ಗಾಂಧಿ ಆದರ್ಶ ಪ್ರತಿಯೊಬ್ಬರೂ ಪಾಲಿಸಿ : ಬಿ.ಜಿ.ಅನಂತಶಯನ ಕರೆ

02/10/2020

ಮಡಿಕೇರಿ ಅ.2 : ಮಹಾತ್ಮ ಗಾಂಧೀಜಿ ಅವರ ತತ್ವ ಮತ್ತು ಆದರ್ಶಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕು ಎಂದು ಕೊಡಗು ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷರಾದ ಬಿ.ಜಿ.ಅನಂತಶಯನ ಅವರು ಕರೆ ನೀಡಿದ್ದಾರೆ.
ಮಹಾತ್ಮ ಗಾಂಧೀಜಿಯರ 152 ನೇ ಜನ್ಮ ವರ್ಷಾಚರಣೆ ಪ್ರಯುಕ್ತ ನಗರದ ಗಾಂಧೀ ಮಂಟಪ ಬಳಿ ಸರ್ವೋದಯ ಸಮಿತಿ ವತಿಯಿಂದ ಶುಕ್ರವಾರ ಪ್ರೌಢಶಾಲಾ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ಏರ್ಪಡಿಸಿದ್ದ ‘ದೇಶಭಕ್ತಿ ಗೀತೆ’ ಸ್ಪರ್ಧಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಮಹಾತ್ಮ ಗಾಂಧೀಜಿಯವರ ತತ್ವ ಆದರ್ಶಗಳನ್ನು ದೇಶದಲ್ಲಿ ಮಾತ್ರವಲ್ಲ ವಿದೇಶದಲ್ಲಿಯೂ ಸಹ ಅನುಸರಿಸುತ್ತಾರೆ. ಗಾಂಧೀಜಿಯವರ ಚಿಂತನೆ ಮತ್ತು ತತ್ವ ಆದರ್ಶಗಳು ಸಾರ್ವಕಾಲಿಕ ಎಂದು ಅನಂತಶಯನ ಬಣ್ಣಿಸಿದರು.
ಗಾಂಧೀಜಿ ಅವರ ತತ್ವಗಳು ಇಡೀ ವಿಶ್ವಕ್ಕೆ ಮಾದರಿಯಾಗಿದ್ದು, ನೆಲ್ಸನ್ ಮಂಡೇಲ ಸೇರಿದಂತೆ ಹಲವು ಮಹಾನ್ ವ್ಯಕ್ತಿಗಳು ಅವರ ಚಿಂತನೆಯನ್ನು ಅಳವಡಿಸಿಕೊಂಡು, ಇಡೀ ವಿಶ್ವಕ್ಕೆ ಪಸರಿಸಿದ್ದಾರೆ ಎಂದರು
ಜೀವನದಲ್ಲಿ ಅಹಿಂಸೆಯನ್ನು ಆದರ್ಶವನ್ನಾಗಿಟ್ಟುಕೊಂಡು ಬಾಳಿದ ಮಹಾತ್ಮ ಗಾಂಧೀಜಿ ಅವರು ಸತ್ಯ, ಅಹಿಂಸೆ ಮತ್ತು ಶಾಂತಿ ಮಾರ್ಗದ ಮೂಲಕ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟರು. ಸತ್ಯ ಶೋಧನೆಯಿಂದ ಮಾತ್ರ ಗುರಿ ತಲುಪಲು ಸಾಧ್ಯ ಎಂಬುದನ್ನು ಸಾರಿ ಹೇಳಿದ್ದರು ಎಂದು ಅನಂತಶಯನ ಅವರು ನುಡಿದರು.
ಭಾರತಕ್ಕೆ ಸ್ವಾತಂತ್ರ್ಯ ಕೊಡಿಸಬೇಕು ಎಂಬ ಗುರಿಯನ್ನು ಮಹಾತ್ಮ ಗಾಂಧೀಜಿ ಅವರು ಹೊಂದಿದ್ದರು. ಆ ದಿಸೆಯಲ್ಲಿ ಜನರೇ ಗಾಂಧೀಜಿಯವರನ್ನು ಹಿಂಬಾಲಿಸಿದರು. ಅಂತಹ ಮಾದರಿ ಜೀವನ ನಮ್ಮದಾಗಬೇಕು ಎಂದರು.
ಸರ್ವೋದಯ ಸಮಿತಿ ಅಧ್ಯಕ್ಷರಾದ ಅಂಬೆಕಲ್ ಕುಶಾಲಪ್ಪ ಅವರು ಮಾತನಾಡಿ ಮಹಾತ್ಮ ಗಾಂಧೀಜಿಯವರು ಇಡೀ ವಿಶ್ವಕ್ಕೆ ಮಾದರಿ ಎಂದು ವರ್ಣಿಸಿದರು.
