ಶಿವಲಿಂಗ ವಿಸರ್ಜಿಸಿದರೆ ಅನಾಹುತ ಎದುರಾಗಬಹುದು : ತಂತ್ರಿ ಉದಯಕುಮಾರ್ ಆತಂಕ

02/10/2020

ಮಡಿಕೇರಿ ಅ.2 : ದಕ್ಷಿಣದ ಗಂಗೆಯಾದ ‘ಕಾವೇರಿ’ಯ ಉಗಮ ಸ್ಥಾನ ತಲಕಾವೇರಿಯಲ್ಲಿ ಅಗಸ್ತ್ಯ ಮುನಿಗಳಿಂದ ಪ್ರತಿಷ್ಠಾಪಿಸಲ್ಪಟ್ಟಿರುವ ಶಿವಲಿಂಗವನ್ನು ಯಾವುದೇ ಕಾರಣಕ್ಕೂ ವಿಸರ್ಜಿಸಕೂಡದು. ತಪೋನಿಷ್ಠ ಮಹಾಮುನಿಗಳಿಂದ ಪ್ರತಿಷ್ಠಾಪಿತ ಲಿಂಗಕ್ಕೆ ಹಾನಿಯಾಗಿದ್ದರೂ ಅದರ ಶಕ್ತಿ ಕುಂದಲಾರದು ಮತ್ತು ಅದು ಪೂಜೆಗೆ ಅರ್ಹವಾಗಿರುತ್ತದೆ ಎಂದು ಬಿಳಿಗೇರಿ ತಂತ್ರಿ ಉದಯಕುಮಾರ್ ಹೆಚ್.ಆರ್ ಅವರು ಅಭಿಪ್ರಾಯಪಟ್ಟಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧರ್ಮಸ್ಥಳ, ಕದ್ರಿ, ತೊಡಿಕಾನ ಮೊದಲಾದೆಡೆಗಳಲ್ಲಿ ಮಹಾಮುನಿಗಳಿಂದ ಪ್ರತಿಷ್ಠಾಪಿಸಲ್ಪಟ್ಟು, ನಂತರ ಹಾನಿಯಾಗಿರುವ ಶಿವಲಿಂಗ ಇಂದಿಗೂ ಪೂಜಿಸ್ಪಡುತ್ತಿದೆ. ತಲಕಾವೇರಿಯಲ್ಲಿ ಅಗಸ್ತ್ಯ ಮುನಿಗಳಿಂದ ಪ್ರತಿಷ್ಠಾಪಿಸಲ್ಪಟ್ಟ ಶಿವಲಿಂಗವನ್ನು ಮತ್ತೆ ಪ್ರತಿಷ್ಠಾಪಿಸಿ, ಈಗಿರುವ ಶಿವಲಿಂಗವನ್ನು ವಿಸರ್ಜಿಸಿದಲ್ಲಿ ಲೋಕ ಕಲ್ಯಾಣಕ್ಕೆ ಪೂರಕವಾಗುತ್ತದೆ. ಈ ಬಗ್ಗೆ ಚಿಂತನೆಗಳು ನಡೆಯುವುದು ಸೂಕ್ತವೆಂದು ತಿಳಿಸಿದರು.
ಅಗಸ್ತ್ಯರಿಂದ ಪ್ರತಿಷ್ಠಾಪಿತ ಶಿವಲಿಂಗವನ್ನು ತೆಗೆದು, ಅದರ ಬದಲಿಗೆ ತಂತ್ರಿಗಳು ಪ್ರಸ್ತುತ ಪ್ರತಿಷ್ಠಾಪಿಸಿರುವ ಶಿವಲಿಂಗವನ್ನು ಅಗಸ್ತ್ಯೇಶ್ವರರು ಪ್ರತಿಷ್ಠಾಪಿಸಿದ್ದೆಂದು ಪರಿಭಾವಿಸಲು ಸಾಧ್ಯವಿಲ್ಲ. ಮಹಾಮುನಿಗಳಿಂದ ಪ್ರತಿಷ್ಠಾಪಿಸಲ್ಪಡುವ ಶಿವಲಿಂಗಗಳು ಭಗ್ನವಾದರು, ಅದರ ಒಂದೊಂದು ಭಾಗವೂ ಪೂಜೆಗೆ ಅರ್ಹವಾದ ಸಾಲಿಗ್ರಾಮದಂತೆ ಎಂದು ಉದಯ ಕುಮಾರ್ ವಿಶ್ಲೇಷಿಸಿದರು.
ಗೋಕರ್ಣ ಕ್ಷೇತ್ರದಲ್ಲಿ ನೆಲದಡಿಯಲ್ಲಿ ಕೈಗೆಟಕುವಂತೆ ಶಿವಲಿಂಗವಿದೆ. ಅದೇ ರೀತಿ ಇಲ್ಲಿಯೂ ಅಗಸ್ತ್ಯೇಶ್ವರರ ಲಿಂಗವನ್ನು ಪುನರ್ ಪ್ರತಿಷ್ಠಾಪಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಇದರಲ್ಲಿ ಯಾವುದೇ ರಾಜಕೀಯ ಬೇಡವೆಂದು ಮನವಿ ಮಾಡಿದರು.
