ಮೃಗಾಲಯಕ್ಕೆ 20 ಲಕ್ಷ ನೀಡಿದ ಸುಧಾಮೂರ್ತಿ

02/10/2020

ಮೈಸೂರು ಅ.2 : ಸಾಂಸ್ಕೃತಿಕ ನಗರಿ ಮೈಸೂರು ಮೃಗಾಲಯದಲ್ಲಿ ಪ್ರಾಣಿಗಳ ಪಾಲನೆಗಾಗಿ ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾಮೂರ್ತಿ ಅವರು 20 ಲಕ್ಷ ರೂ. ದೇಣಿಗೆ ನೀಡಿದ್ದಾರೆ.
ಗುರುವಾರ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಅಜಿತ್ ಕುಲಕರಣಿ ಅವರು ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಈ ವಿಷಯ ತಿಳಿಸಿದ್ದು, ಸುಧಾ ಮೂರ್ತಿ ಅವರು ಕಳೆದ ಮೇ ತಿಂಗಳಲ್ಲಿ 20 ಲಕ್ಷ ರೂ. ನೀಡಿರುವುದಾಗಿ ಹೇಳಿದ್ದಾರೆ.

ಕೋವಿಡ್ -19 ರ ಕಷ್ಟದ ಸಮಯದಲ್ಲಿ ಸುಧಾ ಮೂರ್ತಿಯವರ ಈ ರೀತಿಯ ಉದಾರವಾದ ದೇಣಿಗೆ ಅತ್ಯಮೂಲ್ಯ ಮತ್ತು ಇತರರಿಗೆ ಸ್ಫೂರ್ತಿಯಾಗಿದೆ.
ಮೈಸೂರಿನ ಜಯಚಾಮರಾಜೇಂದ್ರ ಮೃಗಾಲಯದ ನಿರ್ವಹಣೆಯ ಮುಖ್ಯ ಆದಾಯ ಪ್ರವಾಸಿಗರ ಪ್ರವೇಶ ಶುಲ್ಕವಾಗಿತ್ತು. ಆದರೆ, ಕೋವಿಡ್ ಲಾಕ್‍ಡೌನ್‍ನಿಂದಾಗಿ ಪ್ರವಾಸಿಗರಿಲ್ಲದೆ ಮೃಗಾಲಯದ ನಿರ್ವಹಣೆ ಭವಿಷ್ಯದಲ್ಲಿ ಕಷ್ಟಕರವಾಗಲಿದೆ. ಈ ಹಿನ್ನೆಲೆಯಲ್ಲಿ ನೆರವಿನ ಹಸ್ತ ನೀಡುವಂತೆ ಇನ್ಫೋಸಿಸ್ ಫೌಂಡೇಷನ್ ಮುಖ್ಯಸ್ಥೆ ಡಾ.ಸುಧಾಮೂರ್ತಿ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಅವರು ಪತ್ರ ಬರೆದಿದ್ದರು. ಇದಕ್ಕೆ ಸ್ಪಂದಿಸಿದ ಡಾ.ಸುಧಾಮೂರ್ತಿ ಅವರು ಮೃಗಾಲಯಕ್ಕೆ 20 ಲಕ್ಷ ರೂ. ದೇಣಿಗೆ ನೀಡಿದ್ದಾರೆ.