ಯುಪಿ ಸರ್ಕಾರದ ವಜಾಕ್ಕೆ ಕಾಂಗ್ರೆಸ್ ಒತ್ತಾಯ

03/10/2020

ಮಡಿಕೇರಿ ಅ.3 : ಉತ್ತರ ಪ್ರದೇಶದಲ್ಲಿ ದಲಿತ ಯುವತಿಯ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಪ್ಪು ಚುಕ್ಕೆಯಾಗಿದ್ದು, ಸ್ಥಳೀಯ ಸರ್ಕಾರ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆಯೆಂದು ಆರೋಪಿಸಿರುವ ಕೆಪಿಸಿಸಿ ವಕ್ತಾರ ಹಾಗೂ ಮಾಹಿತಿ ಹಕ್ಕು ಘಟಕದ ರಾಜ್ಯಾಧ್ಯಕ್ಷ ಎ.ಎಸ್.ಪೊನ್ನಣ್ಣ, ಸರ್ಕಾರವನ್ನು ವಜಾಗೊಳಿಸಬೇಕೆಂದು ಒತ್ತಾಯಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವುದೇ ಸರ್ಕಾರವಿದ್ದರು, ಜನಹಿತ ಕಾಯುವುದಕ್ಕಾಗಿ ಮೊದಲು ಕಾನೂನು ಸುವ್ಯವಸ್ಥೆಗೆ ಆದ್ಯತೆ ನೀಡಬೇಕು. ಈ ವಿಚಾರದಲ್ಲಿ ಉತ್ತರ ಪ್ರದೇಶ ಸರ್ಕಾರ ವಿಫಲವಾಗಿದೆ ಎಂದು ಟೀಕಿಸಿದರು. ತಕ್ಷಣ ರಾಷ್ಟ್ರಪತಿಗಳು ಹಾಗೂ ಪ್ರಧಾನಮಂತ್ರಿಗಳು ಮಧ್ಯ ಪ್ರವೇಶ ಮಾಡಿ ಅಲ್ಲಿನ ಸರ್ಕಾರವನ್ನು ಕಿತ್ತೊಗೆಯಬೇಕೆಂದು ಒತ್ತಾಯಿಸಿದರು.
ದಲಿತ ಯುವತಿಯ ಮೇಲೆ ನಡೆದ ದೌರ್ಜನ್ಯದಿಂದ ದುಃಖ ತಪ್ತರಾಗಿರುವ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಲು ಹೋಗಿದ್ದ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ವಾದ್ರಾ ಅವರನ್ನು ಪೊಲೀಸರು ನಿಯಮ ಬಾಹಿರವಾಗಿ ಬಂಧಿಸಿರುವುದು ಖಂಡನೀಯವೆಂದು ಅಸಮಾಧಾನ ವ್ಯಕ್ತಪಡಿಸಿದರು.
::: ಮಸೂದೆ ಸರಿ ಇಲ್ಲ :::
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಎರಡು ಕೃಷಿ ಮಸೂದೆಗಳು ಕೃಷಿ ಕ್ಷೇತ್ರದಲ್ಲಿ ಖಾಸಗೀಕರಣದ ಪ್ರವೇಶಕ್ಕೆ ಆಹ್ವಾನ ನೀಡಿದಂತಾಗಿದೆ. ದೇಶದ ಎಲ್ಲಾ ಕ್ಷೇತ್ರಗಳನ್ನು ಖಾಸಗೀಕರಣಗೊಳಿಸುತ್ತಿರುವ ಕೇಂದ್ರ ಸರ್ಕಾರ ರೈತರ ಹಕ್ಕನ್ನು ಕಸಿದುಕೊಂಡು ಖಾಸಗಿ ವ್ಯಕ್ತಿಗಳ ವಶಕ್ಕೆ ನೀಡುವ ತಂತ್ರ ರೂಪಿಸಿದೆ. ಎರಡು ಮಸೂದೆಗಳಲ್ಲಿಯೂ ರೈತರ ಅಭ್ಯುದಯದ ಬಗ್ಗೆ ಉಲ್ಲೇಖವಿಲ್ಲ. ಖಾಸಗಿ ಸಂಸ್ಥೆಗಳಿಗೆ ಲಾಭ ಮಾಡಿಕೊಡುವ ಉದ್ದೇಶಕ್ಕಾಗಿ ಮಸೂದೆಯನ್ನು ಜಾರಿಗೆ ತರಲಾಗಿದೆ ಎಂದು ಆರೋಪಿಸಿರುವ ಅವರು, ಈ ಬಗ್ಗೆ ರೈತರು ಹಾಗೂ ದೇಶದ ಜನತೆ ಎಚ್ಚೆತ್ತುಕೊಳ್ಳಬೇಕು ಮತ್ತು ಮಸೂದೆ ವಿರುದ್ಧ ಹೋರಾಟ ರೂಪಿಸಬೇಕು ಎಂದು ತಿಳಿಸಿದರು.
