ಕೊಡವ ಲ್ಯಾಂಡ್ ಹಕ್ಕೊತ್ತಾಯ : ಅ.4 ರಂದು ಸಿಎನ್‍ಸಿಯಿಂದ ವಿಚಾರಗೋಷ್ಠಿ

02/10/2020

ಮಡಿಕೇರಿ ಅ.2 : ಕೊಡವರ ಆಂತರಿಕ ರಾಜಕೀಯ ಸ್ವಯಂ ನಿರ್ಣಯದ ಹಕ್ಕು ಮತ್ತು ಕೊಡವ ಲ್ಯಾಂಡ್ ಹಕ್ಕೊತ್ತಾಯದ ಬೇಡಿಕೆಗಳಿಗೆ ಸಂಬಂಧಿಸಿದಂತೆ ಅ.4 ರಂದು ನಗರದ ಹೊರವಲಯದ ಕ್ಯಾಪಿಟಲ್ ವಿಲೇಜ್‍ನಲ್ಲಿ ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ವಿಚಾರಗೋಷ್ಠಿ ನಡೆಯಲಿದೆ ಎಂದು ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೊಡವ ಬುಡಕಟ್ಟು ಕುಲವನ್ನು ಸಂವಿಧಾನದ ‘ಎಸ್.ಟಿ.’ ಪಟ್ಟಿಯಲ್ಲಿ ಸೇರ್ಪಡೆಗೊಳಿಸಬೇಕು ಎಂದು ಒತ್ತಾಯಿಸಿದರು. ಕೊಡವರ ಪ್ರಧಾನ ಹಕ್ಕೊತ್ತಾಯಕ್ಕೆ ಸಂಬಂಧಿಸಿದಂತೆ ಕುಲಶಾಸ್ತ್ರ ಅಧ್ಯಯನ ಅಂತಿಮ ಘಟ್ಟದಲ್ಲಿದೆ. ಈ ಸಂಬಂಧ ಕೊಡವರಿಗೆ ಬುಡಕಟ್ಟು ಜನರ ಸ್ಥಾನಮಾನಗಳನ್ನು ಒದಗಿಸಿಕೊಡಲು ಸಾಂವಿಧಾನಿಕ ಕಸರತ್ತು ಆರಂಭಿಸಬೇಕು ಎಂಬ ಹಕ್ಕೊತ್ತಾಯಗಳ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸ್ಪಷ್ಟ ಸಂದೇಶವನ್ನು ರವಾನಿಸುವ ಸಲುವಾಗಿ ವಿಚಾರಗೋಷ್ಠಿ ನಡೆಯಲಿದೆ ಎಂದರು.
ಭಾನುವಾರ ಬೆಳಗ್ಗೆ 10 ಗಂಟೆಗೆ ಕ್ಯಾಪಿಟಲ್ ವಿಲೇಜ್‍ನಲ್ಲಿ ನಡೆಯಲಿರುವ ವಿಚಾರಗೋಷ್ಠಿಗೆ ಸಂಪನ್ಮೂಲ ವ್ಯಕ್ತಿಗಳಾಗಿ ರಾಜ್ಯಸಭೆಯ ಮಾಜಿ ಸದಸ್ಯ ಬಿ.ಕೆ.ಹರಿಪ್ರಸಾದ್, ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕರು ಹಾಗೂ ‘ಬಿರ್ಸಾ ಮುಂಡ ಟ್ರೈಬಲ್ ರಿಸರ್ಚ್ ಇನ್‍ಸ್ಟ್ಟಿಟ್ಯೂಟ್’ನ ವ್ಯವಸ್ಥಾಪಕ ನಿರ್ದೇಶಕರೂ ಆಗಿರುವ ಬುಡಕಟ್ಟು ಜಾನಪದ ತಜ್ಞ ಡಾ.ಹನಿಯೂರ್ ಚಂದ್ರೇಗೌಡ ಅವರು ಭಾಗವಹಿಸಿ ಉಪನ್ಯಾಸ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು.
