ಜೆಡಿಎಸ್ ನಿಂದ ಗಾಂಧಿ ಜಯಂತಿ : ಗಾಂಧಿ ಆಶಯಗಳಿಗೆ ವಿರುದ್ಧವಾದ ಆಡಳಿತ ನಡೆಯುತ್ತಿದೆ : ಕೆ.ಎಂ.ಗಣೇಶ್ ಆರೋಪ

02/10/2020

ಮಡಿಕೇರಿ ಅ.2 : ಬಿಜೆಪಿ ನೇತೃತ್ವದ ಸರ್ಕಾರಗಳಿರುವ ರಾಜ್ಯಗಳಲ್ಲಿ ಮತ್ತು ದೇಶದಲ್ಲಿ ಶಾಂತಿಯ ಪ್ರತಿಪಾದಕ ಮಹಾತ್ಮಗಾಂಧಿ ಅವರ ಆಶಯಗಳಿಗೆ ವಿರುದ್ಧವಾದ ಆಡಳಿತ ನಡೆಯುತ್ತಿದೆ ಎಂದು ಜಾತ್ಯತೀತ ಜನತಾದಳದ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್ ಆರೋಪಿಸಿದ್ದಾರೆ.
ಜಿಲ್ಲಾ ಜೆಡಿಎಸ್ ವತಿಯಿಂದ ಮಡಿಕೇರಿಯಲ್ಲಿ ನಡೆದ ಗಾಂಧಿ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಉತ್ತರ ಪ್ರದೇಶದಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ತೀವ್ರವಾಗಿ ಖಂಡಿಸಿದರು.
ರಾಮ ರಾಜ್ಯದ ಕನಸು ಕಂಡಿದ್ದ ಮಹಾತ್ಮಗಾಂಧಿ ಹಾಗೂ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ನಿರೀಕ್ಷೆಗಳು ಇಂದು ಹುಸಿಯಾಗುತ್ತಿದ್ದು, ಇದಕ್ಕೆ ದಲಿತ ಯುವತಿಯ ಮೇಲಿನ ದೌರ್ಜನ್ಯವೇ ಸಾಕ್ಷಿಯಾಗಿದೆ ಎಂದು ಆರೋಪಿಸಿದರು.
ಯುವತಿಗಾದ ಅನ್ಯಾಯದ ವಿರುದ್ಧ ಹೋರಾಟ ನಡೆಸುತ್ತಿದ್ದ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕರುಗಳಾದ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿ ಅವರನ್ನು ಪೊಲೀಸರು ಅಮಾನವೀಯ ರೀತಿಯಲ್ಲಿ ಬಂಧಿಸಿರುವುದು ಖಂಡನೀಯ. ಯಾವುದೇ ಪಕ್ಷದ ನಾಯಕರನ್ನು ಕೂಡ ಈ ರೀತಿ ನಡೆಸಿಕೊಳ್ಳಬಾರದು ಎಂದು ಒತ್ತಾಯಿಸಿದ ಗಣೇಶ್, ರೈತರ ಪರ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಿದಾಗಲು ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಾನೂನು ಚೌಕಟ್ಟಿನಡಿ ದಕ್ಷತೆಯಿಂದ ಕಾರ್ಯ ನಿರ್ವಹಿಸಬೇಕಾದ ಪೊಲೀಸ್ ಇಲಾಖೆ, ಬಿಜೆಪಿಯ ಅಣತಿಯಂತೆ ನಡೆದುಕೊಳ್ಳುತ್ತಿದೆ ಎಂದು ಆರೋಪಿಸಿದರು.
ಜಾತ್ಯಾತೀತ ರಾಷ್ಟ್ರದಲ್ಲಿ ಎಲ್ಲರೂ ಒಗ್ಗಟ್ಟಾಗಿರಬೇಕೆನ್ನುವ ಮನೋಭವನೆಗೆ ವಿರುದ್ಧವಾಗಿ ಬಿಜೆಪಿ ನೇತೃತ್ವದ ಸರ್ಕಾರ ನಡೆದುಕೊಳ್ಳುತ್ತಿದೆ. ಮೋಸ, ಹಿಂಸೆ, ದಬ್ಬಾಳಿಕೆ, ಸರ್ವಾಧಿಕಾರಿ ಧೋರಣೆ, ಪತ್ರಿಕಾ ಸ್ವಾತಂತ್ರ್ಯ ಕಸಿದುಕೊಳ್ಳುವ ವರ್ತನೆ ರಾರಾಜಿಸುತ್ತಿದೆ. ಭ್ರಷ್ಟಾಚಾರದ ಪ್ರಕರಣವನ್ನು ಬಯಲಿಗೆಳೆದ ದೃಶ್ಯ ವಾಹಿನಿಯೊಂದಕ್ಕೆ ಬೀಗ ಜಡಿಯುವ ಮೂಲಕ ರಾಜ್ಯ ಸರ್ಕಾರ ದರ್ಪವನ್ನು ಪ್ರದರ್ಶಿಸಿದೆ ಎಂದು ಗಣೇಶ್ ಆರೋಪಿಸಿದರು.
