಿ ಬೆಳೆ ಸಮೀಕ್ಷೆ ಕಾರ್ಯವು ವಿಳಂಬವಾಗಬಾರದು. ಈ ಸಮೀಕ್ಷಾ ಕಾರ್ಯವನ್ನು 1 ವಾರದೊಳಗೆ ಪೂರ್ಣಗೊಳಿಸಿ ಪ್ರಗತಿ ವರದಿ ನೀಡುವಂತೆ ಸೂಚಿಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸ್ನೇಹ, ಉಪ ವಿಭಾಗಾಧಿಕಾರಿ ಈಶ್ವರ್ ಕುಮಾರ್ ಖಂಡು, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನೀಲೇಶ್, ಜಿಲ್ಲಾ ಮಟ್ಟದ ಅಧಿಕಾರಿಗಳು, ತಹಶೀಲ್ದಾರರು, ಶಿರಸ್ತೇದಾರರು ಇತರರು ಇದ್ದರು.




Sassy Social Share