ಅತ್ಯಾಚಾರ ಪ್ರಕರಣ : ಕೊಡಗು ಕಾಂಗ್ರೆಸ್ ಪ್ರತಿಭಟನೆ

ಮಡಿಕೇರಿ ಅ.3 : ಉತ್ತರ ಪ್ರದೇಶದಲ್ಲಿ ದಲಿತ ಯುವತಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಕಾಂಗ್ರೆಸ್ ನಾಯಕರನ್ನು ಬಂಧಿಸಿದ ಕ್ರಮವನ್ನು ಖಂಡಿಸಿ ಜಿಲ್ಲಾ ಕಾಂಗ್ರೆಸ್ ಸಮಿತಿ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಿತು.
ನಗರದ ಇಂದಿರಾಗಾಂಧಿ ವೃತ್ತದಲ್ಲಿ ಜಮಾಯಿಸಿದ ಕಾಂಗ್ರೆಸ್ ಪ್ರಮುಖರು ಹಾಗೂ ಕಾರ್ಯಕರ್ತರು ಬಿಜೆಪಿ ನೇತೃತ್ವದ ಸರ್ಕಾರಗಳ ವಿರುದ್ಧ ಘೋಷಣೆಗಳನ್ನು ಕೂಗಿ ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭ ಮಾತನಾಡಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ.ಕೆ.ಮಂಜುನಾಥ್ ಕುಮಾರ್, ಉತ್ತರ ಪ್ರದೇಶದ ಹಾತ್ರಾಸ್ ದಲಿತ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಪ್ರಕರಣ ಸಂಬಂಧ ಸಂತ್ರಸ್ತ ಯುವತಿಯ ಕುಟುಂಬಸ್ಥರನ್ನು ಭೇಟಿ ಮಾಡಲು ಉತ್ತರ ಪ್ರದೇಶದ ಹತ್ರಾಸ್ ಗೆ ತೆರಳುತ್ತಿದ್ದ ಕಾಂಗ್ರೆಸ್ ನ ರಾಷ್ಟ್ರೀಯ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಪೊಲೀಸರು ವಶಕ್ಕೆ ಪಡೆದಿರುವುದನ್ನು ಕೊಡಗು ಜಿಲ್ಲಾ ಕಾಂಗ್ರೆಸ್ ಖಂಡಿಸುತ್ತದೆ ಎಂದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರ ಸರ್ವಾಧಿಕಾರಿ ಧೋರಣೆಯನ್ನು ಅನುಸರಿಸುವ ಮೂಲಕ ನೂತನ ಮಸೂದೆಗಳನ್ನು ಜಾರಿಗೆ ತಂದು ಕೃಷಿಕರು ಹಾಗೂ ಕಾರ್ಮಿಕರಿಗೆ ಅನ್ಯಾಯ ಮಾಡುತ್ತಿದೆ. ದೇಶ ಮತ್ತು ಸಮಾಜದ ಹಿತ ಕಾಯುವ ಕೆಲಸವನ್ನು ಸರ್ಕಾರಗಳು ಮಾಡುತ್ತಿಲ್ಲವೆಂದು ಟೀಕಿಸಿದರು. ಜನವಿರೋಧಿ ನೀತಿಗಳ ವಿರುದ್ಧ ಸಂಘಟನಾತ್ಮಕ ಹೋರಾಟದ ಅಗತ್ಯವಿದ್ದು, ಜಿಲ್ಲೆಯ ಜನರು ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಕಾಂಗ್ರೆಸ್ ಕಿಸಾನ್ ಘಟಕದ ಜಿಲ್ಲಾಧ್ಯಕ್ಷ ನೆರವಂಡ ಉಮೇಶ್, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಸಂಯೋಜಕ ತೆನ್ನಿರಾ ಮೈನ, ಮಡಿಕೇರಿ ನಗರ ಮಹಿಳಾ ಅಧ್ಯಕ್ಷೆ ಪಾರ್ವತಿ ಫ್ಯಾನ್ಸಿ ಪಾರ್ವತಿ, ಪ್ರಮುಖರಾದ ಉದಯ, ಗಿಲ್ಬರ್ಟ್, ಅಲ್ಪಸಂಖ್ಯಾತರ ಘಟಕ ಸೇರಿದಂತೆ ವಿವಿಧ ಘಟಕಗಳ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