ದೇಶ ಮತ್ತು ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಜನರಿಗೆ ನೆಮ್ಮದಿ ಇಲ್ಲದಾಗಿದೆ. ನಿತ್ಯ ಸಂಕಷ್ಟದ ಜೀವನವನ್ನು ನಡೆಸಬೇಕಾದ ದುಸ್ಥಿತಿ ಬಂದೊದಗಿದೆ ಎಂದು ಟೀಕಿಸಿದರು.
ಜೆಡಿಎಸ್ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಜಾಶೀರ್ ಮಾತನಾಡಿ, ಯುಪಿಯಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ಖಂಡನೀಯವಾಗಿದ್ದು, ಯುವ ಸಮೂಹ ಬೀದಿಗಳಿದು ಹೋರಾಟ ನಡೆಸುವ ಮೂಲಕ ಸಂತ್ರಸ್ತೆಗೆ ನ್ಯಾಯ ದೊರಕಿಸಿಕೊಡಬೇಕಾಗಿದೆ ಎಂದರು.
ಎಲ್ಲರೂ ಒಂದು ಎಂದು ಹೇಳಿಕೊಳ್ಳುವ ಬಿಜೆಪಿ ಪರಿಶಿಷ್ಟರನ್ನು ಕೇವಲ ಮತಗಳಿಕೆಗಾಗಿ ಮಾತ್ರ ಪರಿಗಣಿಸಿದೆ. ಈ ಸಮೂಹಕ್ಕೆ ಅನ್ಯಾಯವಾದಾಗ ಧ್ವನಿ ಎತ್ತಿ ನ್ಯಾಯ ದೊರಕಿಸಿಕೊಡುತ್ತಿಲ್ಲವೆಂದು ಆರೋಪಿಸಿದರು.
ಜೆಡಿಎಸ್ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಇಸಾಕ್ ಖಾನ್, ರಾಜ್ಯ ಉಪಾಧ್ಯಕ್ಷ ಯೂಸುಫ್, ಜಿಲ್ಲಾ ಮಹಿಳಾ ಪ್ರಧಾನ ಕಾರ್ಯದರ್ಶಿ ಲೀಲಾ ಶೇಷಮ್ಮ, ಜಿಲ್ಲಾ ಕಾರ್ಯದರ್ಶಿ ಎನ್.ಸಿ.ಸುನಿಲ್, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಸುಕೇಶ್ ಚಂಗಪ್ಪ, ಸಂಘಟನಾ ಕಾರ್ಯದರ್ಶಿ ಇಬ್ರಾಹಿಂ, ಬೊಳ್ಳಿಯಂಡ ಗಣೇಶ್, ನಗರ ಎಸ್‍ಸಿ ಘಟಕದ ಅಧ್ಯಕ್ಷ ರವಿಕುಮಾರ್, ಮಹಿಳಾ ಘಟಕದ ನಗರಾಧ್ಯಕ್ಷೆ ಸುನಂದ, ಜಿಲ್ಲಾ ಯುವ ವಕ್ತಾರ ರವಿಕಿರಣ್, ನಗರ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಖಲೀಲ್, ಪ್ರಮುಖರಾದ ಹಫೀಜ್, ರೆಜಿ, ಲಲಿತ, ಕುಮಾರೇಶ್, ಲತಾ, ಅನಿತಾ, ರಹೀಮ್, ಸೌಜನ್ಯ, ಫಾತಿಮಾ ಮತ್ತಿತರರು ಹಾಜರಿದ್ದರು.
ಇದೇ ಸಂದರ್ಭ ಕಾಂಗ್ರೆಸ್ ಪಕ್ಷವನ್ನು ತೊರೆದ ಸಾಗರ್ ಹಫೀಜ್, ಕುಮಾರೇಶ್ ಹಾಗೂ ಶಕೀಲ್ ಅವರು ಜೆಡಿಎಸ್‍ಗೆ ಸೇರ್ಪಡೆಗೊಂಡರು.