ಭಾಗಮಂಡಲ ನಾಡು ಗೌಡ ಯುವ ಒಕ್ಕೂಟ ಉದ್ಘಾಟನೆ

02/10/2020

ಭಾಗಮಂಡಲ ಅ.2 : ಭಾಗಮಂಡಲ ನಾಡು ಗೌಡ ಯುವ ಒಕ್ಕೂಟದ ಉದ್ಘಾಟನಾ ಸಮಾರಂಭ ಭಾಗಮಂಡಲ ಗೌಡ ಸಮಾಜದಲ್ಲಿ ನಡೆಯಿತು.
ಒಕ್ಕೂಟವನ್ನು ಉದ್ಘಾಟಿಸಿ ಮಾತನಾಡಿದ ಕರ್ನಾಟಕ ಅರೆಭಾಷೆ ಸಂಸ್ಕ್ರತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಲಕ್ಷ್ಮಿನಾರಾಯಣ ಕಜೆಗದ್ದೆ, ಸಂಘ, ಸಂಸ್ಥೆಗಳಿಗೆ ನಿಗದಿತ ಗುರಿ ಇರಬೇಕು. ಹಾಗಾದಾಗ ಮಾತ್ರ ಸಂಸ್ಥೆ ಉತ್ತಮ ರೀತಿಯಲ್ಲಿ ಮುನ್ನಡೆಯಲು ಸಾಧ್ಯವಾಗುತ್ತದೆ ಎಂದರು.
ಯುವ ಸಂಘಟನೆ ಹುಟ್ಟಿಕೊಂಡ ನಂತರ ಆ ಭಾಗದ ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸಿ ಹುರಿದುಂಬಿಸಿ ಬೆಂಬಲಿಸಿ ಸನ್ಮಾನಿಸುವ ಕೆಲಸವಾಗಬೇಕು. ಈ ಭಾಗದಲ್ಲಿ ಸಾಕಷ್ಟು ಎಲೆ ಮರೆಯ ಕಾಯಿಯಂತಿರುವ ಯುವ ಪ್ರತಿಭೆಗಳನ್ನು ಮುನ್ನೆಲೆಗೆ ತರುವ ಕೆಲಸವನ್ನು ಭಾಗಮಂಡಲ ನಾಡು ಯುವ ಒಕ್ಕೂಟವು ಮಾಡಬೇಕು ಎಂದರು.
ಮುಂದಿನ ದಿನಗಳಲ್ಲಿ ಈ ಭಾಗದಲ್ಲಿ ಒಂದು ಸಾಂಸ್ಕøತಿಕ ಕಾರ್ಯಕ್ರಮ ಹಮ್ಮಿಕೊಳ್ಳಲು ಸಹಕಾರ ನೀಡಲಾಗುವುದು ಎಂದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕೊಡಗು ಜಿಲ್ಲಾ ಪಂಚಾಯಿತಿ ಸದಸ್ಯೆ ಹಾಗೂ ಜಿಲ್ಲಾ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ಹೊಸ ಮನೆ ಕವಿತಾಪ್ರಭಾಕರ್ ಯುವ ಜನತೆ ದೇಶದ ಬೆನ್ನೆಲುಬು ಎಂಬ ಮಾತಿನಂತೆ ಯುವಕರಲ್ಲಿ ಹಿರಿಯರು ಹಾಕಿಕೊಟ್ಟ ಮಾರ್ಗದರ್ಶನವನ್ನು ನೆನೆದು ನಮ್ಮ ಆಚಾರ ವಿಚಾರಗಳು ಕಣ್ಮರೆಯಾಗುತ್ತಿರುವ ಈ ಸಂದರ್ಭದಲ್ಲಿ ಒಂದು ಯುವ ಒಕ್ಕೂಟ ಸ್ಥಾಪನೆಯಾಗುತ್ತಿರುವುದು ಸಂತೋಷದ ವಿಷಯ. ನಮ್ಮ ಯುವ ಪೀಳಿಗೆಗೆ ನಮ್ಮ ಸಂಸ್ಕøತಿಯನ್ನು ಪರಿಚಯಿಸುವ ಕೆಲಸವಾಗಬೇಕಿದೆ ಎಂದರು.