ಪೌರಾಯುಕ್ತರಾದ ಎಸ್.ವಿ ರಾಮದಾಸ್ ಅವರು ಮಾತನಾಡಿ ಮಹಾತ್ಮ ಗಾಂದೀಜಿಯವರ ನನ್ನ ಜೀವನವೇ ನನ್ನ ಸಂದೇಶ ಎಂಬುದನ್ನು ಪ್ರತಿಯೊಬ್ಬರು ಅರ್ಥ ಮಾಡಿಕೊಳ್ಳಬೇಕು ಎಂದರು.
ಮಹಾತ್ಮ ಗಾಂಧೀಜಿ ಅವರು ಸ್ವಚ್ಚತೆಗೆ ಹೆಚ್ಚಿನ ಒತ್ತು ನೀಡಿದ್ದರು. ಆ ನಿಟ್ಟಿನಲ್ಲಿ ನಮ್ಮ ಸುತ್ತಮುತ್ತಲಿನ ಪರಿಸರ ಶುಚಿತ್ವಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದರು.
ಸರ್ವೋದಯ ಸಮಿತಿ ಕಾರ್ಯದರ್ಶಿ ಕೆ.ಟಿ.ಬೇಬಿಮ್ಯಾಥ್ಯು ಅವರು ಮಾತನಾಡಿ ಶಾಂತಿ, ಸತ್ಯ, ಅಹಿಂಸೆ ಮಾರ್ಗದ ಮೂಲಕ ಜಗತ್ತನ್ನು ಗೆಲ್ಲಬಹುದು ಎಂಬ ಸಂದೇಶ ಸಾರಿದ ಮಹಾತ್ಮ ಗಾಂಧೀಜಿ ಅವರು ಇಡೀ ವಿಶ್ವಕ್ಕೆ ಪಿತಾಮಹ ಎಂದರು.
ಗಾಂಧೀಜಿಯವರ ವಿಚಾರಧಾರೆಗಳು ಹಾಗೂ ಸ್ವಾತಂತ್ರ್ಯ ಪೂರ್ವದ ಆಂದೋಲನಗಳನ್ನು ಮಕ್ಕಳಿಗೆ ತಿಳಿಸಬೇಕು. ಗಾಂಧೀಜಿಯವರ ವಿಚಾರಧಾರೆಗಳು ಇಂದಿನ ಯುವಜನರಿಗೆ ಪ್ರೇರಣೆಯಾಗಬೇಕು ಎಂದರು.
ಡಿವೈಎಸ್‍ಪಿ ದಿನೇಶ್ ಕುಮಾರ್, ಉಪಾಧ್ಯಕ್ಷರಾದ ಸ್ವರ್ಣಲತಾ ಹಾಗೂ ಟಿ.ಎಂ.ಮುದ್ದಯ್ಯ, ಖಜಾಂಚಿ ಕೋಡಿ ಚಂದ್ರಶೇಖರ್ ಇತರರು ಇದ್ದರು.
ಈ ಸಂದರ್ಭ ವೈಷ್ಣವ ಜನತೋ ಗೀತೆಯನ್ನು ಸರ್ವೋದಯ ಸಮಿತಿ ಸದಸ್ಯರಾದ ಲಿಯಾಖತ್ ಅಲಿ ಅವರು ಹಾಡಿದರು. ಲಿಟ್ಲ್ ಫ್ಲವರ್ ವಿದ್ಯಾ ಸಂಸ್ಥೆ ವಿದ್ಯಾರ್ಥಿಗಳಿಂದ ರಘುಪತಿ ರಾಘವ ಗೀತೆ ಗಾಯನ ನಡೆಯಿತು. ಸರ್ವೋದಯ ಸಮಿತಿ ಪ್ರಧಾನ ಕಾರ್ಯದರ್ಶಿ ಎಸ್.ಐ.ಮುನೀರ್ ಅಹಮದ್ ಅವರು ಸ್ವಾಗತಿಸಿದರು. ಸದಸ್ಯರಾದ ವಿಲ್ಫ್ರೆಡ್ ಕ್ರಸ್ತಾ ಅವರು ನಿರೂಪಿಸಿದರು. ಲಿಯಾಖತ್ ಅಲಿ ಮತ್ತು ಪ್ರೀತಾ ಅವರು ದೇಶಭಕ್ತಿ ಗೀತೆ ತೀರ್ಪುಗಾರರಾಗಿದ್ದರು.
ಸನ್ಮಾನ: ಸ್ಪರ್ಧಾ ಕಾರ್ಯಕ್ರಮಕ್ಕೂ ಮೊದಲು ರಾಜ್ಯ ಮಟ್ಟದ ಉತ್ತಮ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ನಗರದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಶಿಕ್ಷಕಿ ರೇವತಿ ರಮೇಶ್ ಅವರನ್ನು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಮತ್ತು ಜಿ.ಪಂ ಸಿಇಒ ಭನ್ವರ್ ಸಿಂಗ್ ಮೀನಾ ಅವರು ಶಾಲು, ಹಾರ ಮತ್ತು ಫಲತಾಂಬೂಲವನ್ನು ನೀಡಿ ಸನ್ಮಾನಿಸಿದರು. ಸರ್ವೋದಯ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರು ಇತರರು ಹಾಜರಿದ್ದರು.