ಒಂದು ವೇಳೆ ಸರ್ಕಾರ ಮಸೂದೆಯನ್ನು ಹಿಂಪಡೆಯದಿದ್ದಲ್ಲಿ ಕಾಂಗ್ರೆಸ್ ಪಕ್ಷದಿಂದ ಕಾನೂನು ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
::: ಕುರುಡು ಸರ್ಕಾರ :::
ಕೊಡಗಿನಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಯೋಜನೆಯ ಬಗ್ಗೆ ತಮಗೇನು ತಿಳಿದಿಲ್ಲವೆಂದು ಆರೋಗ್ಯ ಸಚಿವ ಶ್ರೀರಾಮುಲು ಅವರು ನೀಡಿದ ಹೇಳಿಕೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಪೊನ್ನಣ್ಣ, ಸಚಿವ ಶ್ರೀರಾಮುಲು ಅವರು ಕೊಡವ ಭಾಷೆಯಲ್ಲೇ ಮಲ್ಟಿ ಸ್ಪೆÉಷಾಲಿಟಿ ಆಸ್ಪತ್ರೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭರವಸೆ ನೀಡಿದ್ದರು. ಅಲ್ಲದೆ, ಸಂಸದ ಪ್ರತಾಪಸಿಂಹ ಅವರು ಕೂಡ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಬಗ್ಗೆ ವಿವರಿಸಿದ್ದಾರೆ ಎಂದರು.
ರಾಜ್ಯದಲ್ಲಿ ಕುರುಡು ಸರ್ಕಾರ ಮತ್ತು ಕುರುಡು ಆರೋಗ್ಯ ಸಚಿವರಿದ್ದಾರೆ ಎಂದು ಆರೋಪಿಸಿದ ಪೊನ್ನಣ್ಣ, ಸರ್ಕಾರ ತಕ್ಷಣ ಈ ಹಿಂದೆ ನೀಡಿದ ಭರವಸೆಯಂತೆ ಕೊಡಗು ಜಿಲ್ಲೆಗೆ ಆಗತ್ಯವಾಗಿ ಬೇಕಾಗಿರುವ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಯೋಜನೆಯನ್ನು ಅನುಷ್ಟಾನಗೊಳಿಸಬೇಕೆಂದು ಒತ್ತಾಯಿಸಿದರು.
ಶಾಸಕರೊಬ್ಬರು ಜಿಲ್ಲೆಯ ರಸ್ತೆಗಳು ಮೇಲ್ದರ್ಜೆಗೇರುತ್ತದೆ ಎಂದು ಹೇಳಿಕೆ ನೀಡಿದ್ದಾರೆ. ಆದರೆ, ಜಿಲ್ಲೆಯಲ್ಲಿ ಮೂಲಭೂತವಾಗಿ ಬೇಕಾಗಿರುವ ರಸ್ತೆ ಮತ್ತು ಆಸ್ಪತ್ರೆಯ ವ್ಯವಸ್ಥೆಯೆ ಇಲ್ಲದಾಗಿದೆ ಎಂದು ಟೀಕಿಸಿದರು.
ತಮ್ಮ ಬಗ್ಗೆ ಜಿಲ್ಲಾ ಬಿಜೆಪಿ ಮಾಡಿರುವ ಟೀಕೆಗೆ ಸ್ಪಷ್ಟೀಕರಣ ನೀಡಿದ ಪೊನ್ನಣ್ಣ, ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಬಿಜೆಪಿಯ ಸಿ.ಪಿ.ಯೋಗೇಶ್ವರ್ ಅವರ ಪ್ರಕರಣದಲ್ಲಿ ಸಾಕಷ್ಟು ವ್ಯತ್ಯಾಸಗಳಿದೆ. ಶಿವಕುಮಾರ್ ಜನರಿಂದ ಆಯ್ಕೆಯಾಗಿ ಬಂದಿರುವ ಪ್ರತಿನಿಧಿಯಾಗಿದ್ದು, ಯೋಗೇಶ್ವರ್ ಅವರನ್ನು ಮೇಲ್ಮನೆಗೆ ನೇಮಕ ಮಾಡಲಾಗಿದೆ. ಕಾನೂನಿನ ಅರಿವಿಲ್ಲದೆ ಬಿಜೆಪಿ ಮಂದಿ ಹೇಳಿಕೆ ನೀಡುವುದು ಸರಿಯಲ್ಲವೆಂದು ಪೊನ್ನಣ್ಣ ಹೇಳಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಕೆ.ಮಂಜುನಾಥ್ ಕುಮಾರ್ ಮಾತನಾಡಿ, ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಮಾಧ್ಯಮಗಳನ್ನು ತನ್ನ ಕಪಿ ಮುಷ್ಠಿಯಲ್ಲಿಡಬೇಕೆನ್ನುವ ಹಠಕ್ಕೆ ಜೋತು ಬಿದ್ದಿದೆಯೆಂದು ಆರೋಪಿಸಿದರು. ಇತ್ತೀಚೆಗೆ ಟಿವಿ ಮಾಧ್ಯಮವೊಂದು ಮುಖ್ಯಮಂತ್ರಿಗಳ ಮೊಮ್ಮಗನ ಭ್ರಷ್ಟಾಚಾರವನ್ನು ಬಯಲಿಗೆಳೆದ ಕಾರಣಕ್ಕಾಗಿ ಚಾನಲ್‍ನ ಕಛೇರಿಯನ್ನು ಬಂದ್ ಮಾಡಿರುವುದಲ್ಲದೆ, ಎಲ್ಲಾ ದಾಖಲೆಗಳನ್ನು ನಿಯಮ ಬಾಹಿರವಾಗಿ ಕಸಿದು ಕೊಂಡಿರುವುದು ಖಂಡನೀಯವೆಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾ ವಕ್ತಾರರುಗಳಾದ ಟಾಟು ಮೊಣ್ಣಪ್ಪ, ಮುನೀರ್ ಅಹಮ್ಮದ್, ಟಿ.ಈ.ಸುರೇಶ್ ಹಾಗೂ ಕಾಂಗ್ರೆಸ್ ಕಿಸಾನ್ ಘಟಕದ ಜಿಲ್ಲಾಧ್ಯಕ್ಷ ನೆರವಂಡ ಉಮೇಶ್ ಉಪಸ್ಥಿತರಿದ್ದರು.