ಯುವ ಒಕ್ಕೂಟದ ವಿಶೇಷ ಸಲಹೆಗಾರರು ಹಾಗೂ ಭಾಗಮಂಡಲ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹೊಸೂರು ಸತೀಶ್‍ಕುಮಾರ್ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಯುವಜನತೆ ಮಾದಕ ವಸ್ತುಗಳ ಚಟಕ್ಕೆ ಬಲಿಯಾಗುತ್ತಿದ್ದು ನಮ್ಮ ಊರಿನಲ್ಲಿಯೂ ಇದು ನಡೆಯುತ್ತಿರುವುದು ವಿಷಾದಕರ ಎಂದರು.
ಯುವಕರು ವಿದ್ಯಾಭ್ಯಾಸವನ್ನು ಉತ್ತಮ ರೀತಿಯಲ್ಲಿ ಪೂರೈಸಿ ತಾವು ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕೆಂಬ ಆಶಯಕ್ಕೆ ಕೈಜೋಡಿಸಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಒಕ್ಕೂಟದ ಅಧ್ಯಕ್ಷರಾದ ಕಿಶೋರ್ ಕುದುಕುಳಿ ಮಾತನಾಡಿ 2019 ರ ಜುಲೈ 6ರಂದು ಸ್ಥಾಪನೆಯಾದ ಈ ಗೌಡ ಯುವ ಒಕ್ಕೂಟ ಮಳೆಯ ಕಾರಣದಿಂದಾಗಿ ತಡವಾಗಿ ಉದ್ಘಾಟನೆಯಾಗುತ್ತಿದೆ. ಗೌಡ ಸಂಸ್ಕøತಿಯ ಪೋಷಣೆ, ಪರಸ್ಪರ ಸಹಬಾಳ್ವೆ ನಾಡಿನ ಸೇವೆ ಹೊರತು ಜನಾಂಗ ಸಂಘರ್ಷ ಅಲ್ಲ. ಇದು ನಮ್ಮ ಧ್ಯೇಯ ಆಗಿರುತ್ತದೆ ಎಂದರು.
ಜನಾಂಗದ ಯುವ ಜನರನ್ನು ಒಗ್ಗೂಡಿಸಿ ಅವರಲ್ಲಿ, ಕಲೆ, ಸಾಹಿತ್ಯ, ಶಿಕ್ಷಣ, ಕ್ರೀಡೆ ಹಾಗೂ ಸಾಂಸ್ಕøತಿಕ ಚಟುವಟಿಕೆಗಳನ್ನು ನಡೆಸಲು ಸಹಕಾರಿಯಾಗಲು ಯುವ ಒಕ್ಕೂಟವನ್ನು ಸ್ಥಾಪನೆ ಮಾಡಲಾಗಿದೆ. ಅಲ್ಲದೆ ಪ್ರಕೃತಿ ವಿಕೋಪ ಸೇರಿದಂತೆ ಇತರ ತುರ್ತು ಸಂದರ್ಭಗಳಲ್ಲಿ ಜನ ಸೇವೆಗೆ ಸಂಘಟನೆ ವತಿಯಿಂದ ಕೈಜೋಡಿಸಲು ಪ್ರಯತ್ನಿಸಲಾಗುವುದು. ನಮ್ಮ ಸಂಸ್ಕøತಿಯ ಬಗ್ಗೆ ಯುವಜನಾಂಗಕ್ಕೆ ಸಾಕಷ್ಟು ಮಾಹಿತಿಯ ಕೊರತೆ ಇದ್ದು ಈ ಬಗ್ಗೆ ತರಬೇತಿ ನೀಡಲು ಒಕ್ಕೂಟದ ವತಿಯಿಂದ ಕಾರ್ಯಾಗಾರ ರೂಪಿಸಲಾಗುವುದು ಎಂದು ತಿಳಿಸಿದರು.
