ಅರಂತೋಡು-ತೊಡಿಕಾನ ಸಹಕಾರಿ ಸಂಘಕ್ಕೆ ಸಹಕಾರಿ ಸಚಿವ ಎಸ್.ಟಿ.ಸೋಮಶೇಖರ್ ಭೇಟಿ

03/10/2020

ಮಡಿಕೇರಿ ಅ. 3 : ಅರಂತೋಡು ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಸಹಕಾರಿ ಸಚಿವ ಎಸ್.ಟಿ.ಸೋಮಶೇಖರ್ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
ಕಾರ್ಯಕ್ರಮ ನಿಮಿತ್ತ ಪುತ್ತೂರಿಗೆ ಬರುತ್ತಿದ್ದ ಸಚಿವರನ್ನು ಅರಂತೋಡಿನಲ್ಲಿ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ಉಪಾಧ್ಯಕ್ಷ ದಯಾನಂದ ಕುರುಂಜಿ, ಸಹಕಾರಿ ಸಂಘದ ಉಪನಿಬಂಧಕ ಪ್ರವೀಣ್ ನಾಯಕ್, ಸುಳ್ಯ ತಾ.ಪಂ ಉಪಾಧ್ಯಕ್ಷೆ ಪುಷ್ಪಾ ಮೇದಪ್ಪ, ಸಹಕಾರಿ ಸಂಘಗಳ ಯೂನಿಯನ್ ಅಧ್ಯಕ್ಷ ರಮೇಶ್ ದೇಲಂಪಾಡಿ ಅವರು ಪುಷ್ಪ ಗುಚ್ಛ ನೀಡಿ ಸ್ವಾಗತಿಸಿದರು.
ಬಳಿಕ ಸಹಕಾರಿ ಸಂಘದ ವತಿಯಿಂದ ನಡೆಸಲಾಗುತ್ತಿರುವ ಸಮೃದ್ಧಿ ಮಾರ್ಟ್‍ಗೆ ಭೇಟಿ ನೀಡಿ ಶ್ಲಾಘನೆ ವ್ಯಕ್ತಪಡಿಸಿದ್ದರು. ಸಹಕಾರಿ ಸಂಘದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸಹಕಾರಿ ಯೂನಿಯನ್ ಸಂಘದ ಅಧ್ಯಕ್ಷ ರಮೇಶ್ ದೇಲಂಪಾಡಿ ನೇತೃತ್ವದ ತಂಡ ದಿಂದ ಸಾಲಮನ್ನಾ ಸೇರಿದಂತೆ ಇನ್ನಿತರ ಅಗತ್ಯ ಬೇಡಿಕೆಗಳ ಮನವಿ ಸಲ್ಲಿಸಿದರು. ವಸಂತ ಭಟ್ ತೊಡಿಕಾನ ಅವರು ತಾಳೆಬೆಳೆಗೆ ಉತ್ತೇಜನದ ಬಗ್ಗೆ ಮನವಿ ಸಲ್ಲಿಸಿದರು.
ಅಡಿಕೆ ಹಳದಿರೋಗ ಹಾಗೂ ಈ ಭಾಗದ ಕೃಷಿಕರಿಗೆ ವಿಶೇಷ ಪ್ಯಾಕೇಜ್ ನೀಡುವಂತೆ ಸುಳ್ಯ ಎ.ಪಿ.ಎಂ.ಸಿ.ಅಧ್ಯಕ್ಷ ದೀಪಕ್ ಕುತ್ತಮೊಟ್ಟೆ ಅವರು ಸಚಿವರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ವಾಸುದೇವ ನಾಯಕ್, ನೆಲ್ಲೂರು ಕೆಮ್ರಾಜೆ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ವಿಷ್ಣುಭಟ್, ಬಿಜೆಪಿ ನಾಯಕ ಹರೀಶ್ ರೈ ಉಬರಡ್ಕ, ಸಹಕಾರಿ ಸಂಘದ ನಿರ್ದೇಶಕರಾದ ವಿನೋದ್, ಕುಸುಮಾಧರ, ಕೇಶವ, ವಿಜೇತ್ ಮರುವಳ, ಅರಂತೋಡು ಹಾಲು ಉತ್ಪದಕರ ಸಂಘದ ಉಪಾಧ್ಯಕ್ಷರಾದ ಮತಿ ಭಾರತಿ ಉಳುವಾರು, ಬಿಜೆಪಿ ಮಹಿಳಾ ಮೋರ್ಚಾ ಸಮಿತಿ ಪ್ರಧಾನ ಕಾರ್ಯದರ್ಶಿ ಗೀತಾ ಶೇಖರ್ ಉಳುವಾರು, ಕಿಶೋರ್ ಕುಮಾರ್ ಉಳುವಾರು ಸೇರಿದಂತೆ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.