ಸೋಮವಾರಪೇಟೆಯಲ್ಲಿ ‘ಸೂರಿಗಾಗಿ ಸಮರ’ ಪ್ರತಿಭಟನೆಗೆ ಚಾಲನೆ

ಸೋಮವಾರಪೇಟೆ ಅ.2 : ನಿವೇಶನ ರಹಿತರಿಗೆ ನಿವೇಶನ ಒದಗಿಸುವಂತೆ ಆಗ್ರಹಿಸಿ ಎಐಟಿಯುಸಿ ಮತ್ತು ಸಿಪಿಐ ನೇತೃತ್ವದಲ್ಲಿ ಪಟ್ಟಣದ ಗಾಂಧಿ ಪ್ರತಿಮೆ ಎದುರು ‘ಸೂರಿಗಾಗಿ ಸಮರ’ ಪ್ರತಿಭಟನೆಗೆ ಚಾಲನೆ ನೀಡಲಾಯಿತು.
ಸಿಪಿಐ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್ ಅವರು ಚಾಲನೆ ನೀಡಿ ಮಾತನಾಡಿ, ಜಿಲ್ಲೆಯ ವಸತಿ ಹೀನರ ಮರು ಸಮೀಕ್ಷೆ ನಡೆಸಬೇಕು. ವಸತಿಹೀನ ಬಡ ಕುಟುಂಬಗಳಿಗೆ ವಸತಿ ಸೌಲಭ್ಯ ಕಲ್ಪಿಸಬೇಕು. ವಸತಿ ಯೋಜನೆಗೆ ಅಗತ್ಯವಾಗಿರುವ ಜಮೀನನ್ನು ಸರ್ಕಾರ ಕೂಡಲೇ ಗುರುತಿಸಿ ಅದನ್ನು ವಸತಿ ಯೋಜನೆಗೆಂದೇ ಕಾಯ್ದಿರಿಸಬೇಕು ಎಂದು ಆಗ್ರಹಿಸಿ ಜಿಲ್ಲೆಯಲ್ಲಿ ಗ್ರಾ.ಪಂ.ಗಳ ಎದುರು ಪ್ರತಿಭಟನೆ ನಡೆಯಲಿದೆ ಎಂದರು.
ಎಐಟಿಯುಸಿ ಜಿಲ್ಲಾಧ್ಯಕ್ಷ ಹೆಚ್.ಎಂ. ಸೋಮಪ್ಪ ಮಾತನಾಡಿ, ಕೊಡಗಿನಲ್ಲೂ ಟಾಟಾ ಕಾಫಿ ಸಂಸ್ಥೆ, ಎ.ಜೆ. ಗ್ರೂಪ್ ಸೇರಿದಂತೆ ತೋಟ ಮಾಲೀಕರು ಪೈಸಾರಿ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಇವುಗಳನ್ನು ತೆರವುಗೊಳಿಸಿ ನಿವೇಶನ ರಹಿತರಿಗೆ ನೀಡುವಂತೆ ಅನೇಕ ಬಾರಿ ಒತ್ತಾಯಿಸಿದ್ದರೂ ಪ್ರಯೋಜನ ಶೂನ್ಯವಾಗಿದೆ ಎಂದು ಆರೋಪಿಸಿದರು.
ತಾ. 3 ರಂದು ಮಾದಾಪುರ, ಕಂಬಿಬಾಣೆ, ತಾ. 5ರಂದು ಸುಂಟಿಕೊಪ್ಪ, ಕೆದಕಲ್ ಗ್ರಾಮ ಪಂಚಾಯಿತಿಗಳ ಎದುರು ಪ್ರತಿಭಟನೆ ನಡೆಸಿ, ನಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವದು ಎಂದು ತಿಳಿಸಿದರು.
ಈ ಸಂದರ್ಭ ಸಿಪಿಐ ಜಿಲ್ಲಾ ಕಾರ್ಯದರ್ಶಿ ಕೆ.ವಿ. ಸುನಿಲ್, ದಸಂಸ ಮುಖಂಡರಾದ ಜಯಪ್ಪ ಹಾನಗಲ್ಲು, ಸಿಪಿಐ ಮುಖಂಡರಾದ ವಿ.ಆರ್. ರಜನಿಕಾಂತ್, ಎನ್. ಮಣಿ, ಹೆಚ್.ಜಿ. ಗೋಪಾಲ್, ಶಮೀರ್, ಲೋಹಿತ್ ಕುಮಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.