ಪ್ರಾಸ್ತವಿಕವಾಗಿ ಮಾತನಾಡಿದ ಭಾಗಮಂಡಲ ನಾಡು ಗೌಡ ಒಕ್ಕೂಟದ ಉಪಾಧ್ಯಕ್ಷ ಹಾಗೂ ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯಾ ಅಕಾಡೆಮಿ ನಿರ್ದೇಶಕ ಡಾ.ಕೂಡಕಂಡಿ ದಯಾನಂದ ಸ್ವಾತಂತ್ರ್ಯ ಹೋರಾಟ ಹಾಗೂ ದೇಶ ಸೇವೆಗೆ ಅನೇಕ ಜನರನ್ನು ಕೊಡುಗೆ ನೀಡಿದ ಜನಾಂಗ ನಮ್ಮದಾಗಿದ್ದು ಎಲ್ಲರನ್ನು ಸಾಮರಸ್ಯದಿಂದ ಕಾಣುತ್ತಾ ಗೌರವಿಸುತ್ತಾ ಸಮಾಜದಲ್ಲಿ ಸಹಬಾಳ್ವೆಯೊಂದಿಗೆ ಯುವ ಪ್ರತಿಭೆಗಳನ್ನು ಮುಂದೆ ತರುವ ನಿಟ್ಟಿನಲ್ಲಿ ಒಂದು ಒಕ್ಕೂಟ ಸ್ಥಾಪಿಸಲಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಸೂರ್ತಲೆ ಸೋಮಣ್ಣ, ಕೊಡಗು ಗೌಡಯುವ ವೇದಿಕೆಯ ಅಧ್ಯಕ್ಷ ಪೈಕರ ಮನೋಹರ ಮಾದಪ್ಪ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಗೌಡ ಸಮಾಜದ ಅಧ್ಯಕ್ಷÀ ಪಳಂಗಪ್ಪ, ಒಕ್ಕೂಟದ ಗೌರವ ಕಾರ್ಯದರ್ಶಿ ಚಲನ್ ನಿಡ್ಯಮಲೆ ಉಪಸ್ಥಿತರಿದ್ದರು.
ಒಕ್ಕೂಟದ ವತಿಯಿಂದ ಹತ್ತನೇ ತರಗತಿಯಲ್ಲಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಿ ಸನ್ಮಾನಿಸಲಾಯಿತು. ಅತಿ ಹೆಚ್ಚು ಅಂಕಗಳಿಸಿದ ಹತ್ತನೇ ತರಗತಿ ವಿದ್ಯಾರ್ಥಿಗಳಾದ ಚೇರಂಬಾಣೆಯ ರಾಜರಾಜೇಶ್ವರಿ ಶಾಲೆಯ ತೊತ್ತಿಯನ ಪ್ರಕೃತಿ ವಿನೀತ್ ಹಾಗೂ ಹೊಸಮನೆ ಅನನ್ಯ ಮತ್ತು ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಅರುಣ ಪದವಿಪೂರ್ವ ಕಾಲೇಜಿನ ಶ್ವೇತ ಕೂಡಕಂಡಿ ಹಾಗೂ ವಿದ್ಯಾಶ್ರೀ ಅಮೆಮನೆ ಅವರನ್ನು ಸನ್ಮಾನಿಸಲಾಯಿತು. ಚೇತನ್ ಕೂಡಕಂಡ ಹಾಗೂ ಚೈತ್ರ ಕುದುಕುಳಿ ಕಾರ್ಯಕ್ರಮ ನಿರೂಪಿಸಿದರು. ಸುಧೀರ್ ಕುಮಾರ್ ಹೊದೆಟ್ಟಿ ಸ್ವಾಗತಿಸಿದರು. ಕಲ್ಪನಾ ಹೊಸಗದ್ದೆ ವಂದಿಸಿದರು.
• ಸುನಿಲ್ ಕುಯ್ಯಮುಡಿ * ಸುಧೀರ್