ಕೊಡವರು ಬುಡಕಟ್ಟು ಎಸ್.ಟಿ. ಪಟ್ಟಿಯಲ್ಲಿ ಸೇರ್ಪಡೆ ಗೊಳ್ಳುವುದು ರಾಜ್ಯಾಂಗದತ್ತ ಹಕ್ಕಾಗಿದೆ. ಅದನ್ನು ಯಾರಿಂದಲೂ ನಿರಾಕರಿಸಲು, ವಿರೋಧಿಸಲು ಸಾಧ್ಯವಿಲ್ಲ. ಇದು ನಾವು ಕೇಳಿ ಪಡೆಯುವ ಭಿಕ್ಷೆಯೇನೂ ಅಲ್ಲ. ಸಂವಿಧಾನ ಬದ್ಧ ಹಕ್ಕೆಂದು ದೃಢವಾಗಿ ನುಡಿದ ನಾಚಪ್ಪ, ಈ ಬಗ್ಗೆ ಅರಿವು ಮೂಡಿಸುವ ವಿಚಾರಗೋಷ್ಠಿಗೆ ನಾಡಿನ ಎಲ್ಲಾ ಕೊಡವ ಬಂಧುಗಳು, ಕೊಡವರ ಈ ರಾಜ್ಯಾಂಗದತ್ತ ಹಕ್ಕನ್ನು ಗೌರವಿಸುವ ಎಲ್ಲರೂ ಆಗಮಿಸುವಂತೆ ಮನವಿ ಮಾಡಿದರು.
ಕೊಡವರಿಗೆ ಸಂವಿಧಾನ ಬದ್ಧವಾಗಿ ಎಸ್‍ಟಿ ಟ್ಯಾಗ್ ನೀಡಬೇಕೆನ್ನುವ ತಮ್ಮ ಬೇಡಿಕೆಯನ್ನು ಉದ್ದೇಶಪೂರ್ವಕವಾಗಿ ವಿರೋಧಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಎನ್.ಯು.ನಾಚಪ್ಪ, ಸಿಎನ್‍ಸಿ ಸಂಘÀಟನೆ ತನ್ನ ನ್ಯಾಯಯುತ ಬೇಡಿಕೆಗಳನ್ನು ಮುಂದಿರಿಸಿಕೊಂಡು ಶಾಂತಿಯುತವಾದ ಹೋರಾಟವನ್ನು ನಡೆಸಿಕೊಂಡು ಬರುತ್ತಿದೆ ಎಂದು ತಿಳಿಸಿದರು.
ಮೈಸೂರಿನ ಬುಡಕಟ್ಟು ಸಮುದಾಯಗಳ ಸಂಶೋಧನಾ ಕೇಂದ್ರದ ವ್ಯಕ್ತಿಯೊಬ್ಬರು ಡಿಸಿ, ಎಸ್‍ಪಿ ಅವರ ಅನುಮತಿ ಪಡೆಯದೆ ಅ.6ರಂದು ಸಭೆ ನಡೆಸಲು ಮುಂದಾಗಿದ್ದು, ಈ ಬಗ್ಗೆ ಸಿಎನ್‍ಸಿ ಸಲ್ಲಿಸಿದ ವಿರೋಧಗಳ ಹಿನ್ನೆಲೆ ಸಭೆ ರದ್ದಾಗಿದೆ ಎಂದು ಗಮನ ಸೆಳೆದರು.
ಸುದ್ದಿಗೋಷ್ಠಿಯಲ್ಲಿ ಸಿಎನ್‍ಸಿ ಪ್ರಮುಖರಾದ ಪುಲ್ಲೇರ ಕಾಳಪ್ಪ ಹಾಗೂ ಚೆಂಬಂಡ ಜನತ್ ಕುಮಾರ್ ಉಪಸ್ಥಿತರಿದ್ದರು.