ಪ್ರಸ್ತುತ ಕಾವೇರಿ ತೀರ್ಥ ರೂಪಿಣಿಯಾಗಿ ಆವಿರ್ಭವಿಸಲು ಕಾರಣಕರ್ತರಾದ ಅಗಸ್ತ್ಯರೇ ಸ್ಥಾಪಿಸಿರುವ ಶಿವಲಿಂಗವನ್ನು ಕಡೆಗಣಿಸಲಾಗತ್ತಿದೆ ಎಂದು ಆರೋಪಿಸಿದ ಅವರು, ಮುನಿಗಳು ಪ್ರತಿಷ್ಠೆ ಮಾಡಿರುವ ಶಿವಲಿಂಗವನ್ನು ಪೂಜಿಸಬಾರದು, ಅದರಿಂದ ತೊಂದರೆ ಎದುರಾಗುತ್ತದೆ ಎಂದು ಭಾವಿಸುವುದು ಸರಿಯಲ್ಲವೆಂದರು.
1992ರಲ್ಲಿ ಅಂದಿನ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ತಂತ್ರಿಗÀಳಾದ ಪೈಯ್ಯನ್ನೂರಿನ ಪೊದುವಾಳ್‍ರ ನೇತೃತ್ವದಲ್ಲಿ ನಡೆದ ಅಷ್ಟಮಂಗಲ ಪ್ರಶ್ನೆಯಲ್ಲಿ ಅಗಸ್ತ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಲಿಂಗವನ್ನು ವಿಸರ್ಜಿಸಬಾರದು. ಅದನ್ನೇ ಪೂಜಿಸಬೇಕು ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ. ಅದನ್ನು ಅನುಸರಿಸುವುದಕ್ಕೆ ಬದಲಾಗಿ ಮತ್ತೆ ಅಷ್ಟಮಂಗಲ ಪ್ರಶ್ನೆ ನಡೆಸಿ, ಹೊಸ ಶಿವ ಲಿಂಗವನ್ನು ಪ್ರತಿಷ್ಠಾಪಿಸಲಾಗಿದೆ. ಈ ಹಂತದಲ್ಲಿ ಅಗಸ್ತ್ಯೇಶ್ವರ ಲಿಂಗದ ಮಹತ್ವವನ್ನು ವಿಮರ್ಶೆ ಮಾಡುವಲ್ಲಿ ಎಡವಿದ್ದು, ಇದನ್ನು ಸರಿಡಿಸಿಕೊಳ್ಳುವ ಅಗತ್ಯವಿದೆ ಎಂದರು.
ಅಗಸ್ತ್ಯ ನಾಡೀ ಶಾಸ್ತ್ರದಲ್ಲಿ ಹಳೇ ಲಿಂಗವನ್ನು ವಿಸರ್ಜಿಸಬಾರದು ಎಂದು ತಿಳಿಸಿರುವುದಲ್ಲದೆ, ಮೂಲ ಶಿವಲಿಂಗವನ್ನು ತೆಗೆದಲ್ಲಿ ಕಾವೇರಿ ಸೇರಿದಂತೆ ನಾಡಿನ ಕಬಿನಿ, ಹಾರಂಗಿ, ಹೇಮಾವತಿ, ಅರ್ಕಾವತಿ ನದಿಗಳಲ್ಲಿಯೂ ನೀರಿಲ್ಲದೆ ಬರದ ಪರಿಸ್ಥಿತಿಗಳು ಉಂಟಾಗುತ್ತದೆ ಎಂದು ತಿಳಿಸಲಾಗಿದೆ. ತಡವಾಗಿಯಾದರೂ ಎಚ್ಚೆತ್ತುಕೊಳ್ಳದಿದ್ದಲ್ಲಿ ಕೊಡಗಿನ ಪರಿಸರಕ್ಕೆ ಧಕ್ಕೆ ಉಂಟಾಗಬಹುದು ಮತ್ತು ಕರ್ನಾಟಕ, ತಮಿಳುನಾಡು ರಾಜ್ಯಗÀಳ ನಡುವೆ ನೀರಿಗಾಗಿ ಸಂಘರ್ಷಗಳು ತಲೆದೋರಬಹುದು ಎಂದು ತಿಳಿಸಿದರು.
ಅಗಸ್ತ್ಯರಿಂದ ಪ್ರತಿಷ್ಠಾಪಿತ ಲಿಂಗವನ್ನು ತೆಗೆದ ನಂತರ ಕೊಡಗಿನಲ್ಲಿ ಅನೇಕ ಅನಾಹುತಗಳು ಸಂಭವಿಸುತ್ತಿದೆ ಎಂದು ಅಭಿಪ್ರಾಯಪಟ್ಟ ಅವರು, ಲಿಂಗವನ್ನು ಪುನರ್ ಪ್ರತಿಷ್ಠಾಪಿಸಿ ಪೂಜಿಸುವಂತಾಗಬೇಕು. ಈ ಕುರಿತು ಪ್ರಧಾನಮಂತ್ರಿ, ಮುಖ್ಯಮಂತ್ರಿ, ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ, ಶಾಸಕರು, ಮುಜರಾಯಿ ಇಲಾಖೆ ಮನವಿ ಸಲ್ಲಿಸಲಾಗುವುದು ಎಂದರು.
ಉತ್ತರದ ಗಂಗೆಯ ಶುದ್ಧೀಕರಣಕ್ಕೆ ‘ಸ್ವಚ್ಛ ಗಂಗೆ’ ಅಭಿಯಾನಕ್ಕೆ ಚಾಲನೆ ನೀಡಿರುವ ಮೋದಿ ಅವರು, ದಕ್ಷಿಣದ ಗಂಗೆ ಕಾವೇರಿಯ ಉಗಮ ಸ್ಥಾನದ ಸಮಸ್ಯೆಗಳನ್ನು ಇತ್ಯರ್ಥಪಡಿಸಲು ಮುಂದಾಗಬೇಕೆಂದು ಉದಯಕುಮಾರ್ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಶಂಕರ್ ಪ್ರಸಾದ್ ಉಪಸ್ಥಿತರಿದ್ದರು.