ಪೋಷಕತ್ವ ಯೋಜನೆಗೆ ಅರ್ಜಿ ಆಹ್ವಾನ

ಮಡಿಕೇರಿ ಅ.01 : ಬಾಲನ್ಯಾಯ ಕಾಯ್ದೆ-2015 ಸೆಕ್ಷನ್-44ರ ಅನ್ವಯ ಮಕ್ಕಳನ್ನು ಪೋಷಕತ್ವ ಯೋಜನೆಯಡಿ ಪಾಲನೆ ಹಾಗೂ ಪೋಷಣೆಗಾಗಿ ಮಕ್ಕಳ ಕಲ್ಯಾಣ ಸಮಿತಿಯ ಆದೇಶದ ಮೇರೆಗೆ ಮಗುವಿಗೆ ಸಂಬಂಧವಿಲ್ಲದ ಕುಟುಂಬಕ್ಕೆ ತಾತ್ಕಾಲಿಕವಾಗಿ ಅಥವಾ ವಿಸ್ತರಿಸಲ್ಪಟ್ಟ ಒಂದು ವರ್ಷದ ಅವಧಿಗೆ ಮೀರದಂತೆ ಮಗುವನ್ನು ನೀಡಬಹುದಾಗಿದೆ. ಮಗು ಹಾಗೂ ಕುಟುಂಬದ ಹೊಂದಾಣಿಕೆಯ ಆಧಾರದ ಮೇರೆಗೆ ಮಕ್ಕಳ ಕಲ್ಯಾಣ ಸಮಿತಿಯು ಮಗುವನ್ನು 18 ವರ್ಷದ ವಯಸ್ಸಿನವರೆಗೂ ಪೋಷಕತ್ವವನ್ನು ಮುಂದುವರೆಸಲು ಅವಕಾಶ ಕಲ್ಪಿಸುತ್ತದೆ. ಪ್ರತಿಯೊಂದು ಮಗುವಿಗೂ ಕುಟುಂಬದ ವಾತಾವರಣದಲ್ಲಿ ಬೆಳೆಯುವ ಹಕ್ಕಿರುತ್ತದೆ. ಆದರೆ ಕಾರಣಾಂತರಗಳಿಂದ ಕೆಲವು ಮಕ್ಕಳನ್ನು ಸರ್ಕಾರದ ಮತ್ತು ಸ್ವಯಂ ಸೇವಾ ಸಂಸ್ಥೆಗಳು ನಡೆಸುತ್ತಿರುವ ಮಕ್ಕಳ ಪಾಲನಾ ಸಂಸ್ಥೆಗಳಲ್ಲಿ ದಾಖಲು ಮಾಡುವ ಅನಿವಾರ್ಯತೆ ಉಂಟಾಗುತ್ತದೆ.
ಇಂತಹ ಸಂದರ್ಭದಲ್ಲಿ ಅಂತಹ ಮಕ್ಕಳಿಗೆ ಪೋಷಕತ್ವ ಯೋಜನೆಯಡಿಯಲ್ಲಿ ಇತರೆ ಕುಟುಂಬದಲ್ಲಿ ಬೆಳೆಯಲು ಮಗುವಿನ ಹಿತದೃಷ್ಟಿಯಿಂದ ಮಕ್ಕಳ ಕಲ್ಯಾಣ ಸಮಿತಿಯು ತೀರ್ಮಾನವನ್ನು ತೆಗೆದುಕೊಳ್ಳುತ್ತದೆ.
ಕೊಡಗು ಜಿಲ್ಲೆಯಲ್ಲಿ ಬಾಲನ್ಯಾಯ ಕಾಯ್ದೆಯಡಿ ನೋಂದಣಿಯಾಗಿರುವ ಮಕ್ಕಳ ಪಾಲನಾ ಸಂಸ್ಥೆಗಳಲ್ಲಿ ಪಾಲನೆ ಮತ್ತು ರಕ್ಷಣೆಗಾಗಿ ದಾಖಲಾಗಿರುವ 6 ರಿಂದ 18 ವರ್ಷದ ಒಳಗಿನ ಮಕ್ಕಳನ್ನು ಪೋಷಕತ್ವ ಯೋಜನೆಯಡಿಯಲ್ಲಿ ನೋಡಿಕೊಳ್ಳಲು ಆಸಕ್ತಿ ಇರುವ ಪೋಷಕರು ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಡಿಕೇರಿ ಇವರಿಗೆ ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸುವವರು ಕನಿಷ್ಠ 35 ವರ್ಷ ಮೇಲ್ಪಟ್ಟ ದಂಪತಿಗಳಾಗಿರಬೇಕು. ವಿವಾಹವಾಗಿ ಕನಿಷ್ಠ 7 ವರ್ಷಗಳು ಪೂರ್ಣಗೊಂಡಿರಬೇಕು. ದಂಪತಿಗಳಿಬ್ಬರು ಸ್ವಇಚ್ಛೆಯಿಂದ ಒಂದೇ ಮಗುವನ್ನು ಪೋಷಕತ್ವಕ್ಕಾಗಿ ಪಡೆದುಕೊಳ್ಳಲು ಒಪ್ಪಿಗೆ ಇರಬೇಕು. ಮಗುವನ್ನು ಪೋಷಿಸಲು ಆರ್ಥಿಕವಾಗಿ ಸದೃಢರಾಗಿರಬೇಕು. ಹೆಚ್ಚಿನ ಮಾಹಿತಿಗೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಓಂಕಾರೇಶ್ವರ ದೇವಸ್ಥಾನದ ರಸ್ತೆ, ಕಲ್ಯಾಣ ಮಂಟಪದ ಹತ್ತಿರ ಮಡಿಕೇರಿ, ಕೊಡಗು ಜಿಲ್ಲೆ ದೂ.ಸಂ. 08272-228800 ನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಅವರು ತಿಳಿಸಿದ್ದಾರೆ.