ಕಾಂಗ್ರೆಸ್ ನಿಂದ ಗಾಂಧಿ ಜಯಂತಿ ಆಚರಣೆ : ಅಹಿಂಸಾ ಅಸ್ತ್ರದ ಮೂಲಕ ಸ್ವಾತಂತ್ರ್ಯ ದೊರೆತ್ತಿದೆ : ಕೆ.ಕೆ.ಮಂಜುನಾಥ್ ಕುಮಾರ್

ಮಡಿಕೇರಿ ಅ.2 : ಮಹಾತ್ಮ ಗಾಂಧಿ ಅವರು ಶಾಂತಿ ಮತ್ತು ಅಹಿಂಸಾ ಮಾರ್ಗವೆಂಬ ಅಸ್ತ್ರವನ್ನು ಬಳಸಿ ಈ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟಿದ್ದಾರೆ. ಆದರೆ ಇದಕ್ಕೆ ತದ್ವಿರುದ್ಧವಾಗಿ ಇಂದು ದೇಶವನ್ನು ಆಳುತ್ತಿರುವವರು ಸ್ವಾತಂತ್ರ್ಯ ಹರಣದಲ್ಲಿ ತೊಡಗಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ.ಕೆ.ಮಂಜುನಾಥ್ ಕುಮಾರ್ ಆರೋಪಿಸಿದ್ದಾರೆ.
ಜಿಲ್ಲಾ ಕಾಂಗ್ರೆಸ್ ವತಿಯಿಂದ ಮಡಿಕೇರಿಯಲ್ಲಿ ನಡೆದ ಗಾಂಧಿ ಹಾಗೂ ಲಾಲ್ ಬಹದೂರ್ ಶಾಸ್ತ್ರಿ ಅವರ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಹಾತ್ಮ ಗಾಂಧಿಯ ಸತತ 28 ವರ್ಷಗಳ ನಿರಂತರ ಶಾಂತಿಯುತ ಹೋರಾಟದ ಮೂಲಕ ದೇಶ ಸ್ವಾತಂತ್ರ್ಯವನ್ನು ಪಡೆದುಕೊಂಡಿತು. ಗಾಂಧಿ ಹಾಗೂ ಪ್ರಧಾನಿ ನರೇಂದ್ರಮೋದಿ ಅವರು ಗುಜರಾತ್ ರಾಜ್ಯದವರಾದರೂ ಮೋದಿ ಅವರ ಆಡಳಿತದಲ್ಲಿ ದೇಶ ಅಸತ್ಯ ಮತ್ತು ಹಿಂಸೆಯಿಂದ ಸ್ವಾತಂತ್ರ್ಯವನ್ನು ಕಳೆದುಕೊಳ್ಳುತ್ತಿದೆ. ಹಿರಿಯರು ಕಟ್ಟಿ ಬೆಳೆಸಿದ ಮತ್ತು ಅಭಿವೃದ್ಧಿ ಪಡಿಸಿದ ಶಿಕ್ಷಣ, ಸಾರಿಗೆ, ದೂರಸಂಪರ್ಕ ಸೇರಿದಂತೆ ಬಹುತೇಕ ಕ್ಷೇತ್ರಗಳನ್ನು ಖಾಸಗೀಕರಣ ಮಾಡುವ ಮೂಲಕ ದೇಶವನ್ನು ಮಾರಾಟ ಮಾಡಲು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಹೊರಟಿದೆ ಎಂದು ಮಂಜುನಾಥ್ ಕುಮಾರ್ ಆರೋಪಿಸಿದರು.
ದೇಶದ ಎರಡನೇ ಪ್ರಧಾನಿ ಲಾಲ್ ಬಹದೂರ್ ಶಾಸ್ತ್ರಿಗಳು ರೈತರ ಆರ್ಥಿಕ ಸ್ಥಿತಿಯನ್ನು ಸುಧಾರಿಸುವಂತೆ ಮಾಡಿದರು. ಅಲ್ಲದೆ ಹೈನುಗಾರಿಕೆ ಮತ್ತು ಹಾಲಿನ ಉತ್ಪನ್ನಕ್ಕೆ ಉತ್ತೇಜನವನ್ನು ನೀಡಿ ದೇಶದಲ್ಲಿ ಅಭಿವೃದ್ಧಿಯ ಕ್ರಾಂತಿಯನ್ನು ಮಾಡಿದರು. ಆದರೆ ಇಂದು ದೇಶದಲ್ಲಿ ಜನಸಾಮಾನ್ಯರು, ರೈತರು ಹಾಗೂ ಕಾರ್ಮಿಕರು ನೆಮ್ಮದಿ ಇಲ್ಲದ ಬದುಕು ಸಾಗಿಸುತ್ತಿದ್ದಾರೆ ಎಂದು ಟೀಕಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ಕಾಂಗ್ರೆಸ್ಸಿಗರಾದ ಬಿ.ಕೆ.ಕೃಷ್ಣ, ಎಂ.ಪಿ.ಕೃಷ್ಣರಾಜು ಹಾಗೂ ಹನೀಫ್ ಅವರುಗಳನ್ನು ಸನ್ಮಾನಿಸಲಾಯಿತು.
ಕಾಂಗ್ರೆಸ್ ಕಿಸಾನ್ ಘಟಕದ ಜಿಲ್ಲಾಧ್ಯಕ್ಷ ನೆರವಂಡ ಉಮೇಶ್, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಸಂಯೋಜಕ ತೆನ್ನಿರಾ ಮೈನ, ಮಡಿಕೇರಿ ನಗರ ಮಹಿಳಾ ಅಧ್ಯಕ್ಷೆ ಪಾರ್ವತಿ ಫ್ಯಾನ್ಸಿ ಪಾರ್ವತಿ, ಪ್ರಮುಖರಾದ ಉದಯ, ಗಿಲ್ಬರ್ಟ್, ಅಲ್ಪಸಂಖ್ಯಾತರ ಘಟಕ ಸೇರಿದಂತೆ ವಿವಿಧ ಘಟಕಗಳ ಪದಾಧಿಕಾರಿಗಳು, ಕಾರ್ಯಕರ್ತರು ಗಾಂಧಿ ಹಾಗೂ ಲಾಲ್ ಬಹದೂರ್ ಶಾಸ್ತ್ರಿಗಳಿಗೆ ಗೌರವ ಅರ್ಪಿಸಿದರು.